ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ಪ್ರವಾಸದಿಂದ ಪ್ರಪಂಚವೇನೂ ಮುಳುಗ್ಹೋಗೊಲ್ಲ

By Srinath
|
Google Oneindia Kannada News

mlas-foreign-trip-wont-affect-drought-people-bc-patil
ಬೆಂಗಳೂರು, ಆ. 30: ಕರ್ನಾಟಕದ ಘನವೆತ್ತ ನೂರು ಶಾಸಕರು ತಂಡೋಪಾದಿಯಲ್ಲಿ ಮೈಮನಗಳನ್ನು ತಂಪು ಮಾಡಿಕೊಳ್ಳಲು ವಿದೇಶ ಪ್ರವಾಸಕ್ಕೆ ಹೊರಟಿರುವ ಬಗ್ಗೆ ಕಾಂಗ್ರೆಸ್ ಶಾಸಕ ಬಿಸಿ ಪಾಟೀಲರು ತಮ್ಮದೇ ಆದಂತಹ ವಿಚಿತ್ರ ವ್ಯಾಖ್ಯಾನ ನೀಡಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.

ಶಾಸಕರ ಪ್ರವಾಸದಿಂದ ಪ್ರಪಂಚವೇನೂ ಮುಳುಗೋಲ್ಲ ಹೋಗ್ರೀ ಎಂದು ಸನ್ಮಾನ್ಯ ಪಾಟೀಲರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಬರ ಬಂದಿದೆಯೆಂದು ಜನ ಏನೂ ಉಪವಾಸ ಬಿದ್ದಿಲ್ಲ. ಕಾಲಕಾಲಕ್ಕೆ ಉಣ್ಣುತ್ತಿದ್ದಾರೆ ಎಂದು ಶಾಸಕರ ವಿದೇಶ ಪ್ರವಾಸವನ್ನು ಯಾವುದೇ ಎಗ್ಗುಸಿಗ್ಗಿಲ್ಲದೇ ಸಮರ್ಥಿಸಿಕೊಂಡಿದ್ದಾರೆ. ಅಷ್ಟಕ್ಕೂ ಬರಗಿರ ಎಲ್ಲ ಮುಗಿದ ಅಧ್ಯಾಯ. ಮತ್ತೆ ಮಳೆಯಾಗುತ್ತಿದೆ. ನಾಡು ಸುಭಿಕ್ಷವಾಗಿದೆ ಎಂದೂ ಬರ ಸ್ಥಿತಿ ಬಗ್ಗೆ ಷರಾ ಬರೆದಿದ್ದಾರೆ.

ಪಾಟೀಲರ ಪಾಟೀ ಸವಾಲು: ಶಾಸಕರ ಪ್ರವಾಸಕ್ಕೆ ಸರಕಾರ ತಲಾ 5 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದೆ. ಕೇವಲ ಈ 5 ಲಕ್ಷ ರೂಪಾಯಿಯಿಂದ ಬರ ನೀಗಿಬಿಡುತ್ತದಾ? ಎಂದು ಪಾಟೀಲರು ಪಾಟೀ ಸವಾಲು ಹಾಕಿದ್ದಾರೆ.

ಮತ್ತೊಬ್ಬ ಶಾಸಕ ಸಿಂಧನೂರಿನ ವೆಂಕಟರಾವ್ ನಾಡಗೌಡ ಅವರಂತೂ ಪ್ರವಾಸದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಮಾಧ್ಯಮದ ಮಂದಿಯ ವಿರುದ್ಧವೇ ತಿರುಗಿಬಿದ್ದಿದ್ದಾರೆ. 'ನನ್ನ ಕ್ಷೇತ್ರದಲ್ಲಿ ರವೇ ಇಲ್ವಲ್ರೀ. ಎಲ್ಲ ನಿಮ್ಮದೇ ಸೃಷ್ಟಿ ಅಷ್ಟೇ' ಎಂದು ಕೆಂಡಕಾರಿದ್ದಾರೆ.

6 ತಂಡಗಳಲ್ಲಿ 30 ಕ್ಕೂ ಹೆಚ್ಚು ಶಾಸಕರು ಇಂದಿನಿಂದ 15 ದಿನಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಚಿಲಿ, ಬ್ರೆಜಿಲ್, ಅರ್ಜೆಂಟೈನಾ, ಪೆರು, ಸೌದಿ ಅರೇಬಿಯಾ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡುವ ಪ್ರೋಗ್ರಾಂ ಹಾಕಿಕೊಂಡಿದ್ದಾರೆ.

'ಮುಖ್ಯಮಂತ್ರಿಗಳೇ ಶಾಸಕರಿಗೆ ಕನಿಷ್ಠ ಸಂಯಮ ಕಲಿಸಿ...: 'ಮುಖ್ಯಮಂತ್ರಿಗಳೇ, ಹೇಗೂ ನಿಮ್ಮ ಶಾಸಕರು ಹಾರಿಹೋಗುತ್ತಿದ್ದಾರೆ. ಅವರನ್ನು ತಡೆಯಲು ನಮಗಂತೂ ಸಾಧ್ಯವಾಗಲಿಲ್ಲ. ಕನಿಷ್ಠ ಸಂಯಮವನ್ನಾದರೂ ಆ ನಿಮ್ಮ ಘನವೆತ್ತ ಶಾಸಕರಿಗೆ ಕಲಿಸಿಯಪ್ಪಾ. ನಮ್ಮ ಪಾಡೇನೂ ನಾವು ಪಡುತ್ತೇವೆ. ಬರದಿಂದ ಬಳಲುತ್ತಿರುವ ನಮ್ಮನ್ನು ಅವರು ಮತಿಹೀತ ಮಾತುಗಳಿಂದ ಮತ್ತಷ್ಟು ಘಾಸಿಗೊಳಿಸದಿರಲು ತಿಳಿಯಹೇಳಿ. ಅಷ್ಟು ಸಾಕು' ಎಂದು ಬರದ ಜನ ನಾಡಿನ ದೊರೆಯಲ್ಲಿ ಮೊರೆಯಿಟ್ಟಿದ್ದಾರೆ.

ವ್ಯಾಪಕ ಟೀಕೆಗಳ ಸುರಿಮಳೆಯ ನಡುವೆಯೇ 20 ಬರಗೆಟ್ಟ ಜನನಾಯಕರ (ಮೇಲ್ಮನೆ/ಕೆಳಮನೆ ಸದಸ್ಯರು) ಮೊದಲ ತಂಡ ಇಂದು ಅರ್ಜೆಂಟಾಗಿ ಅರ್ಜೆಂಟೈನಾ ಮತ್ತಿತರ ದಕ್ಷಿಣ ಅಮೆರಿಕ ಸಂಸ್ಥಾನಗಳಿಗೆ ಗುಳೆ ಹೊರಟಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂತಹ 100 ಶಾಸಕರ ಪ್ರವಾಸ ಕಡತಕ್ಕೆ ಸೈಲೆಂಟಾಗಿ ಸಹಿ ಹಾಕಿದ್ದಾರೆ.

English summary
Inspite of Karnataka reeling under severe drought- 100 BJP MLAs to tour Argentina from today. While embarking on the tour one MLA from Congress ramarked that if we undertook foreign trip the whole sky wont come down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X