ಎಸ್‌ಸಿ ಮೀಸಲಾತಿ ವಿರುದ್ಧ ಸಿಡಿದೆದ್ದ ಬಂಜಾರಾ ಜನಾಂಗ

ಬಂದ್ ನಿಂದಾಗಿ ಸಾರಿಗೆ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸೇರಿದಂತೆ ಯಾದಗಿರಿ ನಗರಕ್ಕೆ ಬಂದಿದ್ದವರು ಇದರಿಂದಾಗಿ ಪರದಾಡಬೇಕಾಯಿತು. ಭಾರತದ ಮಾಜಿ ರಾಷ್ಟ್ರಾಧ್ಯಕ್ಷ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜಯಂತಿ ದಿನವಾದ ಇಂದು ದೂರದ ಶಾಲೆಗಳಿಗೆ ಹೋಗಬೇಕಿದ್ದ ಶಿಕ್ಷಕರು ವಾಹನ ಸೌಲಭ್ಯವಿಲ್ಲದೇ ಬಸ್ ನಿಲ್ದಾಣದಲ್ಲಿಯೇ ಶಿಕ್ಷಕರ ದಿನ ಆಚರಿಸಬೇಕಾಯಿತು.
ನಗರದ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಯುವಕರ ಗುಂಪು ತರಕಾರಿಯನ್ನೆಲ್ಲಾ ಚೆಲ್ಲಾಪಿಲ್ಲಿಗೊಳಿಸಿತು. ಆಗ ಪ್ರತಿಭಟನೆ ನಿರತ ಇಬ್ಬರ ಯುವಕರ ಮೇಲೆ ಆಕ್ರೋಶಗೊಂಡ ವ್ಯಾಪಾರಸ್ಥರ ಗುಂಪು ಹಲ್ಲೆ ನಡೆಸಿತು. ಪ್ರತಿಭಟನಾಕಾರರ ಬೈಕನ್ನು ಸಿಕ್ಕಸಿಕ್ಕ ವಸ್ತುಗಳಿಂದ ಕುಟ್ಟಿ ಜಖಂ ಗೊಳಿಸಿತು
ನೇತಾಜಿ ವೃತ್ತ, ಶಾಸ್ತ್ರೀ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಯಾದಗಿರಿ ಹೈದರಾಬಾದ್ ರಸ್ತೆಯನ್ನು ಬಂದ್ ಮಾಡಿಯಾಗಿತ್ತು. ಇದರಿಂದ ಸರಕು ಸಾಗಾಣಿಕೆ ವಾಹನಗಳು ಕಿಲೋಮೀಟರುಗಟ್ಟಲೆ ಸಾಲು-ಸಾಲಾಗಿ ನಿತ್ತಿದ್ದವು. ಇನ್ನು ಬಂದ್ ಬಗ್ಗೆ ತಿಳಿಯದೆ ನಗರಕ್ಕೆ ಆಗಮಿಸಿದ ಜನರ ಪಾಡಂತೂ ಕೇಳತೀರದಾಗಿತ್ತು. ಹಲವಾರು ಜನರು ತಮ್ಮ ಸಾಮಾನು ಸರಂಜಾಮುಗಳನ್ನು ಹೆಗಲ ಮೇಲೆ, ತಲೆಯ ಮೇಲೆ ಹೊತ್ತುಕೊಂಡೇ ಸೇರಬೇಕಾದ ಸ್ಥಳ ಸೇರಬೇಕಾಯಿತು.
ನಗರದ ಸರಕಾರಿ ಪದವಿ ಕಾಲೇಜಿನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಾಹನಗಳಲ್ಲಿ ಬಂದಿದ್ದ ನೂರಾರು ಪ್ರತಿಭಟನಾಕಾರರು ನ್ಯಾಯಮೂರ್ತಿ ಸದಾಶಿವ ಆಯೋಗದ ವಿರುದ್ಧ ಘೋಷಣೆ ಮೊಳಗಿಸಿದರು.
ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡುವುದರ ವಿರುದ್ಧ ನಡೆದಿರುವ ಹೋರಾಟ ಒಂದೆಡೆಯಾದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜನಾಂಗಕ್ಕೆ ಸರಕಾರಿ ಕೆಲಸದಲ್ಲಿ ಜಾತಿ ಆಧಾರದ ಮೇಲೆ ಬಡ್ತಿ ನೀಡಲು ಕೇಂದ್ರ ಸರಕಾರ ಮಸೂದೆ ಮಂಡಿಸಿರುವುದರ ವಿರುದ್ಧ ರಾಷ್ಟ್ರದಾದ್ಯಂತ ಭಾರೀ ಕೂಗು ಎದ್ದಿದೆ.












Click it and Unblock the Notifications