ಗೋವಾದಲ್ಲಿ ಸಿಗರೇಟ್ ಮಾರಾಟಕ್ಕೆ ಬಿತ್ತು ಕಾಯಂ ಬ್ರೇಕ್

ಯಾವುದೇ ಅಂಗಡಿಗಳಲ್ಲಾಗಲಿ ಅಥವಾ ಹೋಟೆಲ್/ರೆಸ್ಟೋರೆಂಟುಗಳಲ್ಲಿ ಹೀಗೆ ಎಲ್ಲಿಯೇ ಆಗಲಿ ತಂಬಾಕು ಉತ್ಪನ್ನಗಳನ್ನು ಯಾವುದೇ ರೂಪದಲ್ಲೂ ಮಾರಾಟ ಮಾಡಬಾರದು ಎಂದು ಗೋವಾದಲ್ಲಿ ಸರಕಾರಿ ಆದೇಶವೊಂದು ಹೊರಬಿದ್ದಿದೆ.
ಇನ್ಮುಂದೆ ಸಿಗರೇಟ್, ಸಿಗಾರ್, ಬೀಡಿ, ಗುಟ್ಕಾ, ಹುಕ್ಕಾ ಇತ್ಯಾದಿ ತಂಬಾಕು ಪದಾರ್ಥಗಳನ್ನು ಬಿಲ್ಕುಲ್ ಮಾರಾಟ ಮಾಡಬಾರದು. ಒಂದು ವೇಳೆ ಈ ಆದೇಶ ಉಲ್ಲಂಘಿಸಿದರೆ ಕಾನೂನುರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರಿ ಆದೇಶವೊಂದು ಎಚ್ಚರಿಸಿದೆ.
ಶತಾಯಗತಾಯ ತನ್ನ ಆದೇಶಕ್ಕೆ ಅಂಟಿಕೊಂಡಿರುವ ಸರಕಾರ ಇನ್ಮುಂದೆ ಹೊಸದಾಗಿ ತಲೆಯೆತ್ತುವ ಅಂಗಡಿಗಳು ಅಥವಾ ಹೋಟೆಲ್/ರೆಸ್ಟೋರೆಂಟುಗಳಿಗೆ ಪರವಾನಿಗಿನೀಡುವಾಗಲೇ ಈ ಷರತ್ತು ಪಾಲಿಸುವುದಕ್ಕೆ ತಾಕೀತು ಮಾಡಲು ನಿರ್ಧರಿಸಲಾಗಿದೆ.
ಈ ನಿಟ್ಟಿನಲ್ಲಿ ಎಲ್ಲ ಪಟ್ಟಣ/ನಗರ ಸಭೆಗಳು, ಪಂಚಾಯಿತಿಗಳು, ಆರೋಗ್ಯ ಸೇವಾ ಕೇಂದ್ರಗಳು, ಪ್ರವಾಸೋದ್ಯಮ ತಾಣಗಳು, ಆಹಾರ ಮತ್ತು ಔಷಧ ಮಳಿಗೆಗಳು ವ್ಯಾಪಕವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ. ಇನ್ನು ಪೊಲೀಸರಂತೂ ಸರಿಯೇ ಸರಿ. ಕಣ್ಣಲ್ಲಿ ಕಣ್ಣಿಟ್ಟು ಈ ಕಾನೂನು ಉಲ್ಲಂಘಿಸುವವರನ್ನು ಹಿಡಿಯಲಿದೆ.
ಅಂದಹಾಗೆ ಗೋವಾ ಸರಕಾರಕ್ಕೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತಪ್ಪಾ ಅಂದರೆ ಕಳೆದ ಜುಲೈನಲ್ಲಿ ಬಾಂಬೆ ಹೈಕೋರ್ಟ್ ಈ ಸಂಬಂಧ ತೀರ್ಪು ನೀಡಿ, ತಕ್ಷಣದಿಂದ ಗೋವಾದಲ್ಲಿ ತಂಬಾಕು ಪದಾರ್ಥವನ್ನು ನಿಷೇಧಿಸಿ ಎಂದು ರಾಜ್ಯ ಸರಕಾರಕ್ಕೆ ಆದೇಶಿಸಿತ್ತು.
ತಂಬಾಕು ಚಟ ಇರುವವರು ಗೋವಾದತ್ತ ಹೋಗುವ ಮುನ್ನ ಮತ್ತೊಮ್ಮೆ ಯೋಚಿಸಿ ಹೊರಡುವುದು ಸೂಕ್ತ.


Click it and Unblock the Notifications
