ಗಣೇಶನ ಹಬ್ಬ: ಜನಾ ರೆಡ್ಡಿಗೆ ಈ ಬಾರಿಯೂ ಜೈಲಿನಲ್ಲೇ

ಸದ್ಯ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜನಾರ್ದನ ರೆಡ್ಡಿಯನ್ನು ನ್ಯಾಯಮೂರ್ತಿ ದುರ್ಗಾ ಪ್ರಸಾದ್ ಅವರು ವೀಡಿಯೊ ಸಂವಾದದ ಮೂಲಕ ವಿಚಾರಣೆ ನಡೆಸಿದರು. ಆ ವೇಳೆ ತನ್ನನ್ನು ಓಬಳಾಪುರಂ ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಅಲವತ್ತುಕೊಂಡರು.
ನನ್ನ ವಿರುದ್ಧ 3 ವರ್ಷಗಳ ಹಿಂದೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣ ಸಂಬಂಧ ನನ್ನನ್ನು ಬಂಧಿಸಿ ಅದಾಗಲೇ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಆಗಿ ಹೋಯಿತು. ನನಗೆ ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದಾಳೆ. ನಾನು ಯಾವುದೇ ತಪ್ಪು ಮಾಡದೇ ಇದ್ದರೂ ನನ್ನನ್ನು ಅಕ್ರಮವಾಗಿ ಬಂಧಿಸಿ ಇಡಲಾಗಿದೆ.
ಇಷ್ಟು ಮಾತ್ರವಲ್ಲ, ಜೈಲಿನಲ್ಲಿ ನನ್ನನ್ನು ನೋಡಲು ಬಂದಿದ್ದರು ಎಂಬ ಕಾರಣಕ್ಕೆ ನನ್ನ ಸಹೋದರ ಗಾಲಿ ಸೋಮಶೇಖರ ರೆಡ್ಡಿ ಅವರ ಮೇಲೂ ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.
ಪ್ರತಿವಾದ ಮುಂದುವರಿಸಿದ ರೆಡ್ಡಿ 'ನಾನು ಕರ್ನಾಟಕದ ಮಾಜಿ ಸಚಿವ, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಾಸ ಮಾಡುತ್ತಾ ಇದ್ದೇವೆ' ಎಂದು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಪ್ರಕರಣದಲ್ಲಿ ಸಿಬಿಐ ದೀರ್ಘ ಕಾಲ ತಮ್ಮನ್ನು ವಶದಲ್ಲಿಟ್ಟುಕೊಳ್ಳುತ್ತಿದೆ ಎನಿಸಿದಲ್ಲಿ ಮೌಖಿಕವಾಗಿ ಮಾಹಿತಿ ನೀಡುವ ಬದಲು ಅದನ್ನು ಮೆಮೋ ಮೂಲಕ ಕೋರ್ಟ್‌ಗೆ ಸಲ್ಲಿಸಿ ಎಂದು ಸೂಚಿಸಿದರು.
ಆ ಬಳಿಕ ಸಿಬಿಐ ಕೋರಿಕೆ ಅನ್ವಯ ಜನಾರ್ದನ ರೆಡ್ಡಿ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ಸೆ. 25ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿತು.
ಶೀಘ್ರವೇ ಎಫ್‌ಐಆರ್: ಈ ಮಧ್ಯೆ, ಕಬ್ಬಿಣದ ಅದಿರು ಅಕ್ರಮ ಗಣಿಗಾರಿಕೆ ತನಿಖೆಯ ಸಂಬಂಧ ಸಿಬಿಐ ಒಂದೆರಡು ದಿನಗಳಲ್ಲಿ ಎಫ್‌ಐಆರ್ ದಾಖಲಿಸಲಿದೆ ಎಂದು ತಿಳಿದುಬಂದಿದೆ.












Click it and Unblock the Notifications