ಶ್ರೀರಾಮುಲುಗೆ ಎಸಿಬಿ ವಿಚಾರಣೆ ಭೀತಿ ಇಲ್ಲವಂತೆ

ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ.ಶ್ರೀರಾಮುಲು ಅವರು ತಮ್ಮ ಪಕ್ಷದ ಕಚೇರಿಯಲ್ಲಿ ಮಾತನಾಡಿ, ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ನಾನು ವಿಚಾರಣೆಗೆ ಹಾಜರಾಗಿ ಸಾಕ್ಷಿ ಹೇಳಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀರಾಮುಲು ಅವರು ಎಸಿಬಿ ವಿಚಾರಣೆಗೆ ಒಳಪ್ಡುತ್ತಿರುವುದರಿಂದ ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಕ್ಷದ ಮತ್ತೊಂದು ಯಾತ್ರೆ ಮುಂದೂಡುವ ಸಾಧ್ಯತೆಗಳಿದೆ. ಸಮಾನತೆ, ಸಮಬಾಳ್ವೆ, ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಆ.23ರಿಂದ ಮೂರು ಜಿಲ್ಲೆಗಳಲ್ಲಿ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಪಕ್ಷದ ವಕ್ತಾರರು ಪ್ರಕಟಿಸಿದ್ದರು.
ಬೆಳಗಾವಿಯ ನಂದಗಡದಿಂದ ಆರಂಭವಾಗಲಿರುವ ಯಾತ್ರೆ. ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಚರಿಸುವ ಉದ್ದೇಶ ಹೊಂದಿದೆ ಎಂದು ಶ್ರೀರಾಮುಲು ವಿವರಿಸಿದರು.ಆ.23ರಿಂದ 30 ಬೆಳಗಾವಿ, ಸೆ.3ರಿಂದ 9 ಬಿಜಾಪುರ, ಸೆ.12ರಿಂದ 18ರ ವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿನ ಒಟ್ಟು 34 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ. ಹಲವು ಕಡೆಗಳಲ್ಲಿ ಬಹಿರಂಗ ಸಮಾವೇಶ ನಡೆಸಲಾಗುವುದು ಎಂದು ಪಕ್ಷದ ಪ್ರಕಟಣೆ ಹೇಳಿದೆ.
ಮಾಜಿ ಸಿಎಂ ಯಡಿಯೂರಪ್ಪ ನಡೆಸಲು ಉದ್ದೇಶಿಸಿರುವ ರಾಜ್ಯ ಪ್ರವಾಸ ಕೇವಲ ನಾಟಕ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿ 8-10 ತಿಂಗಳು ಕಳೆದ ನಂತರ ಈಗ ಪ್ರವಾಸ ಕೈಗೊಳ್ಳುತ್ತಿರುವುದು ಹಾಸ್ಯಾಸ್ಪದ. ಈ ಪ್ರವಾಸದ ಹಿಂದೆ ರಾಜಕೀಯ ಲಾಭದ ಹುನ್ನಾರ ಅಡಗಿದೆ ಎಂದು ಶ್ರೀರಾಮುಲು ಇದೇ ವೇಳೆ ಟೀಕಿಸಿದ್ದಾರೆ.
ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ರೈತರ ಸಂಕಷ್ಟಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ರೈತರ ಸಾಲಮನ್ನಾ ಸಂಬಂಧ ಘೋಷಣೆ ಮಾಡಿದ್ದೂ, ಇದುವರೆಗೂ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿಂದರೆ ಬಂಧಿತರಾಗಿರುವ ಕಂಪ್ಲಿ ಶಾಸಕ ಸುರೇಶ್ ಬಾಬು, ಸೋಮಶೇಖರ್ ರೆಡ್ಡಿ ಅವರು ವಿಚಾರಣೆ ಸಂದರ್ಭದಲ್ಲಿ ಶ್ರೀರಾಮುಲು ಅವರ ಅಣತಿಯಂತೆ ಬೇಲ್ ಗಾಗಿ ಡೀಲ್ ಕುದುರಿಸಲಾಯಿತು ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ರೌಡಿಶೀಟರ್ ಯಾದಗಿರಿ ರಾವ್ ಗೆ 20 ಕೋಟಿ ರು ನೀಡುವಂತೆ ಶ್ರೀರಾಮುಲು ಹೇಳಿದ್ದರು. ನಂತರ ಉದ್ಯಮಿ ಸೂರ್ಯ ಪ್ರಕಾಶ್ ಬಾಬು ಅವರ ಮುಖಾಂತರ ಜಡ್ಜ್ ಗಳ ಸಂಪರ್ಕ ಸಾಧಿಸಲಾಯಿತು. ಯಾದಗಿರಿಗೆ 10 ಕೋಟಿ ರು ಅಡ್ವಾನ್ಸ್ ನೀಡಲಾಗಿತ್ತು ಎಂದು ಸುರೇಶ್ ಬಾಬು ಹೇಳಿದ್ದಾರೆ.
ಅದರಲ್ಲಿ 3 ಕೋಟಿ ರು ಗಳನ್ನು ಮಾತ್ರ ಜಡ್ಜ್ ಪಟ್ಟಾಭಿಗೆ ನೀಡಿದ್ದ ಉಳಿದ ಹಣವನ್ನು ಜೇಬಿಗಿಳಿಸಿಕೊಂಡಿದ್ದ. 20 ಕೋಟಿ ಡೀಲ್ ಪೈಕಿ ಎಸಿಬಿ ವಶಕ್ಕೆ 6.50 ಕೋಟಿ ರು ಸಿಕ್ಕಿದೆ. ಉಳಿದ ಹಣ ಹಾಗೂ ಡೀಲ್ ಕುದುರಿಸಲು ಹಣ ರವಾನೆ ಮಾಡಿದ ರೀತಿಯ ಬಗ್ಗೆ ಶ್ರೀರಾಮುಲು ಅವರನ್ನು ಎಸಿಬಿ ಪ್ರಶ್ನಿಸಲಿದೆ.












Click it and Unblock the Notifications