ಬಕೇಟಿನಲ್ಲಿ ಮುಳುಗಿ ಮಗು ಸಾವು, ಯಾರು ಹೊಣೆ?

Toddler drowns in bucket, dies
ಕೋಲ್ಕತಾ, ಆ. 23 : ಕೋಳಿ ಕೂಗಿ ಸೂರ್ಯ ಭೂಮಿಯ ಮೇಲೆ ತನ್ನ ಕಿರಣಗಳನ್ನು ಪಸರಿಸಿದ್ದರೂ ಅಪ್ಪ ಮೆತ್ತನೆಯ ಹಾಸಿಗೆಯ ಮೇಲೆ ಸುಖನಿದ್ರೆಯಲ್ಲಿ ಮುಳುಗಿದ್ದ, ಮಧುಮೇಹದಿಂದ ಬಳಲುತ್ತಿರುವ ಅಮ್ಮ ತನ್ನ ಎಂದಿನ ಮುಂಜಾನೆಯ ನಡಿಗೆಯಲ್ಲಿ ನಿರತಳಾಗಿದ್ದಳು. ಇಬ್ಬರಿಗೂ ಮನೆಯ ಇನ್ನೊಂದು ಕೋಣೆಯಲ್ಲಿ ಏನಾಗುತ್ತಿದೆ ಎಂಬುದರ ಪರಿವೆಯೇ ಇರಲಿಲ್ಲ.

ಅಪ್ಪ ಅಮ್ಮ ಇಬ್ಬರೂ ತಮ್ಮದೇ ಲೋಕದಲ್ಲಿ ಮುಳುಗಿರುವ ಅದೇ ಹೊತ್ತಿನಲ್ಲಿ ಆ ಸ್ನಾನದ ಕೋಣೆಯ ಬಕೇಟಿನಲ್ಲಿ ಅವರಿಬ್ಬರ ಎರಡೂವರೆ ವರ್ಷದ ಮುದ್ದಿನ ಪುಟಾಣಿ ಕಂದಮ್ಮ ಈ ಲೋಕಕ್ಕೇ ಟಾಟಾ ಹೇಳಿ, ಬಾರದ ಲೋಕಕ್ಕೆ ಪಯಣ ಬೆಳೆಸಿತ್ತು. ಅಪ್ಪ ಅಮ್ಮನ ನಿರ್ಲಕ್ಷ್ಯದಿಂದಾಗಿ ಹೃದಯ ಹಿಂಡುವ ಈ ದುರ್ಘಟನೆ ನಡೆದಿರುವುದು ತಕುರ್‌ಪುಕುರ್ ಎಂಬ ಊರಿನಲ್ಲಿ.

ಆಗಿದ್ದೇನೆಂದರೆ, ಆರು ಗಂಟೆಗೆ ಎದ್ದ ಮಗು ಜೀತ್ ಮೈಕಾ ಪಕ್ಕದಲ್ಲಿ ಮಲಗಿದ್ದ ಅಪ್ಪನನ್ನು ಎಬ್ಬಿಸದೆ ತಾನೇ ಸ್ವತಃ ಬ್ರಶ್ ತೆಗೆದುಕೊಂಡು ಬಚ್ಚಲುಮನೆಗೆ ಹೋಗಿದ್ದಾನೆ. ಕೈಯಲ್ಲಿದ್ದ ಪುಟಾಣಿ ಬ್ರಶ್ ಕೈಜಾರಿ ನೀರು ತುಂಬಿದ್ದ ಬಕೇಟಿನಲ್ಲಿ ಬಿದ್ದಿದೆ. ಅದನ್ನು ತೆಗೆದುಕೊಳ್ಳಲು ಹೋದ ಮಗು ತಲೆಕೆಳಗಾಗಿ ನೀರಿನಲ್ಲಿ ಮುಳುಗಿಬಿಟ್ಟಿದೆ. ಎದ್ದುಬರಲು ಅದಕ್ಕೆ ಆಸ್ಪದವೇ ಇರಲಿಲ್ಲ. ಜವರಾಯ ಬಕೇಟಿನಲ್ಲಿಯೇ ಅಡಗಿ ಕುಳಿತಿದ್ದ.

ಮಧುಮೇಹದಿಂದ ಬಳಲುತ್ತಿರುವ ಅಮ್ಮ ತಪತಿ ವಾಕಿಂಗ್ ಮುಗಿಸಿಕೊಂಡು ಮನೆಗೆ ಮರಳಿದ್ದಾಳೆ. ಇನ್ನೂ ನಿದ್ದೆ ಹೊಡೆಯುತ್ತಿದ್ದ ಅಪ್ಪನ ಪಕ್ಕದಲ್ಲಿ ಮಗುವಿರಲಿಲ್ಲ. ಗಾಬರಿಯಾದ ಅಮ್ಮ ಎಲ್ಲೆಡೆ ಹುಡುಕಲು ಪ್ರಾರಂಭಿಸಿದ್ದಾಳೆ. ಮನೆ ಮೇಲಿದ್ದ ಮಾಲಿಕರ ಮನೆಗೂ ಹೋಗಿ ಬಂದಿದ್ದಾಳೆ. ಮಗು ಎಲ್ಲೂ ಸಿಕ್ಕಿಲ್ಲ. ಕೊನೆಗೆ ತಾನು ಸ್ನಾನದ ಕೋಣೆ ಹುಡುಕದಿರುವುದು ಅರಿವಿಗೆ ಬಂದಿದೆ. ಅಲ್ಲಿ ಹೋದಾಗ ಮಗು ತಲೆಕೆಳಗಾಗಿ ಬಕೇಟಿನಲ್ಲಿ ಬಿದ್ದಿತ್ತು.

ತಕ್ಷಣ ಆತನನ್ನು ಎತ್ತಿಕೊಂಡು ಹತ್ತಿರದ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ಮಗು ತಂದಾಗಲೆ ಪ್ರಾಣ ಬಿಟ್ಟಿತ್ತು ಎಂಬ ಆಘಾತಕರ ಸಂಗತಿ ಹೇಳಿದ್ದಾರೆ. ಅಂದು ಮಳೆಯಾಗುತ್ತಿದ್ದರೂ ಹೋಗಲೋ ಬೇಡವೋ ಎನ್ನುತ್ತಲೇ ಬೆಳಗಿನ ವಾಯುಸೇವನೆಗೆ ಹೋದ ತಪತಿಗೆ ಆ ತಪ್ಪಿನಿಂದಾಗಿ ಮಗುವನ್ನು ಕಳೆದುಕೊಳ್ಳುವಂತಾಯಿತು. ಬಕೇಟಿನಲ್ಲಿ ಬಿದ್ದಾಗ ಮಗು ಅತ್ತಿದ್ದಾಗಲಿ, ಸದ್ದು ಮಾಡಿದ್ದಾಗಲಿ ತನಗೆ ಗೊತ್ತೇ ಆಗಿಲ್ಲ ಎಂದು ಅಪ್ಪ ಸಂಜೋಯ್ ತಿಳಿಸಿದ್ದಾನೆ.

ಕಳೆದ ವರ್ಷ ಇಂಥದೇ ಘಟನೆ ತಮಿಳುನಾಡಿನಲ್ಲಿಯೂ ಘಟಿಸಿತ್ತು. ಅಮ್ಮ ಪಕ್ಕದಲ್ಲಿ ಬಟ್ಟೆ ಒಗೆಯುತ್ತ ಇದ್ದಾಗಲೇ ಬಕೇಟಿನಲ್ಲಿ ಬಿದ್ದು ಮಗುವೊಂದು ಉಸಿರಾಟದ ತೊಂದರೆಯಾಗಿ ಮೃತಪಟ್ಟಿತ್ತು. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಮ್ಮನ ನಿರ್ಲಕ್ಷ್ಯದಿಂದ ಬಾಲ್ಕನಿಯಲ್ಲಿ ಆಡುತ್ತಿದ್ದ ಮಗು ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿತ್ತು. ಇನ್ನೂ ಆಡಾಡುತ್ತಲೇ ಸಂಪಿನಲ್ಲಿ ಬಿದ್ದು ಮೃತರಾಗಿರುವ ಮಕ್ಕಳ ಪಟ್ಟಿ ದೊಡ್ಡದೇ ಇದೆ.

ಇದೇಕೆ ಹೀಗೆ? ಒಂಬತ್ತು ತಿಂಗಳು ಕಷ್ಟಪಟ್ಟು ಹೆತ್ತಿರುವ ತಮ್ಮ ಮಕ್ಕಳ ಬಗ್ಗೆ ಇಷ್ಟೊಂದು ಉದಾಸೀನವೇಕೆ? ಇನ್ನು ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಂತೂ ಮಗು ಇನ್ನಾರದೋ ಬಳಿ ದಿನ ಕಳೆಯುತ್ತಿರುತ್ತದೆ. ಈಗೀಗಂತೂ ಆರು ತಿಂಗಳ ಪುಟ್ಟು ಕೂಸನ್ನು ಕೂಡ ಡೇ ಕೇರಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿದೆ. ಹೋಗಲಿ ಮನೆಯಲ್ಲಿ ಪಾಲಕರು ಕೆಲಸಕ್ಕೆ ಹೋದಾಗ ನೋಡಿಕೊಳ್ಳಲು ಅಜ್ಜ ಅಜ್ಜಿಯರಾದರೂ ಇರುತ್ತಾರಾ? ಅದೂ ಇಲ್ಲ. ಕೋಲ್ಕತಾದ ಘಟನೆ ಎಲ್ಲ ತಂದೆ ತಾಯಿಯರಿಗೆ ಪಾಠವಾಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+