ಸೆ.8ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಚಾಲನೆ?
ನಿಧಾನ ಗತಿಯಿಂದ ಸಾಗುತ್ತಿರುವ ಕಾಮಗಾರಿ ಎರಡು ವರ್ಷವಾದರೂ ಮುಗಿಯುವುದಿಲ್ಲ ಎನ್ನುವಂತಿದ್ದರೂ ಮುಂದಿನ ತಿಂಗಳೊಳಗೆ ಕಾಮಗಾರಿ ಮುಗಿಸುವುದು ಹೇಗೆ ಎಂದು ರಾಹಿ ಡೆವಲಪರ್ಸ್ ತಲೆ ಮೇಲೆ ಕೈ ಹೊತ್ತು ಕುಳಿತಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಕುರಿತು ಗುರುವಾರ (ಆ.16) ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು, ಡೆವಲರ್ಸ್, ಕೈಗಾರಿಕೋದ್ಯಮಿಗಳೊಂದಿಗೆ ಈಶ್ವರಪ್ಪ ಸಭೆ ನಡೆಸಿದರು. ರನ್ ವೇ ಸೇರಿದಂತೆ ವಿಮಾನ ನಿಲ್ದಾಣ ಕಾಮಗಾರಿಗೆ ಅಗತ್ಯವಿರುವ ಸಮಸ್ಯೆಗಳನ್ನು ನಿವಾರಣೆಯಾಗಿದ್ದರೂ ಕಾಮಗಾರಿ ವಿಳಂಬ ಮಾಡುತ್ತಿರುವ ಬಗ್ಗೆ ರಾಹಿ ಡೆವಲಪರ್ಸ್ ಮುಖ್ಯಸ್ಥರನ್ನು ತರಾಟೆಗೆ ಈಶ್ವರಪ್ಪ ತೆಗೆದುಕೊಂಡರು.
ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ.ವಿ.ವೇದಮೂರ್ತಿ, ಒಟ್ಟು 758.38 ಎಕರೆ ಭೂಮಿಯನ್ನು ವಿಮಾನ ನಿಲ್ದಾಣಕ್ಕಾಗಿ ಗುರುತಿಸಲಾಗಿದ್ದು ಈವರೆಗೆ 653.12 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಅವರ ಅಧ್ಯಕ್ಷತೆಯನ್ನು ಸಭೆ ನಡೆಸಿ 6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದಂತೆ 5 ಕೋಟಿ ರೂ. ಪರಿಹಾರ ಕೊಡಬೇಕಿದೆ.ಈ ಸಂಬಂಧ 54 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಅರ್ಧ ಕಿ.ಮೀ. ರನ್ ವೇ ವಿಸ್ತರಿಸುವ ಪ್ರಸ್ತಾವವಿದೆ ಅಲ್ಲದೆ ವಿಮಾನ ನಿಲ್ದಾಣ ಭಾಗದ ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಕರ್ನಾಟಕ ವಿದ್ಯುತ್ ಸರಬರಾಜು ನಿಗಮಕ್ಕೆ ಅಗತ್ಯವಿರುವ ಹಣ ತುಂಬಲಾಗಿದೆ. ರನ್ ವೇ ವಿಭಾಗದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಎತ್ತರದ ಚಿಮಣಿಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಶೇ.60ರಷ್ಟು ವಿಮಾನ ನಿಲ್ದಾಣ ಪ್ರಕ್ರಿಯೆ ಮುಗಿದಿದ್ದು ಕೇವಲ ಶೇ.40 ರಷ್ಟು ಬಾಕಿ ಇದ್ದು ಬರುವ ವಾರಾಂತ್ಯದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಕಾಮಗಾರಿ ಕುರಿತು ವಿವರ ನೀಡಿದ ರಾಹಿ ಡೆವಲಪರ್ಸ್ ಮುಖ್ಯಸ್ಥ ರಾಜಗೋಪಾಲ್ ಜೋಷಿ, ಮಳೆಗಾಲ ಮುಗಿದ ನಂತರ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.
ಭೂಮಿ ಹಸ್ತಾಂತರ ಮಾಡಿದ್ದರೂ ಕಾಮಗಾರಿ ಆರಂಭಿಸದಿರುವ ಬಗ್ಗೆ ಈಶ್ವರಪ್ಪ ಅವರು ಆಕ್ಷೇಪಿಸಿದ್ದರಿಂದ, ಅಕ್ಟೋಬರ್ 15 ರಿಂದ ಕಾಮಗಾರಿಗಳು ಆರಂಭವಾಗಲಿವೆ. 2013 ಜುಲೈ ತಿಂಗಳಿಗೆ ಕಾಮಗಾರಿಗಳು ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.
ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿ ಹಿರೇಮಠ, ಜಿಲ್ಲಾ ಮಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಂಜಯ್ ಬಿಜ್ಜೂರು, ಅಪರ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.













Click it and Unblock the Notifications