ಅಮೆರಿಕದಲ್ಲಿನ ನಿರುದ್ಯೋಗ ಭಾರತದ ಐಟಿಗೆ ವರ

ಜಗದ್ವಿಖ್ಯಾತ ಐಟಿ ಕಂಪನಿಗಳಾದ ವಿಪ್ರೋ, ಟಿಸಿಎಸ್, ಇನ್ಫೋಸಿಸ್ ಮತ್ತು ಎಚ್ ಸಿಎಲ್ ಅಂತಹ ಕಂಪನಿಗಳು ಅಮೆರಿಕದಲ್ಲಿ ಉದ್ಯೋಗಾವಕಾಶಗಳನ್ನು ನುಂಗುಹಾಕುತ್ತಿವೆ ಎಂಬ ಬಲವಾದ ಆರೋಪಗಳಿವೆ. ಆದರೆ ಬದಲಾದ ಸನ್ನಿವೇಶದಲ್ಲಿ ಈಗ ಈ ಕಂಪನಿಗಳು ಈಗ ಅಮೆರಿಕದಲ್ಲಷ್ಟೇ ಜರ್ಮನಿ, ಕೆನಡಾ ಮತ್ತು ಇಂಗ್ಲೆಂಡಿನಲ್ಲಿ ಸ್ಥಳೀಯರಿಗೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮುಂದಾಗುತ್ತಿವೆ.
ಸ್ಥಳೀಯರಿಗೆ ಮಣೆ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯ (ಟಿಸಿಎಸ್) ಪ್ರಕಾರ ಪ್ರಸಕ್ತ ಸಾಲಿನಲ್ಲಿ 2,000 ಮಂದಿ ಸ್ಥಲೀಯರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಇನ್ನು ವಿಪ್ರೋದ ಬದಲಾದ ನೀತಿ ಪ್ರಕಾರ ಅದು ತನ್ನ ವಿದೇಶಿ ಶಾಖೆಗಳಲ್ಲಿ ಶೇ. 50ರಷ್ಟು ಉದ್ಯೋಗಾವಕಾಶಗಳನ್ನು ಸ್ಥಳೀಯರಿಗೆ ನೀಡಲಿದೆ. ಹಾಗೆಯೇ, ಇನ್ಫೋಸಿಸ್ ಕಂಪನಿಯು ಅಮೆರಿಕದ ಮಿಲ್ವಾವುಕಿ ಮತ್ತು ವಿಸ್ಕಾನ್ಸಿನ್ ಲ್ಲಿರುವ ತನ್ನ ಶಾಖೆಗಳಿಗೆ 2,000 ಮಂದಿ ಅಮೆರಿಕನ್ನರು ಈ ವರ್ಷಾಂತ್ಯ ನೇಮಿಸಿಕೊಳ್ಳಲಿದೆ.
ಇದಕ್ಕೆಲ್ಲ ಹೇತುವಾಗಿರುವುದು ಅಮೆರಿಕದ ಬಿಗಿಯಾದ ಮತ್ತು ದುಬಾರಿ ವೆಚ್ಚದ ವೀಸಾ ನೀತಿ. ಆದ್ದರಿಂದ ಭಾರತೀಯರನ್ನು ನೇಮಿಸಿಕೊಳ್ಳುವುದಕ್ಕಿಂತ ಸ್ಥಳೀಯರನ್ನೇ ನೇಮಸಿಕೊಳ್ಳುವುದು ಲಾಭದಾಯಕ ಎನಿಸಿರುವುದು. ಜತೆಗೆ ಮೇಲಿನ ಕಂಪನಿಗಳ ಪೈಕಿ ಕೆಲವು ವೀಸಾ ಕಾನೂನು ಪ್ರಕರಣಗಳನ್ನು ಎದುರಿಸುತ್ತಿರುವುದೂ ಭೀತಿಯ ವಾತಾವಣ ಮೂಡಿಸಿದೆ. ಇನ್ನು ರಾಜಕೀಯವಾಗಿ ಹೇಳಬೇಕೆಂದರೆ ಅಮೆರಿಕ ರಾಷ್ಟ್ರಪತಿ ಚುನಾವಣೆಯ ಹೊಸ್ತಿಲಲ್ಲಿರುವಾಗ ಆ ರಾಷ್ಟ್ರಕ್ಕೆ ಪೂರಕವಾದ ನೀತಿ ಹೊಂದುವುದೇ ನಮ್ಮೀ ಕಂಪನಿಗಳ ಅನುಕೂಲಸಿಂಧು ನೀತಿಯಾಗಿದೆ.
ಇನ್ಫೋಸಿಸ್ ಕಂಪನಿ ಎದುರಿಸಿದ (ಜಾಕ್ ಪಾಮರ್ ಪ್ರಕರಣ) ವೀಸಾ ಪ್ರಕರಣ ಇಡೀ ಭಾರತೀಯ ಐಟಿ ಉದ್ಯಮವನ್ನೇ ಬೆಚ್ಚಿಬೀಳಿಸಿತು. ತದನಂತರ ಚಿಕ್ಕ ಮತ್ತು ಮಧ್ಯಮ ಐಟಿ ಕಂಪನಿಗಳೂ ರಕ್ಷಣಾತ್ಮಕ ಆಟಕ್ಕೆ ಇಳಿದಿದ್ದು ತನ್ನ ನಾನಾ ಪ್ರಾಜೆಕ್ಟುಗಳಿಗೆ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ.
ಮೈಂಡ್ ಟ್ರೀ, ಎನ್ಐಐಟಿ ಮತ್ತು ಜೆನ್ ಸಾರ್ ಟೆಕ್ನಾಲಜೀಸ್ ಕಂಪನಿಗಳು ಈಗಾಗಲೇ ಸ್ಥಳೀಯರನ್ನೇ ಹೆಚ್ಚಾಗಿ ನೇಮಕ ಮಾಡಿಕೊಂಡಿವೆ. ಇದರಿಂದ ಭಾರತೀಯ ಕಂಪನಿಗಳೂ ಸಾಕಷ್ಟು ಪ್ರಯೋಜನ ಪಡೆಯುತ್ತಿವೆ. ಕಂಪನಿಗಳ ಕ್ಯಾಂಪಸ್ಸುಗಳಲ್ಲಿ ಸೌಹಾರ್ಧ ವಾತಾವರಣ ನೆಲೆಸಿದೆ. ಸ್ಥಳೀಯ ಉದ್ಯೋಗಿಗಳು ಸ್ಥಳೀಯ ಗ್ರಾಹಕ ಕಂಪನಿಗಳನ್ನು ಹೆಚ್ಚು 'ಅರ್ಥ'ಪೂರ್ಣವಾಗಿ ಕಾಣುತ್ತಿದ್ದಾರೆ.
ಅಂದಹಾಗೆ, ಕಳೆದ 5 ವರ್ಷಗಳಲ್ಲಿ ಭಾರತೀಯ ಐಟಿ ಕಂಪನಿಗಳು ಅಮೆರಿಕದಲ್ಲಿ 2,80,000 ನೇರ ಉದ್ಯೋಗಾವಕಾಶಗಳನ್ನು ಮತ್ತು 175,000 ಪೂರಕ ಉದ್ಯೋಗಾವಕಾಶಗಳನ್ನು ಕಲ್ಪಿಸಿವೆ. ಮುಂದಿನ 5 ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣವಾಗಲಿದೆ ಎಂದು ನಾಸ್ಕಾಂ ಅಧ್ಯಯನ ತಿಳಿಸಿದೆ.












Click it and Unblock the Notifications