ಕರ್ನಾಟಕದಲ್ಲಿ ನೆಟ್ವರ್ಕ್ ಆಫ್ ಮಾಡಿದ ಯುನಿನಾರ್

ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದ ಅನ್ವಯ ಯುನಿನಾರ್ ಸಂಸ್ಥೆಯ ಲೈಸೆನ್ಸ್ ರದ್ದಾಗಿತ್ತು. 13 ವೃತ್ತಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಸದ್ಯ ನಾಲ್ಕು ವೃತ್ತಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ. ಆದರೆ 2ಜಿ ಹರಾಜು ಪ್ರಕ್ರಿಯೆಯ ಬಿಡ್ ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ.
ತನ್ನ ಆಕರ್ಷಕ ಪ್ಲಾನ್ ಗಳಿಂದ ಯುನಿನಾರ್ 44.5 ಗ್ರಾಹಕರನ್ನು ಹೊಂದಿದೆ. ಜುಲೈ ಒಂದೇ ತಿಂಗಳಲ್ಲಿ 1.7 ಮಿಲಿಯನ್ ಹೊಸ ಗ್ರಾಹಕರು ಸೇರ್ಪಡೆ ಯಾಗಿದ್ದರು. ಈಗಾಗಲೇ ಹೊಸ ಕನೆಕ್ಷನ್, ರಿಚಾರ್ಜ್ ಸೌಲಭ್ಯಗಳನ್ನು ಸಂಸ್ಥೆ ಬಂದ್ ಮಾಡಿದೆ.
ಆಗಸ್ಟ್ 31 ರಂದು ಯುನಿನಾರ್ ನೆಟ್ವರ್ಕ್ ಬಂದ್ ಆಗಲಿದ್ದು ಬಾಕಿ ಉಳಿದಿರುವ ಮೊತ್ತವನ್ನು ನಿಗದಿತ ಅವಧಿಯೊಳಗೆ ಉಪಯೋಗಿಸಿಕೊಳ್ಳುವಂತೆ ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಸಂಸ್ಥೆ ವಿನಂತಿಸಿ ಕೊಂಡಿದೆ.
2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 122 ಟೆಲಿಕಾಂ ಸಂಸ್ಥೆಗಳ ಲೈಸನ್ಸ್ ರದ್ದುಗೊಳಿಸುವಂತೆ ಸೂಚಿಸಿತ್ತು. ಕಾನೂನು ಪ್ರಕಾರ ಯಾವ ರೀತಿ ಹೋರಾಟ ಸಾಧ್ಯ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಭಾರತ ಬಿಟ್ಟು ಹೋಗುವ ಯಾವುದೇ ಯೋಚನೆಗಳಿಲ್ಲ ಎಂದು ಯುನಿನಾರ್ ಸಂಸ್ಥೆ ಈ ಹಿಂದೆ ಪ್ರಕಟಿಸಿತ್ತು.
ನಾರ್ವೆ ಮೂಲದ ಟೆಲಿನಾರ್ ಸಮೂಹ ಹಾಗೂ ಭಾರತದ ಯುನಿಟೆಕ್ ಲಿ ಜಂಟಿಯಾಗಿ ಯುನಿನಾರ್ ಸ್ಥಾಪಿಸಿ, ಉತ್ತಮ ಪ್ರಗತಿಯನ್ನು ಕಂಡಿತ್ತು. ಭಾರತದಲ್ಲಿ ಟೆಲಿಕಾಂ ಕ್ಷೇತ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆ ಉತ್ತಮವಾಗಿದೆ.
ನಾವು ಭಾರತಲ್ಲಿ ವಹಿವಾಟು ಮುಚ್ಚುವ ಸಂಭವವಿಲ್ಲ ಎಂದು ಯುನಿಟೆಕ್ ನ ವ್ಯವಸ್ಥಾಪಕ ನಿರ್ದೇಶಕ ಸಿಗ್ವೆ ಬ್ರೆಕ್ಕೆ ಹೇಳಿದ್ದರು. ಆದರೆ ಸುಪ್ರೀಂಕೋರ್ಟ್ ಆದೇಶ ಸಂಸ್ಥೆಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.
ಯುನಿನಾರ್ ಸೇರಿದಂತೆ 2008ರ ನಂತರ ಲೈಸನ್ಸ್ ಪಡೆದ ಎಲ್ಲಾ ಜಿಎಸ್ಎಂ ಸೇವಾ ಸಂಸ್ಥೆಗಳ ಲೈಸನ್ಸ್ ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನಲೆಯಲ್ಲಿ ಯುನಿನಾರ್ ನಾಲ್ಕು ರಾಜ್ಯಗಳಲ್ಲಿನ ತನ್ನ ಸೇವೆಯನ್ನು ಆಗಸ್ಟ್ 31 , 2012 ರಿಂದ ಅನ್ವಯವಾಗುವಂತೆ ಸ್ಥಗಿತಗೊಳಿಸಲಿದೆ.












Click it and Unblock the Notifications