ಭಾರತೀಯರಿಗೆ 'ಚಟ್ಟ ಕಟ್ಟುತ್ತಿರುವ' ಚೀನಾ
ತಿರುವನಂತಪುರ, ಸೆ. 26: ಅದ್ಯಾವ ಘಳಿಗೆಯಲ್ಲಿ ಜಾಗತೀಕರಣ ಅಂತ ಭಾರತ ತನ್ನ ಅರ್ಥ ವ್ಯವಸ್ಥೆಯ ಹೆಬ್ಬಾಗಿಲನ್ನು ಮುಕ್ತವಾಗಿ ತೆರೆಯಿತೋ ಪಕ್ಕದ ಚೀನಾ, ಒಂದೇ ಸಮನೆ ತನ್ನಲ್ಲಿರುವ ಅಷ್ಟೂ ಸಾಮಗ್ರಿಗಳನ್ನು ಭಾರತದಲ್ಲಿ ಸುರಿಯಲು ಆರಂಭಿಸಿತು. 'ಇಲ್ಲಿರುವೆ ಸುಮ್ಮನೆ- ಅಲ್ಲಿದೆ ನಮ್ಮನೆ' ಎನ್ನುವವರಿಗೂ ಈಗ ಚೀನಾ ತನ್ನ ಅಳಿಲು ಸೇವೆ ಸಲ್ಲಿಸಲು ಮುಂದಾಗಿದೆ.

ಡಂಪ್ ಯಾರ್ಡ್ ಗೆ ಮತ್ತೊಂದು ಸೇರ್ಪಡೆ:
ಅದೂ ಇದೂ ಅಂತಿಲ್ಲ. ಬೇಕೋ ಬೇಡವೋ ಅಂತ್ಲೂ ಇಲ್ಲ. ಚೀನಾ ಎಲ್ಲವನ್ನೂ ತಂದು ಇಲ್ಲಿ dump ಮಾಡುತ್ತಿದೆ. ಕೊನೆಗೀಗ ಕೊನೆಗಾಲಕ್ಕೆ ಬೇಕಾಗುವ ಶವಪೆಟ್ಟಿಗಳನ್ನು ಸಹಿತ. ಇದು ನಮ್ಮ ಆರ್ಥಿಕತೆಗೆ ಚೀನಾ ಹೊಡೆಯುತ್ತಿರುವ ಅಂತಿಮ ಮೊಳೆಯಾ? ಕಾಲರಾಯನೇ ಹೇಳಬೇಕು.
ವಿಷಯಾ ಏನಪಾ ಅಂದ್ರೆ ಕೇರಳದ ಆಲಪ್ಪುಳದಲ್ಲಿರುವ (Alappuzha) ಕಂಪನಿಯೊಂದು 'ಶವಪೆಟ್ಟಿಗೆಗಳನ್ನು ಪೂರೈಸುವಂತೆ' ಶಾಂಘೈನ ಒಂದು ಕಂಪನಿಗೆ ಕೋರಿದೆ. ಹಾಗಾಗಿ, ಮೊದಲ ಕಂತಿನಲ್ಲಿ ಮೊನ್ನೆ 170 ಶವಪೆಟ್ಟಿಗೆಗಳು ಬಂದಿವೆ. ಕೇರಳ ಕಂಪನಿಯು ಈ ಶವಪೆಟ್ಟಿಗೆಗಳು ಅನ್ವರ್ಥವಾಗಲೆಂದು ಸ್ವರ್ಗಪೆಟ್ಟಿ (Sworgapetty) ಎಂದೂ ಹೆಸರಿಟ್ಟಿದೆ.

ಸರಿ, 'ಶವಾಸನಕ್ಕೆ' ಚೀನಾದ್ದೇ ಏಕೆ?
ಚೀನಾದಲ್ಲಿ ಪೌಲೊವ್ನಿಯ (Paulownia) ಎನ್ನುವ ಮರ ಹೇರಳವಾಗಿ ಕಾಣಸಿಗುತ್ತದೆ. ಇದರಿಂದಲೇ 'ಶವಾಸನ' ತಯಾರಿಸುತ್ತಾರೆ. ಗಮನಾರ್ಹವೆಂದರೆ ಇದು ಸದೃಢವಾದ ಮರಮಟ್ಟು. ಆದರೂ ಸ್ಮಶಾನದ ಮಣ್ಣಿನಲ್ಲಿ ಒಂದೇ ವಾರದಲ್ಲಿ ಕರಗಿ ಹೋಗುತ್ತದೆ. ಹಾಗಾಗಿ ಇದು ಪರಿಸರಸ್ನೇಹಿ ಮರ. ಎಲ್ಲಕ್ಕಿಂತ ಮುಖ್ಯವಾಗಿ ಇದು ತುಸು ಅಗ್ಗ ಎಂಬ ಕಾರಣಕ್ಕೆ ಚೀನಾದ ಈ ಶವಪೆಟ್ಟಿಗೆಗಳಿಗೆ ಮಣೆ ಹಾಕಲಾಗಿದೆ ಎಂದು ಕಂಪನಿ ಮಾಲೀಕ ಸತೀಶ್ ಥಾಮಸ್ ತಿಳಿಸಿದ್ದಾರೆ.
ಚೀನಾದ ಶವಪೆಟ್ಟಿಗೆಗಳು ಭಾರತದ ಮಾರುಕಟ್ಟೆಗೆ ಬಂದಿರುವುದು ಇದೇ ಮೊದಲು. ಈ ಶವಪೆಟ್ಟಿಗೆಯ ಬೆಲೆ ತಲೆಗೆ 20,000 ರೂ. ನಿಂದ 2 ಲಕ್ಷ ರೂ..ಇನ್ನಷ್ಟು ವಪೆಟ್ಟಿಗೆಗಳನ್ನು ತರಿಸಲು ಹಾಗೂ ಬೆಲೆ ಕಡಿಮೆಗೊಳಿಸುವ ಸಲುವಾಗಿ ಬಿಡಿಭಾಗಗಳನ್ನು ತಂದು ಜೋಡಿಸಲು ಉದ್ದೇಶಿಸಿದ್ದೇವೆ ಎನ್ನುತ್ತಾರೆ ಥಾಮಸ್...

Made in China 'ಶವಾಸನ' ಆಮದು ಏಕೆ?
ಮರದ ಕೊರತೆ ಮತ್ತು ಕಾರ್ಮಿಕರ ಅಲಭ್ಯತೆಯಿಂದಾಗಿ ಈಗ ಶವಪೆಟ್ಟಿಗೆ ಅಭಾವ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪೀಠೊಪಕರಣ ವ್ಯಾಪಾರ ಮಾಡಿಕೊಂಡಿದ್ದ ಥಾಮಸ್‌ರ ಕಂಪನಿ ಶವಪೆಟ್ಟಿಗೆ ಆಮದು ಮಾಡುವ ವ್ಯಾಪಾರ ಪ್ರಾರಂಭಿಸಿದೆ.
ಸಾಮಾನ್ಯವಾಗಿ ಶವಪೆಟ್ಟಿಗೆ ತಯಾರಿಕೆ ಉದ್ಯೋಗ ತಲೆತಲಾಂತದ್ದು. ನಿರ್ದಿಷ್ಟ ಕುಟುಂಬಗಳು ತಲೆಮಾರುಗಳಿಂದ ಶವಪೆಟ್ಟಿಗೆಗಳನ್ನು ತಯಾರಿಸುತ್ತಿವೆ. ಆದರೆ ಈಗಿನ ತಲೆಮಾರಿನವರು ಈ ವ್ಯಾಪಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಂತೆಯೇ ಶವಪೆಟ್ಟಿಗೆ ತಯಾರಿ ವ್ಯಾಪಾರಕ್ಕೆ ಗೌರವವೂ ಇಲ್ಲ. ಜನರು ನಕಾರಾತ್ಮಕ ದೃಷ್ಟಿಕೋನದಿಂದ ಈ ವ್ಯಾಪಾರವನ್ನು ನೋಡುತ್ತಾರೆ.

ಈಗ ಭಾರತದ ಶವಪೆಟ್ಟಿಗೆಯೊಂದನ್ನೂ ನೋಡಿ
ಸಂಪ್ರದಾಯಗಳ ಬೀಡು ಭಾರತದಲ್ಲಿ ಶವಸಂಸ್ಕಾರಕ್ಕೆ ನಿಜಕ್ಕೂ ಎಲ್ಲಿಲ್ಲದ ಮಹತ್ವವವಿದೆ. ಈ ಶವಪೆಟ್ಟಿಗೆ ಹೆಸರಿನಲ್ಲೂ ದುಡ್ಡು ಮಾಡಿಕೊಳ್ಳುವ ಮಂದಿಗೇನು ಕೊರತೆಯಿಲ್ಲ. ಇತ್ತೀಚೆಗೆ ಪುಟ್ಟಪರ್ತಿಯ ಸಾಯಿಬಾಬಾ ಅವರು ವಿಧಿವಶರಾದಾಗ ಇದೇ ಶವಪೆಟ್ಟಿಗೆಯನ್ನು ಮುಂದಿಟ್ಟುಕೊಂಡು 'ಬಾಬಾ ಸಾವು ಪೂರ್ವನಿಯೋಜಿತ' ಎಂದು ಹುಯಿಲೆಬ್ಬಿಸಲಾಯಿತು.
ಅದಕ್ಕೂ ಮೊದಲು 'ಶವಪೆಟ್ಟಿಗೆ ಖರೀದಿ ವ್ಯವಹಾರ' ಅಂದಿನ ರಕ್ಷಣಾ ಸಚಿವರ ಜಾರ್ಜ್ ಫರ್ನಾಂಡಿಸ್ ಅವರಿಗೆ ಮುಳುಗುನೀರು ತಂದಿತ್ತು.


Click it and Unblock the Notifications
