ಚಿತ್ರದುರ್ಗ: ಭೀಕರ ಅಪಘಾತಕ್ಕೆ ಕೂಲಿಕಾರ್ಮಿಕರು ಬಲಿ
ಚಿತ್ರದುರ್ಗ, ಅ.1: ಲಾರಿ ಹಾಗೂ ಕ್ರೂಸರ್ ವಾಹನ (earth excavator ) ನಡುವೆ ಸೋಮವಾರ (ಅ.1) ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, 7 ಜನ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಈ ದುರಂತದಲ್ಲಿ ಕ್ರೂಸರ್ ಚಾಲಕ ವಿನೋದ್ (30) ಮತ್ತು ಯಲ್ಲಾಲಿಂಗ(36) ಸೇರಿದಂತೆ ಒಟ್ಟು 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅನುಸೂಯಾ ದೇವಿ ಎಂಬುವವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಬಂದಿದ್ದ ಕೂಲಿಕಾರ್ಮಿಕರು ದುರಂತ ಸಾವು ಕಂಡಿದ್ದಾರೆ. ಬೆಂಗಳೂರಿಗೆ ಕೆಲಸಕ್ಕಾಗಿ ಬಂದಿದ್ದ ಕೂಲಿಕಾರ್ಮಿಕರು ಕೆಲಸ ಮುಗಿಸಿಕೊಂಡು ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದರು.
ಒಟ್ಟು 17 ಜನ ಪ್ರಯಾಣಿಕರಿದ್ದ ಕ್ರೂಸರ್ ವಾಹನ ಚಳ್ಳಕೆರೆ ಮಾರ್ಗವಾಗಿ ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿಯ ಪೌಲ್ಟ್ರಿ ಫಾರ್ಮ್ ಹತ್ತಿರ ಲಾರಿಗೆ ಅಪ್ಪಳಿಸಿದೆ.
ಹರ್ಯಾಣ ಮೂಲದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ನಲ್ಲಿದ್ದ ಚಾಲಕ ಹಾಗೂ ಆತನ ಪಕ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಕೆಲ ಕಾಲ ನರಳಿ ಸಾವು ಕಂಡಿದ್ದಾರೆ.
ಅಪಘಾತದ ಸುದ್ದಿ ತಿಳಿದು ತಳಕು ಠಾಣೆ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ತೀವ್ರವಾಗಿ ಗಾಯಗೊಂಡವರನ್ನು ಚಿತ್ರದುರ್ಗ ಹಾಗೂ ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅನುಸೂಯಾ ದೇವಿ ಎಂಬುವರು ಚಿತ್ರದುರ್ಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದ 10 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಲಿ ಕಾರ್ಮಿಕರೆಲ್ಲರೂ ಗುಲ್ಬರ್ಗಾ ಜಿಲ್ಲೆ ಲಿಂಗಸುಗೂರು ನಿವಾಸಿಗಳು ಎನ್ನಲಾಗಿದೆ.
ಅಪಘಾತಕ್ಕಾಗಿ ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಲಾರಿ ಹಾಗೂ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications