ಹೈದರಾಬಾದಲ್ಲಿ ಇನ್ಫಿ ಟೆಕ್ಕಿ ಸಂಶಯಾಸ್ಪದ ಸಾವು

Suspicious death of Infosys software engineer
ಹೈದರಾಬಾದ್, ಆ. 1 : ಐಟಿ ದೈತ್ಯ ಇನ್ಫೋಸಿಸ್‌ನ ಕ್ಯಾಂಪಸ್‌ನಲ್ಲಿ ಯುವ ಸಾಫ್ಟ್ ವೇರ್ ಇಂಜಿನಿಯರ್ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮಲ್ಟಿ ಪಾರ್ಕಿಂಗ್ ಸ್ಥಳದಲ್ಲಿ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯಾರಾದರೂ ಅವರನ್ನು ಮೇಲಿಂದ ತಳ್ಳಿ ಕೊಲೆ ಮಾಡಿದ್ದಾರೋ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಂಧ್ರಪ್ರದೇಶ ಮೂಲದ ನೀಲಿಮಾ ಯೆರುವಾ (27) ಸಾವಿಗೀಡಾಗಿರುವ ದುರ್ದೈವಿ. ಆಕೆಯ ಶವವನ್ನು ಸೋಮವಾರ ರಾತ್ರಿ 10.30ರ ಸುಮಾರಿಗೆ ಪಾರ್ಕಿಂಗ್ ಪ್ರದೇಶದಲ್ಲಿ ಸೆಕ್ಯೂರಿಟಿ ಗಾರ್ಡ್ ಗಮನಿಸಿದ್ದಾರೆ. 10.50ರ ಸುಮಾರಿಗೆ ಅವರನ್ನು ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿಗೆ ಕರೆತಂದಾಗ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ದುರ್ಘಟನೆಯ ಸುದ್ದಿಯನ್ನು ಅವರ ಕುಟುಂಬಕ್ಕೆ ತಿಳಿಸಿದ್ದು ಮಂಗಳವಾರದಂದು.

ನೀಲಿಮಾ ಕುಟುಂಬದವರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಅನೇಕ ಸಾಕ್ಷ್ಯಗಳು ಪೊಲೀಸರಿಗೆ ದೊರೆತಿವೆ. ನೀಲಿಮಾ ಕೆಲಸಕ್ಕೆಂದು ಸಂಜೆ 7.30ಕ್ಕೆ ಮನೆ ಬಿಟ್ಟಿದ್ದಾರೆ. ರಾತ್ರಿ 9.30ರವರೆಗೆ ಮಾತ್ರ ಕೆಲಸದ ಸ್ಥಳದಲ್ಲಿ ಆಕೆ ಇದ್ದದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅವರ ಶವ ದೊರೆತಿದ್ದುದು ರಾತ್ರಿ 10.30ರ ಸುಮಾರಿಗೆ. ಆ ಒಂದು ಗಂಟೆ ಕಾಲ ಅಲ್ಲಿ ಏನು ನಡೆದಿತ್ತು ಎಂದು ನೀಲಿಮಾ ಕುಟುಂಬವವರು ಕಂಪನಿಯನ್ನು ಕೇಳುತ್ತಿದ್ದಾರೆ.

ಇದು ಸಾಲದೆಂಬಂತೆ, ನೀಲಿಮಾರ ಪರ್ಸ್ ಇನ್ಫೋಸಿಸ್ ಕಟ್ಟಡದ 10ನೇ ಮಹಡಿಯಲ್ಲಿ ದೊರೆತಿದೆ ಮತ್ತು ಅವರ ಒಂದು ಪಾದರಕ್ಷೆ 7ನೇ ಮಹಡಿಯಲ್ಲಿ ಪೊಲೀಸರಿಗೆ ದೊರೆತಿದೆ. ಇದು ಅನೇಕ ಸಂಶಯಗಳಿಗೆ ಎಡೆಮಾಡಿದೆ. ನೀಲಿಮಾ ಕುಟುಂಬದವರ ಪ್ರಕಾರ, ಆಕೆಯನ್ನು ಯಾರೋ ಬೆನ್ನತ್ತಿದ್ದರಿಂದ ಒಂದು ಪಾದರಕ್ಷೆ 7ನೇ ಮಹಡಿಯಲ್ಲಿ ಸಿಕ್ಕಿದ್ದು, 10ನೇ ಮಹಡಿಯ ಮೇಲಿಂದ ಆಕೆಯನ್ನು ತಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ನೀಲಿಮಾ ದೇಹದ ಮೇಲೆ ಕೆಲ ಗಾಯಗಳಾಗಿರುವುದು ಕೂಡ ಅವರ ಆರೋಪಗಳನ್ನು ಪುಷ್ಟೀಕರಿಸಿದೆ.

ಕಂಪನಿಯ ಪ್ರಾಜೆಕ್ಟ್ ಕೆಲಸಕ್ಕೆಂದು 2011ರಿಂದ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನೀಲಿಮಾ ವಾಸವಿದ್ದರು. ಜುಲೈ 22ರಂದು ಅವರು ಭಾರತಕ್ಕೆ ಮರಳಿದ್ದರು ಮತ್ತು ಆಗಸ್ಟ್ 17ಕ್ಕೆ ಅವರು ಅಮೆರಿಕಕ್ಕೆ ವಾಪಸ್ ಮರಳುವವರಿದ್ದರು. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಆಕೆಯ ಪತಿ ಕೂಡ ಅವರ ಜೊತೆ ಅಮೆರಿಕಕ್ಕೆ ಮರಳುವವರಿದ್ದರು. ನೀಲಿಮಾ ಅವರದ್ದು ಕೊಲೆಯೋ, ಆತ್ಮಹತ್ಯೆಯೋ ಎಂಬುದು ಪೋಸ್ಟ್ ಮಾರ್ಟಮ್ ಮತ್ತು ಪೊಲೀಸರ ತನಿಖೆಯ ಮುಖಾಂತರ ತಿಳಿದುಬರಬೇಕಿದೆ.

ಇನ್ಫೋಸಿಸ್ ಸ್ಪಷ್ಟೀಕರಣ : ಹೈದರಾಬಾದ್ ನಲ್ಲಿರುವ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರದಲ್ಲಿ ನೀಲಿಮಾ ಅವರ ಸಾವು ಸಂಭವಿಸಿರುವುದು ಅತೀವ ನೋವು ತಂದಿದ್ದು, ಕುಟುಂಬದ ದುಃಖದಲ್ಲಿ ಕಂಪನಿಯೂ ಭಾಗಿಯಾಗಿದೆ. ಆಕೆಯ ಕುಟುಂಬಕ್ಕೆ ಯಾವುದೇ ರೀತಿಯ ಸಹಾಯ ನೀಡಲು ಕಂಪನಿ ಸಿದ್ಧವಿದೆ ಮತ್ತು ಪೊಲೀಸರು ನಡೆಸುತ್ತಿರುವ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಕಂಪನಿ ಹೇಳಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+