ಆ.15, ಜ.26, ಅ.2 ರಾಷ್ಟ್ರೀಯ ರಜಾದಿನವಲ್ಲ

ಅಗಸ್ಟ್ 15 ಮಾತ್ರವಲ್ಲ, ಜನವರಿ 26 ಹಾಗೂ ಅಕ್ಟೋಬರ್ 2 ರಾಷ್ಟ್ರೀಯ ರಜಾ ದಿನಗಳೆಂದು ಅಧಿಸೂಚಿಸುವ ಯಾವುದೇ ಸರ್ಕಾರಿ ಆದೇಶವೂ ಕೇಂದ್ರ ಗೃಹ ಸಚಿವಾಲಯದ ಬಳಿ ಇಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅರ್ಜಿಯೊಂದಕ್ಕೆ ಉತ್ತರ ಸಿಕ್ಕಿದೆ.
ಹತ್ತರ ಹರೆಯದ ಬಾಲೆ ಐಶ್ವರ್ಯಾ ಪರಾಶರ್ ಎಂಬಾಕೆಯ ಸತತ ಪ್ರಯತ್ನದಿಂದ ಈ ಸತ್ಯ ಹೊರ ಬಿದ್ದಿದೆ. ಐಶ್ವಯಾ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅನುಸಾರದ ಅರ್ಜಿಗೆ ಉತ್ತರವಾಗಿ ಈ ವಿಷಯ ಬಹಿರಂಗಗೊಂಡಿದೆ.
2012ರ ಏಪ್ರಿಲ್‌ನಲ್ಲಿ ಪ್ರಧಾನಿ ಕಚೇರಿ(Prime Minister's Office (PMO) )ಗೆ ಈ ಪ್ರಶ್ನೆಗಳನ್ನು ಹಾಕಿದ್ದಳು. ಪ್ರಧಾನಿ ಕಚೇರಿ ಅರ್ಜಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿತು.
ಆದರೆ, ಈ ವಿಷಯ ತನಗೆ ಸಂಬಂಧಿಸಿದುದಲ್ಲವೆಂದು ಗೃಹ ಸಚಿವಾಲಯ ಅದನ್ನು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ(The Department of Personnel and Training (DoPT) ) ಗೆ ದಾಟಿಸಿತು.
ಹಲವು ತಿರುವು-ಮುರುವುಗಳ ಬಳಿಕ ಕೇಂದ್ರ ಗೃಹ ಸಚಿವಾಲಯ ಮೇ 17ರಂದು ಉತ್ತರ ನೀಡಿ, ಸರಕಾರವು ಜ.26, ಆ.15 ಹಾಗೂ ಅ.2ನ್ನು ರಾಷ್ಟ್ರೀಯ ರಜಾ ದಿನಗಳೆಂದು ಘೋಷಿಸಿ ಯಾವುದೇ ಅಧಿಸೂಚನೆ ಹೊರಡಿಸಿಲ್ಲವೆಂದು ತಿಳಿಸಿತು.
ಆದರೆ, ಇದರಿಂದ ತೃಪ್ತಿ ಹೊಂದದ ಐಶ್ವರ್ಯಾ, ತಾನು ರಾಷ್ಟ್ರೀಯ ರಜಾದಿನಗಳ ಬಗ್ಗೆ ಪಠ್ಯಪುಸ್ತಕಗಳಿಂದ ತಿಳಿದಿದ್ದೇನೆ. ಬಹುಶಃ ರಾಷ್ಟ್ರೀಯ ರಜಾದಿನ ಘೋಷಣೆಯ ಯಾವುದೇ ದಾಖಲೆಯಿಲ್ಲವೆಂದು ಗೃಹ ಸಚಿವಾಲಯ ತಪ್ಪಾಗಿ ಹೇಳಿದೆ ಎಂದು ಮೇಲ್ಮನವಿ ಸಲ್ಲಿಸಿದಳು.
ಆದರೆ, ಅದಕ್ಕೆ ನೀಡಿದ್ದ ಉತ್ತರವೂ ಗೃಹ ಸಚಿವಾಲಯದ ಹಿಂದಿನ ಉತ್ತರವನ್ನೇ ಎತ್ತಿ ಹಿಡಿದಿತ್ತು. ಅಂತಹ ಯಾವುದಾದರೂ ಆದೇಶವಿದ್ದಲ್ಲಿ ಬಾಲಕಿಗೆ ನೀಡುವಂತೆ ರಾಷ್ಟ್ರೀಯ ಪತ್ರಾಗಾರಕ್ಕೆ ಮೇಲ್ಮನವಿ ಪ್ರಾಧಿಕಾರ ಸೂಚಿಸಿದೆ. ಪತ್ರಾಗಾರದ ಪ್ರತಿಕ್ರಿಯೆ ಕಾಯಲಾಗುತ್ತಿದೆ. ಇದೇ ವೇಳೆ ತನ್ನ ಪ್ರಶ್ನೆಗೆ ಉತ್ತರ ಬಯಸಿ ಐಶ್ವರ್ಯಾ ರಾಷ್ಟ್ರಪತಿ ಹಾಗೂ ಪ್ರಧಾನಿಗೂ ಪತ್ರ ಬರೆದಿದ್ದಾಳೆ. ಈಗ ಐಶ್ವರ್ಯಾಳ ಪ್ರಶ್ನೆಗೆ ದೇಶದ ಪ್ರಥಮ ಪ್ರಜೆ ಹಾಗೂ ಪ್ರಧಾನಿ ನೀಡುವ ಉತ್ತರ ಕುತೂಹಲ ಕೆರಳಿಸಿದೆ.












Click it and Unblock the Notifications