ಗುಜರಾತಿಗೆ ನಮೋ ಟಿವಿ, ತ ನಾಡಿಗೆ ಲೋಟಸ್ ಟಿವಿ

ಚುನಾವಣೆಗಾಗಿ ಸರ್ವ ಸಿದ್ಧತೆ ಆರಭಿಸಿರುವ ಬಿಜೆಪಿ, ನ(ರೇಂದ್ರ) ಮೋ(ದಿ) ಹೆಸರಿನ ಟಿವಿ ಚಾನೆಲ್ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದು, ಈಗಾಗಲೇ ಪರೀಕ್ಷಾರ್ಥ ಪ್ರಸಾರ ಆರಂಭವಾಗಿದೆ. ಗಮನಾರ್ಹವೆಂದರೆ ಇದೇ ವೇಳೆ ತಮಿಳುನಾಡಿನಲ್ಲೂ ಇದೇ 11ರ ವೇಳೆಗೆ 'ಲೋಟಸ್ ಟಿವಿ' ಆರಂಭಿಸಲು ಬಿಜೆಪಿ ಚಿಂತನೆ ನಡೆಸಿದೆ. ಹಾಗಾದರೆ ಮೋದಿ ಚುನಾವಣೆ ಪ್ರಣಾಳಿಕೆಯಲ್ಲಿ 'ಉಚಿತ ಟಿವಿ ಸೆಟ್‌ಗಳ ಕೊಡುಗೆ' ಇರುತ್ತದಾ!?
ಈ ಮಧ್ಯೆ, ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟುವುದಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಹೇಳುತ್ತಿದ್ದಾರೆ. ಮಾಧ್ಯಮಗಳಿಂದ ತಾನು ಅಪಪ್ರಚಾರಕ್ಕೀಡಾಗುತ್ತಿರುವುದಾಗಿ ಆಗಾಗ ಗೊಣಗುವ ಯಡಿಯೂರಪ್ಪನವರು ಈ ಭಾರಿ ಸ್ವಂತದ್ದೊಂದು ಟಿವಿ ಚಾನೆಲ್ ಆರಂಭಿಸುತ್ತಾರಾ?
ಹಾಗೆ ನೋಡಿದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಂದರ್ಶನ ನ್ಯೂಸ್ ಬೈಟ್ ಟಿವಿಯಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಹಾಗೆಂದು ಅವರು ಟಿವಿಯಿಂದ ದೂರ ಎಂದಲ್ಲ. ಆದರೂ ಟಿವಿ ಮಾಧ್ಯಮಕ್ಕೆ ನಮೋ ತುಸು ಬೇಡದವರು. ಹಾಗಾಗಿ ಚುನಾವಣೆ ಕಾಲದಲ್ಲಿ ಸ್ವತಃ ತಾವೇ ಟಿವಿ ಚಾನೆಲ್ ಪ್ರಾರಂಭಿಸಿದರೆ ಹೇಗೆ ಎಂಬ ಯೋಚನೆ ಬಂದಿದ್ದೇ ತಡ ಅವರು ಟಿವಿ ಪ್ರಾರಂಭಿಸಿಯೇ ಬಿಟ್ಟಿದ್ದಾರೆ. ಟಿವಿ ಚಾನೆಲ್ ಮೋದಿಗೇ ಮೀಸಲಾಗಿರುತ್ತದೆ. ಮತ್ತು ಅದರ ಹೆಸರು ಕೂಡ ಅವರ ಹೆಸರಿನಲ್ಲಿ 'ನಮೋ ಗುಜರಾತ್' ಎಂದಾಗಿದೆ.
ಕೆಲವೇ ದಿನಗಳಲ್ಲಿ ಮೋದಿ ಲೈವ್ ಆಗಿ ಕಾಣಿಸಿಕೊಳ್ಳುವ ಚಾನೆಲ್ ಪ್ರಾರಂಭವಾಗಲಿದೆ. ಈಗಾಗಲೇ ಕಾವೇರಿರುವ ಚುನಾವಣಾ ಪ್ರಚಾರಕ್ಕೆ ಇನ್ನಷ್ಟು ಬಿರುಸು ಕೊಡುವ ಉದ್ದೇಶದಿಂದ ಮೋದಿ ಚಾನೆಲ್ ಪ್ರಾರಂಭಿಸುತ್ತಿದ್ದಾರೆ. ರಾಜ್ಯವ್ಯಾಪಿಯಾಗಿ ಅವರು ನಡೆಸುವ ರ‍್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳು 'ನಮೋ ಗುಜರಾತ್'ನಲ್ಲಿ ನೇರ ಪ್ರಸಾರವಾಗಲಿವೆ.












Click it and Unblock the Notifications