ಕಂದು ಚರ್ಮದ ಭಾರತೀಯರಿಗೆ ಚಿನ್ನ ಚೆನ್ನಾಗಿ ಒಪ್ಪುತ್ತೆ

ಭಾರತದ ನಾರಿಯರ ಚಿನ್ನದ ಪ್ರೇಮವನ್ನು ಚೀನಾ ತಡವಾಗಿ ಅರಿತಂತಿದೆ. ಅಡಿಯಿಂದ ಮುಡಿಯವರೆಗೆ ಚಿನ್ನದ ಆಭರಣಗಳಿಂದ ಶೃಂಗರಿಸಿಕೊಳ್ಳಲು ಭಾರತದ ಹೆಂಗಳೆಯರು ಸದಾ ಸಿದ್ದ ಎಂದು ಚೀನಾದ ಸರಕಾರಿ ಪತ್ರಿಕೆ People's Daily ತನ್ನದೇ ಶೈಲಿಯಲ್ಲಿ ವಿಶ್ಲೇಷಿಸಿದ್ದು, ಭಾರತದಲ್ಲಿ ರಸ್ತೆಯಲ್ಲಿ ಭಿಕ್ಷೆ ಬೇಡುವ ಬಾಲಕಿಯರೂ ಚಿನ್ನದ ಮೂಗುತಿ ಸಿಕ್ಕಿಸಿಕೊಂಡಿರುತ್ತಾರೆ ಎಂದಿದೆ.
'ಮುಖ್ಯವಾಗಿ ಭಾರತೀಯರ ಚರ್ಮ ಕಂದು ಬಣ್ಣದ್ದಾಗಿದೆ. ಆದ್ದರಿಂದ ಅವರ ಮೈಮೇಲೆ ಚಿನ್ನದ ಆಭರಣಗಳು ಲಕಲಕ ಎದ್ದು ಕಾಣುತ್ತದೆ' ಎಂಬ ವಿಚಿತ್ರವಾಗಿ ವಿಶ್ಲೇಷಿಸಿದೆ.
ಮೂಗುತಿಯಿಲ್ಲದೇ ಹೊರಬರೋಲ್ಲ:
ಚಿನ್ನದ ಆಭರಣ ಹಾಕಿಕೊಳ್ಳದೆ ಮನೆಯಾಚೆಗೆ ಕಾಲಿಡುವುದು ಸಭ್ಯ ನಡವಳಿಕೆಯೇ ಅಲ್ಲ ಎಂದು ಭಾರತದಲ್ಲಿ ಪರಿಗಣಿಸಲಾಗಿದೆಯೆಂದು 'Indian beauties wearing gold jewellery' ಎಂಬ ಲೇಖನದಲ್ಲಿ People's Daily ಅಂತರ್ಜಾಲ ಪತ್ರಿಕೆ ಹೇಳಿದೆ. ಈ ಲೇಖನಕ್ಕೆ ಪೂರಕವಾಗಿ ಆಭರಣ ಧರಿಸಿದ ಐಶ್ವರ್ಯಾ ರೈ ಸೇರಿದಂತೆ ಹಲವು ತಾರೆಯರ ಚಿತ್ರಗಳನ್ನೂ ಪ್ರಕಟಿಸಿದೆ.
ಇತರೆ ಲೋಹಗಳಿಗೆ ಹೋಲಿಸಿದರೆ ಭಾರತೀಯರು ಬಂಗಾರದ ಆಭರಣಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಭಾರತೀಯರ ಚರ್ಮ ಕಪ್ಪಾಗಿರುವುದರಿಂದ ಅವರಿಗೆ ಚಿನ್ನದ ಆಭರಣ ಚೆನ್ನಾಗಿ ಕಾಣಿಸುತ್ತದೆ. ಕತ್ತು ಮತ್ತು ಕಿವಿಯಲ್ಲಿ ಆಭರಣ ಧರಿಸಿಕೊಂಡ ಮಹಿಳೆಯರು ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಾರೆ.
ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುವ, ಹರಕಲು ಬಟ್ಟೆಯ ಬಾಲಕಿಯರೂ ಸಹ ಮೂಗಿನಲ್ಲೊಂದು ಚಿನ್ನದ ಆಭರಣ ಸಿಕ್ಕಿಸಿಕೊಂಡಿರುತ್ತಾರೆ ಎಂದು ಪತ್ರಿಕೆಯು ಭಾರತೀಯ ಮಹಿಳೆಯರ ಚಿನ್ನದ ವ್ಯಾಮೋಹವನ್ನು ಚಿತ್ರಿಸಿದೆ.
ಮಹಿಳೆಯರು ಮಾತ್ರವೇ ಅಲ್ಲ ಪುರುಷರೂ ಚಿನ್ನ ಧರಿಸುವುದು ಭಾರತದಲ್ಲಿ ಸಾಮಾನ್ಯ. ಭಾರತೀಯರ ಈ ಮನೋಧರ್ಮದಿಂದಾಗಿಯೇ ದೊಡ್ಡ, ಸಣ್ಣ ನಗರಗಳಲ್ಲಿ ಎಲ್ಲೆಡೆ ಝಗಮಗಿಸುವ ಸೌಂದರ್ಯದ, ಚಿನ್ನಾಭರಣಗಳನ್ನು ಮಾರುವ ಅಂಗಡಿಗಳು ಕಂಡುಬರುತ್ತವೆ ಎಂದು ಪತ್ರಿಕೆ ಹೇಳಿದೆ.












Click it and Unblock the Notifications