ಉಗ್ರರ ಜತೆ ಶಾಮೀಲು: ಬೆಂಗಳೂರು ಪತ್ರಕರ್ತನ ಬಂಧನ

ಭಯೋತ್ಪಾದನೆ ವಿಷಯದಲ್ಲಿ ಇಂಡಿಯನ್ ಮುಜಾಹಿದ್ದೀನ್ ಗೆ ನೆರವು ನೀಡುತ್ತಿರುವ ಆರೋಪದ ಮೇಲೆ ಬೆಂಗಳೂರಿನ ಆಂಗ್ಲ ದಿನಪತ್ರಿಕೆಯ ವರದಿಗಾರ ಸೇರಿದಂತೆ ಇನ್ನೂ 4 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಮೊದಲು ಉತ್ತರ ಪ್ರದೇದಶ ಪೊಲೀಸರು ಇವರನ್ನು ಬಂಧಿಸಿದ್ದು, ನಂತರ ಸಿಸಿಬಿ ವಶಕ್ಕೆ ಒಪ್ಪಿಸಲಾಗಿದೆ.
ಬಂಧಿತ ಪತ್ರಕರ್ತನ ಹೆಸರು ಮುತಿ ಉರ್ ರೆಹಮಾನ್ ಸಿದ್ದಿಖಿ. ಈತನನ್ನು ಜೆಸಿ ನಗರದ ಮುನಿರೆಡ್ಡಿ ಪಾಳ್ಯದಲ್ಲಿ ಬುಧವಾರ ಬೆಳಗ್ಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈಚೆಗೆ ರಾಷ್ಟ್ರ ವಿರೋಧಿ ಸಂಘಟನೆಗಳ ಜತೆ ಆತನ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ವಾಯದ್ ಹುಸೇನ್, ಸಾದಿಕ್, ಇಮ್ರಾನ್ ಬಹಾದೂರಿ, ಮಹಮದ್ ಇತರೆ ಬಂಧಿತರು.
ಇದೇ ವೇಳೆ ಹುಬ್ಬಳ್ಳಿಯಲ್ಲೂ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಹಲವು ಬಾರಿ ಕರೆ ಮಾಡಿರುವುದು ಮತ್ತು ಜಿಹಾದಿ ಸಾಹಿತ್ಯವನ್ನು ಅಂತರ್ಜಾಲದಿಂದ ಹೆಕ್ಕಿ ತೆಗೆದಿರುವುದು ಮುಂತಾದ ಆರೋಪಗಳು ಇವರ ವಿರುದ್ಧ ಕೇಳಿಬಂದಿವೆ ಎಂದು ಮೂಲಗಳು ಹೇಳಿವೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications