4 ಟ್ರಿಲಿಯನ್ ಸಾಫ್ಟ್ ವೇರ್ ರಫ್ತು , 20 ಲಕ್ಷ ಉದ್ಯೋಗ

ದೇಶದ ಒಟ್ಟು ಸಾಫ್ಟ್ ವೇರ್ ರಫ್ತಿನಲ್ಲಿ ಶೇ 40 ರಷ್ಟು ಪಾಲು ಹೊಂದಿರುವ ಕರ್ನಾಟಕ, ಮುಂಬರುವ ಆರ್ಥಿಕ ವರ್ಷಗಳಲ್ಲಿ ಸೂಕ್ತ ಪ್ರಗತಿ ಕಾಣಲು ಯೋಜನೆ ಹಾಕಿಕೊಂಡಿದೆ. ವಾರ್ಷಿಕ ಸಾಫ್ಟವೇರ್ ರಫ್ತು ಪ್ರಮಾಣವನ್ನು 2020ರ ವೇಳೆಗೆ 4 ಲಕ್ಷ ಕೋಟಿ ರು.ಗೆ ಏರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
2011-12ರಲ್ಲಿ 135 ಕೋಟಿ ವಾರ್ಷಿಕ ರಫ್ತು ಮಾತ್ರ ದಾಖಲಾಗಿದೆ. ಇದರ ಜೊತೆಗೆ 8 ಲಕ್ಷದಷ್ಟಿರುವ ಉದ್ಯೋಗ ಅವಕಾಶವನ್ನು 20 ಲಕ್ಷ ನೇಮಕಾತಿಗೆ ಏರಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸಾಫ್ಟ್ ವೇರ್ ಕ್ಷೇತ್ರವಲ್ಲದೆ, ಹಾರ್ಡ್ ವೇರ್, ಸೆಮಿಕಂಡೆಕ್ಟರ್, ಅನಿಮೇಷನ್ ಹಾಗೂ ಗೇಮಿಂಗ್ ಕ್ಷೇತ್ರದಲ್ಲೂ ಕರ್ನಾಟಕ ಮುಂಚೂಣಿಗೆ ಬರುವಂತೆ ಯೋಜನೆ ರೂಪಿಸಲು ಐಟಿ ಇಲಾಖೆಗೆ ಸೂಚಿಸಿದ್ದೇನೆ. ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಪ್ರಗತಿ ಸಾಧಿಸುತ್ತಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿ ಕರ್ನಾಟಕ ಅಗ್ರಗಣ್ಯ ರಾಜ್ಯವಾಗಿದೆ. ಬಂಡವಾಳ ಆಕರ್ಷಣೆಯಲ್ಲಿ ಜಾಗತಿಕವಾಗಿ ಬೆಂಗಳೂರು 16ನೇ ಸ್ಥಾನದಲ್ಲಿದೆ ಎಂದು ವಿಶ್ವ ಬ್ಯಾಂಕ್ ಹಾಗೂ ಐಎಂಎಫ್ ದಾಖಲೆಗಳು ಹೇಳಿದೆ.
ಕಳೆದ ಜೂನ್ ನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಬೃಹತ್ ಯಶಸ್ಸು ಗಳಿಸಿದೆ. ಸುಮಾರು 712 ಯೋಜನೆಗಳಿಗೆ ಸಹಿ ಹಾಕಲಾಗಿದ್ದು, 7.6 ಲಕ್ಷ ಕೋಟಿ ರು ಬಂಡವಾಳ ಹರಿದು ಬರಲಿದೆ ಎಂದು ಶೆಟ್ಟರ್ ಹೇಳಿದರು.
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಪಾರದರ್ಶಕತೆ ಬಗ್ಗೆ ಅನುಮಾನ ಬೇಡ. ಯೋಜನೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ವೆಬ್ ತಾಣವನ್ನು ರೂಪಿಸಲಾಗಿದ್ದು, ಬಂಡವಾಳ ಹೂಡಿಕೆದಾರರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಮುಕ್ತವಾಗಿದೆ. ಐಟಿ ಕ್ಷೇತ್ರದ ಬೆಳೆವಣಿಗೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿ ಬಿಜೆಪಿ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.












Click it and Unblock the Notifications