ಅಸ್ಸಾಮಿಗಳ ಮೇಲೆ ಹಲ್ಲೆ ಪ್ರಕರಣ, 6 ಜನ ಸೆರೆ
ಯುವಕರ ಗುಂಪೊಂದು ಈಶಾನ್ಯ ರಾಜ್ಯಗಳ ಯುವಕರ ಮೇಲೆ ಹಲ್ಲೆ ನಡೆಸಿ ನಗದು, ಆಭರಣಗಳನ್ನು ದರೋಡೆ ಮಾಡಿದ್ದರು. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಈ ಸಂಬಂಧ ಒಟ್ಟು 6 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು.
ಆರೋಪಿಗಳ ಪೈಕಿ 22 ವರ್ಷದ ಅಬ್ರಹಾಂ ಅಬ್ರಾರ್ ಹಾಗೂ ವಿನಯ್ ಎಂಬುವರನ್ನು ಗುರುತಿಸಲಾಗಿದೆ. ಅಬ್ರಹಾಂ ಬಿಗ್ ಬಜಾರ್ ನಲ್ಲಿ ಸೇಲ್ಸ್ ವಿಭಾಗದ ಉದ್ಯೋಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ತ್ವರಿತ ಕಾರ್ಯಾಚರಣೆಯಲ್ಲಿ ಇನ್ನು ಅನೇಕ ಆರೋಪಿಗಳನ್ನು ಬಂಧಿಸಲಾಗಿದೆ. ಆತಂಕ ಪಡುವ ಕಾರಣವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಜೆ.ಪಿ.ನಗರ, ಅಶೋಕನಗರ, ಮೈಕೊ ಲೇಔಟ್ ಠಾಣೆಗಳಲ್ಲಿ ಆರು ಹಲ್ಲೆ ಪ್ರಕರಣಗಳು ದಾಖಲಾಗಿದೆ. ಶಾಂತಿನಗರ ಬಳಿಯ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಅಬ್ರಾರ್ ಅಹಮ್ಮದ್, ವಿನಯ್, ಸಲ್ಮಾನ್ ಬಂಧಿತರು. ಈ ಸಂಬಂಧ ಜಯನಗರದ ನಿವಾಸಿ ಲಿಯಾ ಲಿಯಾ ವೈಫೈ ಎಂಬುವರು ದೂರು ನೀಡಿದ್ದಾರೆ ಎಂದು ವಿಲ್ಸನ್‌ಗಾರ್ಡನ್ ಪೊಲೀಸರು ಹೇಳಿದ್ದಾರೆ.
ಉಳಿದೆಡೆ ಕೂಡಾ ಬಂಧನ: ವದಂತಿ ಹಬ್ಬಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸ್ಸಾಂನಲ್ಲಿ 170 ಮಂದಿಯನ್ನು ಬಂಧಿಸಲಾಗಿದೆ. ಮುಂಬೈ ಹಾಗೂ ಪುಣೆಯಲ್ಲಿ ಕ್ರಮವಾಗಿ 24 ಹಾಗೂ 13 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಮಾಹಿತಿ ನೀಡಿದ್ದಾರೆ.
ಅಸ್ಸಾಂನತ್ತ ಜನಪ್ರವಾಹ: ಹಲ್ಲೆ ಭೀತಿ ಹಾಗೂ ವದಂತಿಗಳ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯದ ಜನರ ಭೀತಿ ಇನ್ನೂ ತಗ್ಗಿಲ್ಲ. ಎರಡು ವಿಶೇಷ ರೈಲು ಹಾಗೂ ದೈನಿಕ ರೈಲಿನ ಮೂಲಕ 10 ಸಾವಿರಕ್ಕೂ ಅಧಿಕ ಮಂದಿ ಬೆಂಗಳೂರಿನಿಂದ ಶುಕ್ರವಾರ ಈಶಾನ್ಯ ರಾಜ್ಯಗಳಿಗೆ ತೆರಳಿದ್ದಾರೆ.
ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಿದ ಹಿನ್ನೆಲೆಯಲ್ಲಿ 4,500ಕ್ಕೂ ಅಧಿಕ ವಲಸಿಗರನ್ನು ಹೊತ್ತ 20 ಬೋಗಿಯ ವಿಶೇಷ ರೈಲು ಸಂಜೆ ನಾಲ್ಕು ಗಂಟೆಗೆ ನಿರ್ಗಮಿಸಿತು. ರಾತ್ರಿ 10 ಗಂಟೆಗೆ ಹೊರಟ 17 ಬೋಗಿಯ ವಿಶೇಷ ರೈಲಿನಲ್ಲೂ ಅಷ್ಟೇ ಸಂಖ್ಯೆಯ ಜನರು ತಮ್ಮೂರಿಗೆ ತೆರಳಿದರು.
ಶುಕ್ರವಾರದ ಮೂರು ರೈಲಿನಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ತೆರಳಿದ್ದಾರೆ. ಸಂಜೆ ವೇಳೆಗೆ 7,000 ಟಿಕೆಟ್‌ಗಳು ಮಾರಾಟವಾಗಿವೆ. ನೂರಾರು ಮಂದಿ ಇದೇ 20ರ ನಂತರ ತೆರಳಲು ನಿರ್ಧರಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಸಾಕಷ್ಟು ಮಂದಿ ಮುಂಚಿತವಾಗಿಯೇ ತೆರಳಿದ್ದರಿಂದ ಇಲಾಖೆಯಿಂದ ಪ್ರಯಾಣಿಕರಿಗೆ ಎಂಟು ಲಕ್ಷ ರೂಪಾಯಿ ಮರುಪಾವತಿ ಮಾಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.













Click it and Unblock the Notifications