ಸೊರಬ ಜೆಡಿಎಸ್ ಬಂಡಾಯಕ್ಕೆ ಮಧು ಕಾಣಿಕೆ ಜೋರು

ಮುಖ್ಯವಾಗಿ, ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರ ವಿರುದ್ಧ ಮತ್ತೊಮ್ಮೆ ಅಸಮಾಧಾನದ ಹೊಗೆ ಎದ್ದಿದೆ. ಇದು ಮೂರು ವರ್ಷಗಳಿಂದ ಜೆಡಿಎಸ್‌ನಲ್ಲಿ ಆಗೊಮ್ಮೆ ಈಗೊಮ್ಮೆ ಕಂಡುಬರುತ್ತಿರುವ ಬಂಡಾಯಕ್ಕೆ ಜೋರಾಗಿಯೇ ಗಾಳಿಬೀಸುವ ಲಕ್ಷಣಗಳಿವೆ.
ಹಾಗೆ ನೊಡಿದರೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಜೆಡಿಎಸ್‌ಗೆ ಸೇರ್ಪಡೆಯಾದಾಗಿನಿಂದ ಸ್ಥಳೀಯಮಟ್ಟದಲ್ಲಿ ಪಕ್ಷದಲ್ಲಿ ಬಂಡಾಯ ಬುಸುಗುಡುತ್ತಿದೆ. ಹತ್ತಾರು ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಮೂಲ ಜೆಡಿಎಸ್ ಮುಖಂಡರು ನೇಪಥ್ಯಕ್ಕೆ ಸರಿಯಬೇಕಾಗಿದೆ ಎಂಬ ಆಕ್ರೋಶ ಕಾರ್ಯಕರ್ತರಲ್ಲಿ ವ್ಯಕ್ತವಾಗುತ್ತಿದೆ.
ಅಪ್ಪನ ನಂತರ ಮಗನ ದರ್ಬಾರು: ಬಂಗಾರಪ್ಪ ಅವರಿದ್ದಾಗ ತಾಲೂಕು ಜೆಡಿಎಸ್‌ನಲ್ಲಿ ಸರ್ವವೂ ಬಂಗಾರಪ್ಪಮಯವಾಯಿತು. ಇದರಿಂದ ತಾಲೂಕು ಜೆಡಿಎಸ್‌ನಲ್ಲಿ ಅಪಸ್ವರ ಜೋರಾಗಿಯೇ ಕೇಳಿಬಂದಿತು.
ಬಂಡಾಯದ ನಡುವೆಯೇ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಅಪ್ಪ-ಮಗ (ಬಂಗಾರಪ್ಪ ಮತ್ತು ಮಧು ಬಂಗಾರಪ್ಪ) ಎದುರಿಸಿದರು. ಆದರೆ ಆ ಜೋಡಿಗೆ ಬಂಡಾಯಗಾರರು ಭಾರಿ ಸೋಲುಣಿಸಿದರು. ಇದರಿಂದ ತಾಲೂಕು ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ದೃಢವಾಯಿತು.
ತಾಲೂಕು ಜೆಡಿಎಸ್ ಬಂಗಾರಪ್ಪನವರ ಮರಣದವರೆಗೂ ಬೂದಿ ಮುಚ್ಚಿದ ಕೆಂಡವಾಗಿತ್ತು. ಆದರೆ ಇತ್ತೀಚೆಗೆ ಮಧು ಬಂಗಾರಪ್ಪ ಅವರು ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದರು. ಆ ಪ್ರಕ್ರಿಯೆಯಲ್ಲಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ತಮ್ಮ ನಿಷ್ಠರಿಗೆ ಅಧಿಕಾರ ನೀಡಿರುವುದು ಮೂಲ ಜೆಡಿಎಸ್ ಕಾರ್ಯಕರ್ತರನ್ನು ತೀವ್ರವಾಗಿ ಕೆರಳಿಸಿದೆ.
ಬಂಗಾರಪ್ಪನವರ ಅನುಕಂಪ ಹಾಗೂ ಹಿಂದುಳಿದ ವರ್ಗದ ಮತಗಳನ್ನು ಸೆಳೆಯುವ ಲೆಕ್ಕಾಚಾರ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರದು. ಹಾಗಾಗಿ, ಮಧು ಬಂಗಾರಪ್ಪನವರನ್ನು ರಾಜ್ಯ ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡುವುದರ ಜತೆಗೆ ಪಕ್ಷ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ಮಧು ಬಂಗಾರಪ್ಪನವರ ತಲೆಕೆಡಿಸಿದೆ. ಈಗಲೇ ಅಧಿಕಾರದ ರುಚಿ ಕಂಡವರಂತೆ ಮುಖಂಡರು, ಕಾರ್ಯಕರ್ತರನ್ನು ಮರೆಯುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ತಾಲೂಕಿನಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಮಧು ವಿರುದ್ಧ ದೂರು ನೀಡಲು ಹೆಚ್‌ಡಿ ದೇವೇಗೌಡರ ಜತೆ ಚರ್ಚಿಸಲು ಮೂಲ ಜಿಡಿಎಸ್ ಮುಖಂಡರು ಹೊರಟಿದ್ದಾರೆ. ಮುಂದೆ ತಾಲೂಕಿನಲ್ಲಿ ಜೆಡಿ ಎಸ್ ಕಲಹ ಯಾವ ಸ್ವರೂಪ ಪಡೆಯುವುದೋ ಕಾದು ನೋಡಬೇಕು.












Click it and Unblock the Notifications