ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಗು ಮುಚ್ಕೊಂಡು ನಡೆಯಿರಿ, ಇದು ಬೆಂಗಳೂರು!

By Prasad
|
Google Oneindia Kannada News

Bangalore stinks BBMP blinks
ಬೆಂಗಳೂರು, ಆ. 22 : ಗಾರ್ಡನ್ ಸಿಟಿ, ಸಿಲಿಕಾನ್ ವ್ಯಾಲಿ, ಪಿಂಚಣಿದಾರರ ಸ್ವರ್ಗ, ಆತ್ಮಹತ್ಯೆಗಳ ನಗರಿ, ಫ್ಲೈಓವರುಗಳ ಸಾಮ್ರಾಜ್ಯ, ದುಬಾರಿ ನಗರ, ಗಾರ್ಬೇಜ್ ಸಿಟಿ... ಬೆಂಗಳೂರಿಗೆ ನೀಡಲಾಗಿರುವ ಈ ಬಿರುದುಗಳಲ್ಲಿ ಯಾವುದು ಅಚ್ಚುಕಟ್ಟಾಗಿ ಒಪ್ಪುತ್ತದೆ? ಅನುಮಾನವೇ ಬೇಡ, ಗಾರ್ಬೇಜ್ ಸಿಟಿ... ಚಪ್ಪಾಳೆ!

ಇದು ತಮಾಷೆಯ ಸಂಗತಿಯೂ ಅಲ್ಲ, ಉತ್ಪ್ರೇಕ್ಷೆಯ ಸಂಗತಿಯೂ ಅಲ್ಲ. ಇಂದು ನಮ್ಮ ಬೆಂಗಳೂರು ಅಕ್ಷರಶಃ ತಿಪ್ಪೆಯ ಗುಂಡಿಯಾಗಿದೆ. ಬೀದಿಬೀದಿಗಳಲ್ಲಿ ಮೂಲೆಮೂಲೆಗಳಲ್ಲಿ ಕಸದ ರಾಶಿ ಚೆಲ್ಲಾಪಿಲ್ಲಿಯಾಗಿದೆ. ಹೇಳುವವರಿಲ್ಲ ಕೇಳುವವರಿಲ್ಲ. ಮೂಗು ಮುಚ್ಚಿಕೊಂಡು ಓಡಾಡದೆ ಜನರಿಗೆ ಬೇರೆ ಗತಿಯಿಲ್ಲದಂತಾಗಿದೆ. ಬೆಂಗಳೂರನ್ನು ಸುಂದರವಾಗಿಸುವ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿ ಮಾತ್ರ ತಿಪ್ಪೆ ಗುಂಡಿಯಲ್ಲಿಯೇ ಏನಾದರೂ ಸಿಗುತ್ತದೇನೋ ಎಂದು ನೋಡುತ್ತಿದೆ.

ಬೃಹತ್ ಬೆಂಗಳೂರಲ್ಲಿ ಕಸ ವಿವೇವಾರಿಯಾಗದೇ ನಾಲ್ಕು ದಿನಗಳೇ ಕಳೆದಿವೆ. ಸಂಜೆ, ರಾತ್ರಿ ಮಳೆ ಸುರಿಯುತ್ತಿರುವುದರಿಂದ ಕಸದಿಂದ ಸ್ಫುರಿಸುತ್ತಿರುವ ದುರ್ನಾತ ಬಹುಮಹಡಿ ಕಟ್ಟಡಗಳಲ್ಲಿ ವಾಸಿರುವವರ ಮೂಗಿಗೂ ಬಡಿಯುವಂತಾಗಿದೆ. ಆದರೆ, ಅನುಭವಿಸುತ್ತಿರುವವರು ಮಾತ್ರ ಆ ಕಸದ ರಾಶಿಯ ಬಳಿ ವಾಸವಿರುವ ಜನರು. ಮೂಗು ಮುಚ್ಚುವ ಹಾಗೂ ಇಲ್ಲ, ತೆರೆಯುವ ಹಾಗೂ ಇಲ್ಲ. ಇದರಿಂದಾಗಿ ಸೊಳ್ಳೆಗಳ ಕಾಟ ವಿಪರೀತ ಹೆಚ್ಚಾಗಿ ಜನರು ಆಸ್ಪತ್ರೆಗಳಿಗೆ ಓಡಾಡುವಂತಾಗಿದೆ.

ಬೃಹತ್ ಬೆಂಗಳೂರಲ್ಲಿ ದಿನನಿತ್ಯ ಉತ್ಪಾದನೆಯಾಗುವ ಕಸ 3ರಿಂದ 4 ಸಾವಿರ ಟನ್, ಹಬ್ಬದ ದಿನಗಳಾದ್ರೆ ಒಂದು ಸಾವಿರ ಟನ್. ಉತ್ಪತ್ತಿಯಾಗೋ ತ್ಯಾಜ್ಯದಲ್ಲಿ, ಘನ ತ್ಯಾಜ್ಯ, ಹಸಿ ತ್ಯಾಜ್ಯ, ಎಲೆಕ್ಟ್ರಾನಿಕ್ ತ್ಯಾಜ್ಯ, ಮೆಡಿಕಲ್ ತ್ಯಾಜ್ಯ, ರಾಸಾಯನಿಕ ತ್ಯಾಜ್ಯ ಅಂತ ವಿಂಗಡಣೆ ಮಾಡಬಹುದು. ಈ ತ್ಯಾಜ್ಯವನ್ನು ಪ್ರಮುಖ ಡಂಪಿಂಗ್ ಯಾರ್ಡ್‌ಗಳಾದ ಮಾವಳ್ಳಿಪುರ, ಮಂಡೂರು, ಟೆರ್ರಾ ಫಾರ್ಮ್‌ನಲ್ಲಿ ಡಂಪ್ ಮಾಡಲಾಗುತ್ತೆ. ಇನ್ನು ಕಟ್ಟಡದ ಡೆಬ್ರೀಸ್‌ದು ದೊಡ್ಡ ಸಮಸ್ಯೆ.

ತೋಪಾದ ಪ್ಲಾನ್! : ಕಸದಿಂದ ರಸ ತಯಾರಿಸುವ ಪ್ರಮುಖ ಪ್ಲಾನ್‌ಗಳು ನೆನೆಗುದಿಗೆ ಬಿದ್ದಿವೆ. ಕಸದಿಂದ ಕರೆಂಟ್ ಉತ್ಪಾದನೆ ಮಾಡೋ ಪ್ಲಾನ್ ಬಗ್ಗೆ ಕೇಳಿದರೆ ಕರೆಂಟು ಹೊಡೆದವರ ತರಹ ಆಡುತ್ತಾರೆ ಅಧಿಕಾರಿಗಳು. ಪ್ಲಾಸ್ಟಿಕ್ ಬಳಸಿ ರೋಡು ನಿರ್ಮಾಣ ಮಾಡ್ತೀವಿ ಅನ್ನೋ ಐಡಿಯಾ ಕೂಡ ಡಸ್ಟ್‌ಬಿನ್‌ಗೆ ಬಿದ್ದಿದೆ. ಇನ್ನು ಸರಿಯಾಗಿ ನಿರ್ವಹಣೆ ಮಾಡದೇ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿರೋದು ಡಂಪಿಂಗ್ ಯಾರ್ಡ್‌ಗಳ ಒಪ್ಪಂದ ಉಲ್ಲಂಘನೆ. ಒಪ್ಪಂದದ ಪ್ರಕಾರ ಯಾರೂ ಕೂಡ ನಿರ್ವಹಣೆ ಮಾಡ್ತಿಲ್ಲ.

ಸಾರ್ವಜನಿಕರೂ ಕಾರಣ : ಕಸ ವಿಲೇವಾರಿಯಲ್ಲಿ ಬರಿ ಬಿಬಿಎಂಪಿಯದು ತಪ್ಪಿಲ್ಲ, ನಮ್ಮ ಜನರದೂ ತಪ್ಪಿದೆ. ಹಸಿ ತ್ಯಾಜ್ಯ ಮತ್ತು ಘನ ತ್ಯಾಜ್ಯವನ್ನು ವಿಂಗಡಿಸಿ ಕೊಡಬೇಕು ಎಂದು ತಾಕೀತು ಮಾಡಿದ್ದರೂ ಪಾಲಿಸುವವರೆಷ್ಟು? ಹೋಗಲಿ ಕಸವನ್ನಾದರೂ ಎಸೆಯಬೇಕಾದ ಜಾಗದಲ್ಲಾದರೂ ಎಸೆಯುತ್ತಾರಾ? ಅದೂ ಇಲ್ಲ. ಏನೂ ಗೊತ್ತಿಲ್ಲದವರ ಹಾಗೆ ಅಮಾಯಕರಂತೆ ಬಂದು ಪಟಕ್ಕನೆ ಕಸ ರಸ್ತೆಯಲ್ಲೇ ಎಸೆದು, ತಿರುಗಿ ಕೂಡ ನೋಡದೆ, ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೋಗುವವರೇ ಎಲ್ಲ. ನಾವು ಹಾಗೆ ಮಾಡಲ್ಲ ಅಂತ ಎದೆತಟ್ಟಿ ಯಾರಾದರೂ ಹೇಳಲಿ ನೋಡೋಣ.

ಡಂಪಿಂಗ್ ಯಾರ್ಡ್ ಸಮಸ್ಯೆ : ಇವೆರಡು ಸಮಸ್ಯೆಗಳು ಒಂದು ರೀತಿಯವಾದರೆ, ಕಸ ವಿಲೇವಾರಿಯ ಕಥೆ ಇನ್ನೂ ವಿಭಿನ್ನ. ಡಂಪಿಂಗ್ ಯಾರ್ಡ್‌ಗಳಲ್ಲಿ ಸರಿಯಾಗಿ ಕಸ ನಿರ್ವಹಣೆ ಮಾಡಿದ್ದಿದ್ರೆ, ಯಾರ್ಡ್ ಸುತ್ತಲ ಹಳ್ಳಿಯ ನೀರು ವಿಷವಾಗ್ತಿರಲಿಲ್ಲ. ಅಲ್ಲಿನ ಜನರು ಕಸ ಹಾಕೋಕೆ ಅಡ್ಡಿ ಮಾಡ್ತಿರಲಿಲ್ಲ. ಡಂಪಿಂಗ್ ಯಾರ್ಡ್ ಸರಿಯಾಗಿ ನಿರ್ವಹಿಸಿ, ಗೊಬ್ಬರ ಕೊಡ್ತೀವಿ, ಕರೆಂಟ್ ಕೊಡ್ತೀವಿ ಅಂತ ನಂಬಿಸಿದ ಬಿಬಿಎಂಪಿ, ಕೊನೆಗೆ ಹಳ್ಳಿಗಳಿಗೆ ಕೊಟ್ಟಿದ್ದ ಕೈ ಮಾತ್ರ. ಇನ್ನು ಹಳ್ಳಿಯ ಜನರಾದರೂ ವಿರೋಧಿಸದೆ ಇನ್ನೇನು ಮಾಡಿಯಾರು.

ಈ ಎಲ್ಲದರಿಂದಾಗಿ ಈಗ ಬೆಂಗಳೂರಿನ ಸ್ಮಶಾನಗಳು, ರಸ್ತೆಗಳು, ಖಾಲಿ ಜಾಗಗಳೇ ಡಂಪಿಂಗ್ ಯಾರ್ಡ್‌ಗಳಾಗಿ ಮಾರ್ಪಟ್ಟಿದೆ. ನೂತನ ಜಾಗ ಹುಡುಕಿ ಕಸ ವಿಲೇವಾರಿ ಶುರು ಮಾಡುವವರೆಗೂ ಇದೇ ಸಮಸ್ಯೆ ಮುಂದುವರಿಲಿದೆ ಅಂತ ಕಮೀಷನರ್ ಶಂಕರಲಿಂಗೇಗೌಡ ಹೇಳಿದ್ದಾರೆ. ಹೀಗಾಗಿ ಕಸದ ಊರಾಗಿರೋ ಬೆಂಗಳೂರು, ಇನ್ನಷ್ಟು ದಿನ ತನ್ನ ಒಡಲಲ್ಲಿಯೇ ಕಸ ಇಟ್ಕೊಬೇಕಾದ ಸ್ಥಿತಿ ಇದೆ. ಈ ಕಸದ ರಾಶಿಯಿಂದ ಹೊರಹೊಮ್ಮುತ್ತಿರುವ ದುರ್ವಾಸನೆ ಸರಕಾರದ ಮೂಗಿಗೆ ಬಡಿದಿಲ್ಲದಿರುವುದು ವಿಪರ್ಯಾಸದ ಸಂಗತಿ.

ಓದುಗರಲ್ಲಿ ವಿನಂತಿ : ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಬಡಾವಣೆಯಲ್ಲಿ ಅಥವಾ ನಿಮಗೆ ಕಂಡಲ್ಲೆಲ್ಲ ಕಸವನ್ನು ಎಲ್ಲೆಂದರಲ್ಲಿ ಚೆಲ್ಲಾಡಿದ್ದರೆ ಅಂತಹ ದೃಶ್ಯವನ್ನು ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ನಮಗೆ ಕಳಿಸಿಕೊಡಿ. ಫೋಟೋ ಕಳಿಸಲು ವಿಳಾಸ : [email protected]

English summary
Bangalore continues to stink for the 4th day as garbage clearance system is thrown out of bin. BBMP commissioner searching Google maps to locate garbage dumping yards. The mayor Venkatesh Murthy and his fellow corporators just blink at the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X