ಖ್ಯಾತ ವಕೀಲ ಸಿವಿ ನಾಗೇಶ್ ಮನೆಯಲ್ಲಿ ಕಳ್ಳತನ

ಯಡಿಯೂರಪ್ಪ, ಜನಾರ್ದನ ರೆಡ್ಡಿ, ಸುಬ್ರಮಣ್ಯ ನಾಯ್ಡು ಹೀಗೆ... ನೀವು ಯಾರೇ ಗಣ್ಯಾತಿಗಣ್ಯರ ಹೆಸರು ಹೇಳಿ ಅವರೆಲ್ಲರಿಗೂ ತಮ್ಮ ವಕೀಲಿಕೆ ಧಾರೆಯೆರೆದಿರುವ ಪ್ರಸಿದ್ದ ನ್ಯಾಯವಾದಿ ಸಿವಿ ನಾಗೇಶ್ ಅವರ ರಾಜರಾಜೇಶ್ವರಿ ನಗರದ ಮನೆಗೆ ಕಳ್ಳರು ಸಮಯ ನೋಡಿಕೊಂಡು ಕಳೆದ ವಾರ ಗುನ್ನಾಯಿಟ್ಟಿದ್ದಾರೆ.
ಆದರೆ ನಾಗೇಶ್ ಕುಟುಂಬ ಅಲ್ಲಿಗೆ ಇನ್ನೂ ವಾಸಕ್ಕೆ ಹೋಗಿಲ್ಲ. ಹಾಗಾಗಿ ಮನೆ ಖಾಲಿಯಿರುವುದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಅದೂ ಒಮ್ಮೆಗೇ ಅಲ್ಲ, ಸಾವಕಾಶವಾಗಿ ಮೂರ್ನಾಲ್ಕು ದಿನಗಳ ಕಾಲ ಮನೆಯಲ್ಲಿ ಇದ್ದುಬದ್ದಿದ್ದನ್ನೆಲ್ಲಾ ದೋಚಿಕೊಂಡು ಹೋಗಿದ್ದಾರೆ. ಅವುಗಳ ಮೌಲ್ಯ ಸುಮಾರು 30-40 ಲಕ್ಷ ರೂಪಾಯಿ ದಾಟುತ್ತದೆ.
ಕಳ್ಳತನ ನಡೆದಿರುವುದು ಗುರುವಾರ ಬೆಳಕಿಗೆ ಬಂದಿದೆ. ತಕ್ಷಣ ರಾಜರಾಜೇಶ್ವರಿ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಯಾರೋ ತಿಳಿದವರೇ ಮನೆ ಖಾಲಿ ಬಿದ್ದಿರುವುದನ್ನು ನೋಡಿಕೊಂಡು ಮೆನಯಲ್ಲಿದ್ದ ಒಂದೂ ಸಾಮಾನನನ್ನು ಬಿಡದೆ ದೋಚಿದ್ದಾರೆ. ಬಾತ್ ರೂಂ ವೆಂಟಿಲೇಟರಿನಿಂದ ಒಳನುಸುಳಿ ಕಳ್ಳರು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
50 ಜತೆ ಸೂಟುಗಳು, ಬೆಳ್ಳಿ ಸ್ತಂಭ, ಮಂಚದ ಕಾಲುಗಳು, ದುಬಾರಿ ಸೀರೆಗಳು, ಬಾತ್ ರೂಂಗೆ ಅಳವಡಿಸಿದ್ದ ವಿದೇಶಿ ನಿರ್ಮಿತ ಕೊಳಾಯಿಗಳು, ಸಿಂಕ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೋಚಲಾಗಿದೆ. ಬೆರಳಚ್ಚುತಜ್ಞರು ಮನೆಯೆಲ್ಲ ಜಾಲಾಡಿದ್ದು, ಹವ್ಯಾಸಿ ಕಳ್ಳರಿಗಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications