ಸದ್ಯದಲ್ಲೇ ಹುಬ್ಬಳ್ಳಿ-ಬೆಂಗಳೂರು SpiceJet ಹಾರಾಟ
ಹುಬ್ಬಳ್ಳಿ, ಆ. 30: ಸೆಪ್ಟೆಂಬರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ SpiceJet ವಿಮಾನಗಳು ಹಾರಾಡಲಿವೆ. ವಾಣಿಜ್ಯ ನಗರಿ ಮತ್ತು ರಾಜಧಾನಿ ಬೆಂಗಳೂರು ನಡುವೆ SpiceJet ವಿಮಾನ ಸಂಚರಿಸಲಿದೆ.

Kingfisher Airlines ವಿಮಾನಗಳು ಈ ಹಿಂದೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವಾದರೂ ತೀವ್ರ ಹಣಕಾಸು ನಷ್ಟ ಅನುಭವಿಸಿದ 'ಕಿಂಗ್ ಮಲ್ಯ' ತಮ್ಮ ವಿಮಾನ ಹಾರಟವನ್ನು ಕಳೆದ ಜೂನ್ ತಿಂಗಳಿಂದ ಸ್ಥಗಿತಗೊಳಿಸಿದ್ದರು.
ಹುಬ್ಬಳ್ಳಿ-ಬೆಂಗಳೂರು ಪ್ರಯಾಣಿಕರಿಗೆ ವಿಮಾನ ಯಾನ ಬೇಕಿತ್ತಾದರೂ ಸರಿಯಾದ ವಿಮಾನ ಯಾನ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿತ್ತು. ಇದರಿಂದ ರಸ್ತೆ ಮತ್ತು ರೈಲು ಮೂಲಕ ಸಂಚರಿಸುವುದು ಅನಿವಾರ್ಯವಾಗಿತ್ತು. ಪರಿಸ್ಥಿತಿಯನ್ನು ಅವಲೋಕಿಸಿದ SpiceJet, ತಕ್ಷಣ ಮಾರ್ಗಾಲೋಚಿಸಿ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ವಿಮಾನಗಳನ್ನು ಹಾರಿ ಬಿಡಲು ಮುಂದಾಗಿದೆ.
ಈ ನಿಟ್ಟಿನಲ್ಲಿ, SpiceJet ಸಂಸ್ಥೆಯು ಮೊನ್ನೆ ಹುಬ್ಬಳ್ಳಿಗೆ ಭೇಟಿ ನೀಡಿ, ಅಲ್ಲಿನ ವಿಮಾನ ನಿಲ್ದಾಣದಲ್ಲಿನ ಮೂಲ ಸೌಕರ್ಯಗಳನ್ನು ಅವಲೋಕಿಸಿದೆ. ತದನಂತರ, ಭಾರತೀಯ ವಿಮಾನ ಪ್ರಾಧಿಕಾರವೂ SpiceJet ವಿಮಾನ ಸಂಚಾರಕ್ಕೆ ಅಸ್ತು ಎಂದಿದೆ.
ದೆಹಲಿಯಿಂದ SpiceJet ಸಂಸ್ಥೆಯ ತಾಂತ್ರಿಕ ಅಧಿಕಾರಿಗಳು ಭೇಟಿ ನೀಡಿದ್ದು, ಶೀಘ್ರದಲ್ಲೇ ಹುಬ್ಬಳ್ಳಿ-ಬೆಂಗಳೂರು ನಡುವೆ ವಿಮಾನ ಯಾನ ಆರಂಭವಾಗಲಿದೆ ಎಂದು Hubli Airport ನಿರ್ದೇಶಕ ಕೆಎಂ ಬಸವರಾಜು ಅವರು ತಿಳಿಸಿದ್ದಾರೆ.
ಇನ್ನು ಬುಧವಾರದಂದು SpiceJet ಸಂಸ್ಥೆಯ ಆಡಳಿತಾಧಿಕಾರಿಗಳು ಭೇಟಿ ನೀಡಿದ್ದು, ನಿಲ್ದಾಣದಲ್ಲಿ ತಮ್ಮ ಕಚೇರಿ ಸ್ಥಾಪನೆ, ಟಿಕೆಟ್ ಕೌಂಟರ್ ಮತ್ತಿತರ ಸೌಲಭ್ಯಗಳನ್ನು ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ, ಪ್ರಯಾಣಿಕರ ಸಂಖ್ಯೆಯನ್ನು ಮನಗಂಡು ಹುಬ್ಬಳ್ಳಿ- ಮುಂಬೈ ಮಧ್ಯೆಯೂ ವಿಮಾನ ಸಂಚಾರ ಪ್ರಾರಂಭಿಸಲು SpiceJet ಆಲೋಚಿಸುತ್ತಿದೆ.












Click it and Unblock the Notifications