ಹೆಂಡತಿ ಜೊತೆ ರಾತ್ರಿ ಕಳೆದಿದ್ದಕ್ಕೆ ಈ ಶಿಕ್ಷೆಯಾ?

ಧ್ವಜವನ್ನು ಹಿಡಿದು ಸೇಂಟ್ ಕಿಟ್ಸ್ ಮತ್ತು ನೆವಿಸ್ ದೇಶವನ್ನು ಪ್ರತಿನಿಧಿಸಿದ್ದ, ಸತತ ಐದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾಜಿ ವಿಶ್ವ ಚಾಂಪಿಯನ್ ಕಿಮ್ ಕಾಲಿನ್ಸ್‌ನನ್ನು, ಆತ ಪ್ರತಿನಿಧಿಸುತ್ತಿದ್ದ ತಂಡವೇ, ನಿನಗೆ ದೇಶವನ್ನು ಪ್ರತಿನಿಧಿಸುವ ಯಾವುದೇ ಹಕ್ಕಿಲ್ಲ ಎಂದು ಹೇಳಿ ಆತನನ್ನು ಮನೆಗೆ ಕಳಿಸಿದೆ. ಕಿಮ್ ಕಾಲಿನ್ಸ್ 2003ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.
36 ವರ್ಷದ ಎರಡು ಮಕ್ಕಳ ಅಪ್ಪನಾಗಿರುವ ಆತ ಮಾಡಿದ ತಪ್ಪೆಂದರೆ, 100 ಮೀ. ಸ್ಪ್ರಿಂಟ್‌ನಲ್ಲಿ ಭಾಗವಹಿಸಬೇಕಾದ ಹಿಂದಿನ ದಿನ ಹೋಟೆಲಿನಲ್ಲಿ ತನ್ನ ಹೆಂಡತಿಯೊಡನೆ ಇಡೀ ರಾತ್ರಿಯನ್ನು ಕಳೆದಿದ್ದು! ಇದೆಂಥ ತಪ್ಪು ಅನ್ನಬೇಡಿ. ಆದರೆ, ಹೆಂಡತಿಯೊಡನೆ ಕಾಲ ಕಳೆಯುವ ಮುನ್ನ ತಂಡದ ಅಧಿಕಾರಿಗಳ ಅನುಮತಿ ಪಡೆಯದೆ ರಾತ್ರಿ ಕಳೆದಿದ್ದು ಕಿಮ್ ಮಾಡಿದ ತಪ್ಪು.
ತನಗೆ ಆಗಿರುವ ಅವಮಾನದಿಂದ ಬೇಸತ್ತಿರುವ ಕಿಮ್ ಕಾಲಿನ್ಸ್, "ಅವರ ಅನುಮತಿ ಪಡೆಯಲು ನಾನೇನು ಸಣ್ಣಮಗುವಲ್ಲ. ಹೆಂಡತಿ ಜೊತೆ ಕಾಲ ಕಳೆಯಲು ತಂಡದ ಅನುಮತಿ ಪಡೆಯುವ ಅಗತ್ಯವೂ ಇಲ್ಲ. ಇದು ಅಂತಹ ದೊಡ್ಡ ತಪ್ಪು ಎಂದು ನನಗೇನೂ ಅನಿಸುವುದಿಲ್ಲ. ಸ್ಪ್ರಿಂಟ್‌ನಲ್ಲಿ ಭಾಗವಹಿಸಲು ನನಗೆ ಅನುಮತಿ ನೀಡಬೇಕಿತ್ತು" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೆ, ತಮ್ಮ ವೃತ್ತಿ ಜೀವನದಿಂದ ನಿವೃತ್ತರಾಗಲು ಅವರು ನಿರ್ಧಾರ ತೆಗೆದುಕೊಂಡಿದ್ದಾರೆ.
"ಒಲಿಂಪಿಕ್ಸ್ ಪಂದ್ಯಗಳನ್ನು ಟಿವಿಯಲ್ಲಿ ನೋಡಲೆಂದು ನಾನು ಲಂಡನ್ನಿಗೆ ಬಂದಿರಲಿಲ್ಲ. ನನ್ನ ವೃತ್ತಿ ಜೀವನ ಈ ರೀತಿ ಕೊನೆಗೊಂಡಿರುವುದು ನಿಜಕ್ಕೂ ದುಃಖದ ಸಂಗತಿ. ನಾನೀಗ ವಾಪಸ್ ಹೋಗುತ್ತಿದ್ದೇನೆ, ಮಕ್ಕಳನ್ನು ಭೇಟಿಯಾಗುತ್ತೇನೆ. ನನ್ನ ಮಕ್ಕಳಿಂದ ದೂರವಿದ್ದು ತುಂಬಾ ದಿನವಾಯಿತು" ಎಂದು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಕಿಮ್ ಕಾಲಿನ್ಸ್ ಅತ್ಯಂತ ಭಾವುಕರಾಗಿ ನುಡಿದಿದ್ದಾರೆ.
ತಂಡದ ಅಧಿಕಾರಿಗಳು ಹೇಳುವುದೇನೆಂದರೆ, ಒಂದಕ್ಕಿಂತ ಹೆಚ್ಚು ಬಾರಿ ಅನುಮತಿಯಿಲ್ಲದೆ ಕ್ರೀಡಾಗ್ರಾಮವನ್ನು ತೊರೆದು ಕಿಮ್ ಕಾಲಿನ್ಸ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕಾರಣಗಳೇನೆ ಇರಲಿ ಕಿಮ್ ಕಾಲಿನ್ಸ್‌ಗೆ ಕ್ರೀಡಾಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಕೋಚ್ ಕೂಡ ಆಗಿರುವ ಹೆಂಡತಿಯನ್ನು ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಕೋಪೋದ್ರಿಕ್ತರಾಗಿ ಅಭಿಮಾನಿಗಳು ಕೇಳುತ್ತಿದ್ದಾರೆ.












Click it and Unblock the Notifications