ರಾಜಧಾನಿಗೆ ಮೆಟ್ರೋ ರೀಚ್3 ಮತ್ತಷ್ಟು ವಿಳಂಬ

ರೈಲ್ವೆ ಕಾಮಗಾರಿಗೆ ಈ ಬಾರಿ ಮಳೆರಾಯನ ಕಾಟ ಸ್ವಲ್ಪ ಕಡಿಮೆಯಾಗಿದ್ದರೂ 'ಮಾಮೂಲಿ' ಆಡಳಿತ ವಿಳಂಬ ಧೋರಣೆಗಳು ಮೆಟ್ರೋ ಕೆಸಲಕ್ಕೆ ಅಡಚಣೆಯಾಗಿದೆ. ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಮೇಲೆ ರೈಲ್ವೆ ಲೈನ್ ಹಾಕುವ ಸಂಬಂಧ ರೈಲ್ವೆ ಸುರಕ್ಷತಾ ಆಯೋಗದ (CRS) ಅನುಮತಿಗಾಗಿ BMRCL ಈಗ ಕಾದುಕುಳಿತಿದೆ.
'ಕಳೆದ ವಾರವಷ್ಟೇ ಈ ಬಗ್ಗೆ ವರದಿ ಸಲ್ಲಿಸಿದ್ದೇವೆ. CRS ಅನುಮೋದನೆಯ ಬಳಿಕ ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಮೇಲೆ ನಡೆಯುವ ಕಾಮಗಾರಿಗೆ ಕನಿಷ್ಠ 6 ತಿಂಗಳು ಹಿಡಿಸಲಿದೆ. ಇದರ ಹೊರತಾಗಿ ಮಳೆಗಾಲದಲ್ಲಿ ಕಾಮಗಾರಿಗೆ ಅಡಚಣೆಯಾಗುವುದು ನಿಶ್ಚಿತ' ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಎನ್ ಶಿವಶೈಲಂ ಹೇಳಿದ್ದಾರೆ.
'ಈ ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಮೇಲಿನ ಕಾಮಗಾರಿ ಬಗ್ಗೆ BMRCL ಅಧಿಕಾರಿಗಳು ಚಿಂತಿತರಾಗಿದ್ದಾರೆ. ಏಕೆಂದರೆ ಇದು 66 ಮೀಟರುಗಳ ಹಳಿ ಕಾಮಗಾರಿ. ಅದೂ ರಾತ್ರಿಯ ವೇಳೆಯೇ ಈ ಕಾಮಗಾರಿಯನ್ನು ಕೈಗೊಳ್ಳಬೇಕು. ಬೆಳಗಿನ ವೇಳೆ ಕೆಳಗೆ ರೈಲು ಸಂಚಾರವಿರುವುದರಿಂದ ರಾತ್ರಿ ವೇಳೆಯಷ್ಟೇ ಈ ಕಾಮಗಾರಿ ಪೂರೈಸಬೇಕು' ಎನ್ನುತ್ತಾರೆ ಶಿವಶೈಲಂ.
ಈ ತೊಂದರೆಗಳ ನಡುವೆಯೂ Reach 3, 3A ಮತ್ತು 3B ಡಿಸೆಂಬರ್ ವೇಳೆಗೆ ಕಾರ್ಯಗತವಾಗಲಿದೆ. ಈ ವ್ಯಾಪ್ತಿಯ ಪ್ರಧಾನ ನಿಯಂತ್ರಣ ಕೇಂದ್ರ ಪೀಣ್ಯದಲ್ಲಿ ನೆಲೆಯೂರಲಿದೆ ಎಂದು ತುಂಬು ಆತ್ಮವಿಶ್ವಾಸ ವ್ಯಕ್ತಪಡಿಸಿದವರು ವಕ್ತಾರ BMRCL ಯಶವಂತ ಚವಾಣ್. ಅಂದ್ಹಾಗೆ Reach 3, 3A ಮತ್ತು 3B ಮೆಟ್ರೋ ರೈಲು ಯೋಜನಾ ವೆಚ್ಚ 13,000 ಕೋಟಿ ರುಪಾಯಿ.












Click it and Unblock the Notifications