ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಿಮ ಘಟ್ಟಕ್ಕೆ ಬಿಎಸ್‌ವೈ ಡಿವಿಎಸ್ ನಡುವಿನ ಕಾದಾಟ

By Prasad
|
Google Oneindia Kannada News

War between DVS and BSY reaches climax
ಬೆಂಗಳೂರು, ಆ. 10 : ತಾನು ಸಾಗಿದ್ದೇ ಹಾದಿ ಎಂಬಂತೆ ಸಾಗಬಯಸುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಾಗುತ್ತಿರುವ ಹಾದಿ ಸರಿಯಾಗಿದ್ದರೂ ಅಡ್ಡಹಾಕಿದ್ದೇಕೆ ಎನ್ನುತ್ತಿರುವ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಎಂಬೆರಡು ಮದಗಜಗಳ ಕಾದಾಟಕ್ಕೆ ಬಿಜೆಪಿ ಪಕ್ಷವೇ ಬೆಚ್ಚಿಬಿದ್ದಿದೆ. ಒಂದಾನೊಂದು ಕಾಲದಲ್ಲಿ ಸಿಹಿ ಹಂಚಿ ಸಂಭ್ರಮಿಸುತ್ತಿದ್ದ ಇಬ್ಬರೂ ವಿಷ ಉಣಿಸುವ ಹಂತಕ್ಕೆ ತಲುಪಿದ್ದಾರೆ.

ಇವರಿಬ್ಬರ ನಡುವಿನ ವೈಮನಸ್ಯ ತಾರಕಕ್ಕೇರಿ ಮುಂದಿನ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅನಾಹುತ ಸಂಭವಿಸುವ ಮುನ್ನವೇ ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕು ಎಂಬ ಉದ್ದೇಶದಿಂದ ರಾಜ್ಯದ ಕೆಲ ಬಿಜೆಪಿ ನಾಯಕರು ದೆಹಲಿಯ ಬಿಜೆಪಿ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಇದನ್ನೆಲ್ಲ ತರೆಮರೆಯಿಂದಲೇ ಗಮನಿಸುತ್ತಿರುವ ಹಿರಿಯರು ಮತ್ತೊಂದು ತಲೆನೋವು ತಂದಿಟ್ಟರಲ್ಲ ಎಂದು ಹಣಹಣೆ ಚಚ್ಚಿಕೊಳ್ಳುತ್ತಿದ್ದಾರೆ.

ಇಡೀ ಹೈಕಮಾಂಡನ್ನೇ ಬುಗುರಿಯಂತೆ ಆಡಿಸುವ ತಾಕತ್ತು ಇರುವ ಯಡಿಯೂರಪ್ಪನವರು ಒಂದೆಡೆಯಾದರೆ, ದೆಹಲಿಯ ಹಿರಿಯ ನಾಯಕರಿಂದಲೇ ಉತ್ತಮ ಆಡಳಿತ ನೀಡಿದ್ದಾರೆಂದು ಶಭಾಸ್‌ಗಿರಿ ಪಡೆದ ಸದಾನಂದ ಗೌಡ ಇನ್ನೊಂದೆಡೆ. ಹಾವು ಮುಂಗುಸಿಯಂತೆ ಕಾದಾಡುತ್ತಿರುವ ಇಬ್ಬರನ್ನು ಒಂದುಗೂಡಿಸುವ ತಲೆನೋವಿನ ಭಾರವನ್ನು ಹಿರಿಯರ ಹೆಗಲ ಮೇಲೆ ಹೇರಬೇಕೆಂದು ನಿರ್ಧರಿಸಿರುವ ರಾಜ್ಯದ ನಾಯಕರು ಮತ್ತೊಂದೆಡೆ.

ಕಾದಾಟದ ಹಾದಿ : ಅಕ್ರಮ ಗಣಿಗಾರಿಕೆಯಲ್ಲಿ ಹೆಸರು ಕಂಡಬಂದನಂತರ ಬಲವಂತವಾಗಿ ಯಡಿಯೂರಪ್ಪನವರು ಪಟ್ಟದಿಂದ ಇಳಿದ ಕ್ಷಣ, ಪಟ್ಟಕ್ಕೇರಿದ ಸದಾನಂದ ಗೌಡರಿಗೆ ಯಡಿಯೂರಪ್ಪನವರು 6 ತಿಂಗಳ ಗಡುವನ್ನು ನೀಡಿದ್ದರು. ಸಿಕ್ಸ್ ಮಂತ್ಸಲ್ಲಿ ಮತ್ತೆ ಬರ್ತೇನ್ರೀ ಎಂದು ಯಡಿಯೂರಪ್ಪ ಅಬ್ಬರಿಸಿದ್ದರು. ಆದರೆ, ಅಧಿಕಾರ ಸಿಕ್ಕಮೇಲೆ ಯಾರಾದರೂ ಬಿಟ್ಟುಕೊಡುತ್ತಾರಾ? ಅಂತಹ ಹುಚ್ಚು ಕೆಲಸ ಮಾಡಲು ಇಚ್ಛಿಸದ ಸದಾನಂದ ಗೌಡರು ನೇರವಾಗಿ ಯಡಿಯೂರಪ್ಪನವರನ್ನು ಎದುರು ಹಾಕಿಕೊಂಡರು.

ಯಡಿಯೂರಪ್ಪನವರು ಜೈಲಿಗೆ ಹೋದಾಗ, ಬಳ್ಳಾರಿ ಗ್ರಾಮೀಣ, ಕೊಪ್ಪಳ ವಿಧಾನಸಭೆ ಉಪ ಚುನಾವಣೆ, ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆ ಎದುರಾದಾಗ, ಅವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಬಟಾಬಯಲಾಗಿದೆ. ಅಧಿಕಾರ ತ್ಯಜಿಸಿ 6 ತಿಂಗಳು ಕಳೆದ ಮರುದಿನದಿಂದಲೂ ಅಧಿಕಾರ ಮರುಪಡೆಯಲು ಯಡಿಯೂರಪ್ಪ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ಯಾವಾಗ ಸದಾನಂದ ಗೌಡರು ಯಡಿಯೂರಪ್ಪನವರ ಕಟ್ಟಾ ಹಿಂಬಾಲಕರನ್ನು ಕಡೆಗಣಿಸಲು ಆರಂಭಿಸಿದರೋ ಆಗ ಮಾಜಿ ಮುಖ್ಯಮಂತ್ರಿಗಳ ಕಾದಾಟ ನಿರ್ಣಾಯಕ ಹಂತಕ್ಕೆ ತಲುಪಿತು. ದಿಟ್ಟತನವನ್ನು ಯಾವತ್ತೂ ಪ್ರದರ್ಶಿಸದ ಬಿಜೆಪಿ ಹೈಕಮಾಂಡ್ ಕೊನೆಗೂ ಯಡಿಯೂರಪ್ಪನವರ ಒತ್ತಾಯಕ್ಕೆ ಮಣಿದು ಸದಾನಂದ ಗೌಡರನ್ನು ಕೆಳಗಿಳಿಸಿ ಜಗದೀಶ್ ಶೆಟ್ಟರ್ ಅವರ ಪಟ್ಟಾಭಿಷೇಕ ಮಾಡೇಬಿಟ್ಟಿತು. ಅಷ್ಟರಲ್ಲಾಗಲೆ ಸದಾನಂದ ಗೌಡರು ಯುದ್ಧಕ್ಕೆ ಅಣಿಯಾಗಿಬಿಟ್ಟಾಗಿತ್ತು.

ಅಲ್ಲಿಂದ ಶುರುವಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕದನ. ಅದನ್ನು ಯಡಿಯೂರಪ್ಪನವರಿಗೆ ದಯಪಾಲಿಸಬೇಕೋ, ಸದಾನಂದ ಗೌಡರಿಗೆ ನೀಡಿ ಅವರಿಗೆ ಆದ ಅನ್ಯಾಯಕ್ಕೆ ಮುಲಾಮು ಹಚ್ಚಬೇಕೋ ಎಂಬ ನೆನೆಗುದಿಗೆ ಬಿದ್ದ ಹೈಕಮಾಂಡ್ ಮತ್ತೊಮ್ಮೆ ತೆರೆಮರೆಗೆ ಸರಿದು, ಸದ್ಯಕ್ಕೆ ಆ ತಂಟೆಯೇ ಬೇಡ ಎಂದು ಕೈಚೆಲ್ಲಿಬಿಟ್ಟಿತು. ಅವರು ಸುಮ್ಮನೆ ಕುಳಿತಷ್ಟೂ ರಾಜ್ಯ ಬಿಜೆಪಿಯಲ್ಲಿನ ಅ'ಶಿಸ್ತು' ಮುಗಿಲುಮುಟ್ಟುತ್ತಿದೆ. ರಾಜ್ಯಾಧ್ಯಕ್ಷ ಪಟ್ಟಕ್ಕೆ ಡಿವಿಎಸ್ ನಾಲಾಯಕ್ ಅನ್ನುತ್ತಿದ್ದರೆ, ಬಿಎಸ್‌ವೈ ಗ್ಯಾಂಗ್ ತನ್ನ ವಿರುದ್ಧ ಕೇಸ್ ಜಡಿಯಲು ಮಸಲತ್ತು ನಡೆಸುತ್ತಿದೆ ಎಂಬುದು ಡಿವಿಎಸ್ ಆರೋಪ.

ಜೊತೆಗೆ, ತಮಗೆ ಹೇಗೆ ಬೇಕೋ ಹಾಗೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವವರಿಗೆ ಹೈಕಮಾಂಡ್ ಕಡಿವಾಣ ಹಾಕುತ್ತಿಲ್ಲ, ರೆಡ್ಡಿಗಳೊಂದಿಗೆ ಕೆಲವರು ಬಹಿರಂಗವಾಗಿ ಗುರುತಿಸಿಕೊಂಡಿದ್ದರೂ ಅವರನ್ನು ಪಕ್ಷದಿಂದ ಕಿತ್ತುಹಾಕಲು ಹಿಂದೆ ಮುಂದೆ ನೋಡುತ್ತಿದೆ. ಒಟ್ಟಿನಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಅವರವರೇ ಹೈಕಮಾಂಡ್ ಆಗಿಬಿಟ್ಟಿದ್ದಾರೆ. ಸದ್ಯಕ್ಕೆ ಬಿಎಸ್‌ವೈ ಮತ್ತು ಡಿವಿಎಸ್ ನಡುವಿನ ಸಮಸ್ಯೆಗೆ ಯಾವ ಪರಿಹಾರವೂ ಕಾಣುತ್ತಿಲ್ಲ. ಇಬ್ಬರನ್ನೂ ಕೂಡಿಸಿ ಒಟ್ಟಾಗಿ ಪಕ್ಷ ಕಟ್ಟಿ ಎಂದು ಹೇಳಿದ ಮರುದಿನವೇ ಕಿತ್ತಾಡಿಕೊಂಡಿರುತ್ತಾರೆ. ಇಬ್ಬರ ಕಲಹ ಅಂತಿಮ ಘಟ್ಟ ತಲುಪಿದೆಯಾ? ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವೇನು?

English summary
War between DV Sadananda Gowda and BS Yeddyurappa has reached climax stage, as BJP leaders in Karnataka have decided to take tussle between both former chief ministers to BJP high command. What solution can high command suggest to this problem?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X