ಗಂಟಲುಬೇನೆ ನಡುವೆಯೇ ಯಡಿಯೂರಪ್ಪ ರಾಜ್ಯ ಪ್ರವಾಸ

ಸ್ವಾಮಿ ಕಾರ್ಯ ಮತ್ತು ಸ್ವಕಾರ್ಯ ಹೀಗೆ ಎರಡಕ್ಕೂ ಒತ್ತು ನೀಡಿರುವ ಬಿಎಸ್‌ವೈ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಾ, ತಮ್ಮ ಮುಂದಿನ ರಾಜಕೀಯ ನಡೆ ಏನೆಂಬುದನ್ನು ನಿರ್ಧರಿಸುವುದಕ್ಕೆ ಈ ಅವಕಾಶವನ್ನು ಬಳಸಿಕೊಳ್ಳುವುದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬರ ಪ್ರವಾಸ ನೆಪದಲ್ಲಿ ಮತದಾರನ ನಾಡಿ ಮಿಡಿತ ಅರಿಯುವುದು ಪ್ರವಾಸದ ಒಳಾಂತರ್ಯವಾಗಿದೆ.
ಇಲ್ಲವಾದಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ದಿನದಂದೇ ಸಾಂಕೇತಿಕವಾಗಿ ರಾಜ್ಯ ಪ್ರವಾಸ ಕೈಗೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಆದರೆ ಮೊನ್ನೆ ಸೋಮವಾರದಿಂದ ಯಡಿಯೂರಪ್ಪ ಅವರನ್ನು ಗಂಟಲು ಬೇನೆ ಕಾಡುತ್ತಿದೆ.
ತಮ್ಮ ಆತ್ಮೀಯ ಗೆಳೆಯನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದಾರೆ. ಒಂದು ವಾರ ಹೆಚ್ಚು ಮಾತನಾಡದೆ, ಆಯಾಸ ಮಾಡಿಕೊಳ್ಳದೆ, ವಿಶ್ರಾಂತಿ ಪಡೆಯುಂತೆ ವೈದ್ಯರು ಸಲಹೆ ನೀಡಿದ್ದರಿಂದ ಪ್ರವಾಸ ತಡವಾಗಿ ಆರಂಭವಾಗಲಿದೆ.
ಯಡಿಯೂರಪ್ಪ ಬಣದೊಂದಿಗೆ ಗುರುತಿಸಿಕೊಂಡಿರುವ ಅನೇಕ ಸಚಿವರು ಹಾಗೂ ಶಾಸಕರು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಜಿಲ್ಲೆ, ಕ್ಷೇತ್ರಗಳಿಗೆ ತೆರಳಿರುವುದರಿಂದ ಗುರುವಾರ ಅಥವಾ ಶುಕ್ರವಾರ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಅವರೆಲ್ಲ ರಾಜಧಾನಿಗೆ ವಾಪಸಾಗುತ್ತಿದ್ದಂತೆ ಯಡಿಯೂರಪ್ಪ ಅವರ ಪ್ರವಾಸದ ರೂಪುರೇಷೆ ಅಂತಿಮಗೊಳ್ಳುವ ಸಂಭವವಿದೆ ಎಂದು ಯಡಿಯೂರಪ್ಪ ಆಪ್ತರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಹತ್ತು ದಿನಗಳಲ್ಲಿ ಎಂಟು ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಯೋಚನೆ ಇದೆ.
ಬರ ಪ್ರವಾಸದ ವೇಳೆ ಯಡಿಯೂರಪ್ಪ ಅವರು ಏನೆಲ್ಲ ಮಾತನಾಡುತ್ತಾರೆ? ಯಾವ ರೀತಿ ಮಾತನಾಡುತ್ತಾರೆ? ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವರೊ ಅಥವಾ ತಮ್ಮದೇ ಪಕ್ಷ ಅಥವಾ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸುವರೊ ಎಂಬುದು ಕುತೂಹಲ ಕೆರಳಿಸಿದೆ.
ಅದೃಷ್ಟದ ಬೆನ್ನೇರಿ 'ಫಾರ್ಚೂನರ್' ಪ್ರವಾಸ: ಯಡಿಯೂರಪ್ಪ ಅವರನ್ನು ಬರ ಪ್ರದೇಶಗಳತ್ತ ಕರೆದೊಯ್ಯಲು ಟೊಯೋಟಾ ಫಾರ್ಚೂನರ್ ಮತ್ತು ಟೆಂಪೋ ಟ್ರಾವೆಲರ್ ಎಂಬೆರಡು ವಾಹನಗಳು ಹೈಟೆಕ್ ಸ್ಪರ್ಶದೊಂದಿಗೆ ಸಜ್ಜಾಗಿ ನಿಂತಿವೆ.












Click it and Unblock the Notifications