ಬಸ್ ಪ್ರಯಾಣ ದರ ಏರಿಸುವುದಿಲ್ಲ: ಸಚಿವ ಅಶೋಕ್

ಈ ಮಧ್ಯೆ, ಡೀಸೆಲ್ ಬೆಲೆಯೇರಿಕೆಯನ್ನು ವಿರೋಧಿಸಿ ಹಾಗೂ ಡೀಸೆಲ್ ಮೇಲೆ ರಾಜ್ಯ ಸರಕಾರ ವಿಧಿಸುತ್ತಿರುವ ಸುಂಕವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸೆ. 19ರಿಂದ ಸರಕು ಸಾಗಣೆ ಲಾರಿಗಳ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ಲಾರಿ ಮಾಲಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
'ಕೇಂದ್ರ ಸರಕಾರ ನಿನ್ನೆ ಮಧ್ಯ ರಾತ್ರಿಯಿಂದ ಡೀಸೆಲ್ ಬೆಲೆಯೇರಿಸಿದೆ. ಅದೂ ಲೀಟರಿಗೆ 5 ರೂಪಾಯಿ ಇದು ನಮ್ಮ ಸಾರಿಗೆ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಬಸ್ ಪ್ರಯಾಣ ಬೆಲೆಯೇರಿಕೆಯೊಂದೇ ಇದಕ್ಕೆ ದಾರಿ. ಆದರೂ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣದ ದರಗಳನ್ನು ಏರಿಸುವುದಿಲ್ಲ.
ಈಗಾಗಲೇ ರಾಜ್ಯದಲ್ಲಿ ಬರದಿಂದ ಜನ ತತ್ತರಿಸಿದ್ದಾರೆ. ಜನರ ಬದುಕು ದುರ್ಭರವಾಗುತ್ತಿದೆ. ಇಂತಹ ಹೊತ್ತಿನಲ್ಲಿ ಮತ್ತೆ ಬೆಲೆಯೇರಿಕೆ ಹೊರೆ ಹಾಕುವುದಿಲ್ಲ' ಎಂದು ಸಚಿವ ಅಶೋಕ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಈ ಮಧ್ಯೆ ಸರಕಾರಿ ಸಾರಿಗೆ ನೌಕರರ ತಾಳಕ್ಕೆ ತಕ್ಕಂತೆ ವೇತನ ಹೆಚ್ಚಳ ಮಾಡಲಾಗದು. ಆದ್ದರಿಂದ ಅದೊಂದನ್ನು ಬಿಟ್ಟು ಉಳಿದೆಲ್ಲ ಬೇಡಿಕೆಗಳ ಬಗ್ಗೆ ತಕ್ಷಣ ಮಾತುಕತೆಗೆ ಬನ್ನಿ ಎಂದು ಸಚಿವ ಅಶೋಕ್ ನೀಡಿರುವ ಕರೆಗೆ ಕೆಎಸ್ಸಾರ್ಟಿಸಿ ನೌಕರರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ನೌಕರರ ಸಂಘದ ನಾಯಕರು ಹೇಳುವುದೇನು?: ಸಚಿವ ಅಶೋಕ್ ಮಾತಿಗೆ ತಾವು ಸೊಪ್ಪು ಹಾಕುವುದಿಲ್ಲ. ಅತ್ಯಂತ ಬೇಜವಾಬ್ದಾರಿ ಸಚಿವ ಅಶೋಕ್ ಜತೆ ತಾವು ಮಾತುಕತೆ ನಡೆಸುವುದಿಲ್ಲ. ತಾಲೀಬಾನ್ ಮನಸ್ಥಿತಿಯೊಂದಿಗೆ ಸಚಿವ ಅಶೋಕ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂದಿನ ಪರಿಸ್ಥಿತಿಗೆ ಸಚಿವ ಅಶೋಕ್ ಅವರೇ ಕಾರಣ.
ನಮ್ಮದು ಇಂದು ನಿನ್ನೆಯ ಬೇಡಿಕೆಗಳಲ್ಲ. ಅನೇಕ ವರ್ಷಗಳಿಂದ ನಾವು ಬೇಡಿಕೆಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಸಚಿವ ಅಶೋಕ್ ಅಧಿಕಾರ ವಹಿಸಿಕೊಂಡು 4 ವರ್ಷಗಳು ಕಳೆದುಹೋದವು. ಆದರೆ ಒಮ್ಮೆಯೂ ಅವರು ನಮ್ಮೊಂದಿಗೆ ಮಾತುಕತೆಗೆ ಬರಲಿಲ್ಲ. ಅವರದು ಇಬ್ಬಗೆಯ ನೀತಿ ಎಂದು ನಾಯಕರು ಕಿಡಿಕಾರಿದ್ದಾರೆ.












Click it and Unblock the Notifications