ಸಲ್ಮಾನ್ ಸಿನಿಮಾ ವೇಳೆ ಮಹಿಳೆಗೆ ಲೈಂಗಿಕ ಕಿರುಕುಳ

ಇಲ್ಲಿನ ಮಲ್ಟಿಪ್ಲೆಕ್ಸ್ ಥಿಯೇಟರಿನಲ್ಲಿ ಗುರುವಾರ ಈ ಘಟನೆ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಸಿನಿಮಾ ವೀಕ್ಷಿಸುತ್ತಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಇಲ್ಲಿನ ಶಹವಾಡಿ ಪ್ರದೇಶದ ರಿಯಲ್ ಎಸ್ಟೇಟ್ ಧಣಿ ಫಾರೂಖ್ ಛಿಪ್ಪಾ ಎಂದು ಗುರುತಿಸಲಾಗಿದೆ.
ಏನಾಯಿತೆಂದರೆ ಜುಹಾಪುರದ ನಿವಾಸಿ ಖುರೇಶಿ ಅವರು ಎಸ್ ಜಿ ಹೆದ್ದಾರಿಯಲ್ಲಿರುವ ದೇವ್ ಆರ್ಕ್ ಮಾಲ್ ನಲ್ಲಿರುವ ಸಿನಿಮ್ಯಾಕ್ಸ್ ಮಲ್ಟಿಪ್ಲೆಕ್ಸ್ ಥಿಯೇಟರಿನಲ್ಲಿ ಸಲ್ಮಾನ್ ಖಾನ್ ನಟಿಸಿರುವ 'ಎಕ್ ಥಾ ಟೈಗರ್' ಚಿತ್ರದ ವೀಕ್ಷಣೆಗೆ ಹೆಂಡತಿ, ಮೂವರು ಮಕ್ಕಳ ಜತೆ ರಾತ್ರಿ 9 ಗಂಟೆಯ ಷೋ ವೀಕ್ಷಿಸುತ್ತಿದ್ದರು.
ಪೊಲೀಸರ ಪ್ರಕಾರ ಆಗ ಥಿಯೇಟರಿನಲ್ಲಿ ಏನಾಯಿತೆಂದರೆ ಖುರೇಶಿ ಅವರ ಪತ್ನಿ ಇದ್ದಕ್ಕಿದ್ದಂತೆ ಅಳುತ್ತಾ ಬೊಬ್ಬಿಡತೊಡಗಿದರು. ಇದರಿಂದ ಕಂಗಾಲಾದ ಖುರೇಶಿ ಏನಾಯಿತೆಂದು ವಿಚಾರಿಸತೊಡಗಿದರು. ಅದಕ್ಕೆ ಆಕೆ 'ಹಿಂದಿನ ಸೀಟನಲ್ಲಿ ಕುಳಿತಿರುವ ಗಡವ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ' ಎಂದು ತಿಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಖುರೇಶಿ, ಫಾರೂಖ್ ಛಿಪ್ಪಾನನ್ನು ವಿಚಾರಿಸಿಕೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಫಾರೂಖ್ ಛಿಪ್ಪಾ ಸಹ ಜೋರಾಗಿ ಆವಾಜ್ ಹಾಕುತ್ತಾ, ಚೀರಾಡಿದ್ದಾನೆ. ಖುರೇಶಿ ಮುಖಕ್ಕೆ ಗುದ್ದಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆ ವೇಳೆ ಚಿತ್ರ ವೀಕ್ಷಿಸುತ್ತಿದ್ದ ಇತರರು ಫಾರೂಖ್ ಛಿಪ್ಪಾನನ್ನು ಹಿಡಿದು ತದುಕಿದ್ದಾರೆ. ಜತೆಗೆ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಫಾರೂಖ್ ಛಿಪ್ಪಾ ಹೇಳುವುದೇನು?: 'ಹಣ ಪಡೆಯಲು ನಾನು ಮಲ್ಟಿಪ್ಲೆಕ್ಸ್ ಬಳಿ ಬಂದಿದ್ದೆ. ಆದರೆ ಆ ವ್ಯಕ್ತಿ ಸರಿಯಾದ ಸಮಯಕ್ಕೆ ಬಾರದಿದ್ದರಿಂದ ಬೇಜಾರಾಗಿ ಚಿತ್ರಮಂದಿರದೊಳಕ್ಕೆ ಹೋಗಿ, ಸಿನಿಮಾ ವೀಕ್ಷಿಸತೊಡಗಿದೆ. ಆದರೆ ಅದ್ಯಾವುದೋ ಮಾಯದಲ್ಲಿ ನಿದ್ರೆಗೆ ಜಾರಿದೆ. ಆ ವೇಳೆ ಅಪ್ರಯತ್ನವಾಗಿ ಮಹಿಳೆಯನ್ನು ಮುಟ್ಟಿರಬಹುದಷ್ಟೇ' ಎಂದು ಫಾರೂಖ್ ಛಿಪ್ಪಾ ಪೊಲೀಸರಿಗೆ ತಿಳಿಸಿದ್ದಾರೆ. ನಿಜಕ್ಕೂ ಏನು ನಡೆಯಿತು ಎಂಬುದನ್ನು ತಿಳಿಯಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications