ಕರ್ನಾಟಕ ದೇವಸ್ಥಾನಗಳಲ್ಲಿ ಪರ್ಜನ್ಯಜಪಕ್ಕೆ ರಾಜಾಜ್ಞೆ

ಮೋಡ ಬಿತ್ತನೆ ಕಾರ್ಯದ ಬಗ್ಗೆ ಅಷ್ಟಾಗಿ ಪ್ರಗತಿ ಕಾಣದಿರುವುದರಿಂದ ಈಗ ಹೊಸ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ. ತಂತ್ರಜ್ಞಾನ ಯುಗದಲ್ಲಿ ಮತ್ತೊಮ್ಮೆ ಅನಾದಿ ಕಾಲದಿಂದಲೂ ನಮ್ಮ ರೈತಾಪಿ ವರ್ಗ ಅನುಸರಿಸಿಕೊಂಡು ಬಂದಿರುವ ಪದ್ಧತಿಗೆ ಸರ್ಕಾರವೂ ಜೊತು ಬಿದ್ದಿದೆ.
42 ವರ್ಷಗಳಲ್ಲೇ ಅತ್ಯಂತ ದಟ್ಟ ದರಿದ್ರ ಬರ ಎದುರಿಸುತ್ತಿರುವ ಕರ್ನಾಟಕದ ಸುಮಾರು 136ಕ್ಕೂ ಅಧಿಕ ತಾಲೂಕುಗಳಲ್ಲಿ ಮಳೆ ಸುರಿಸಪ್ಪಾ ತಂದೆ ಎಂದು ಇಡೀ ಸರ್ಕಾರ ದೇವರ ಮುಂದೆ ಅಡ್ಡಬೀಳಲಿದೆ.
ಮುಜರಾಯಿ ಇಲಾಖೆಗೆ ಸೇರಿದ ಸುಮಾರು 34,000 ದೇಗುಲಗಳಲ್ಲಿ 5000 ರು ದರದಂತೆ ವಿಶೇಷ ಪೂಜೆ ಸಲ್ಲಿಸುವಂತೆ ಸರ್ಕಾರ ಶುಕ್ರವಾರ(ಜು.20) ಆದೇಶಿಸಿಸಿದೆ.
ಕುಂದಾಪುರ ಮೂಲದ ಸಚಿವ ಕೆ ಶ್ರೀನಿವಾಸ 'ಪೂಜಾರಿ' ಅವರು ಈ ವಿಶೇಷ ಪೂಜೆಯ ಬಗ್ಗೆ ವಿವರ ನೀಡುತ್ತಾ, ಮಳೆಗಾಗಿ ಸರ್ಕಾರ ಪ್ರಾರ್ಥನೆ ಕಾರ್ಯಕ್ರಮಕ್ಕೆ ಸಾರ್ವಜನಿಕರ ತೆರಿಗೆ ಹಣವನ್ನು ಬಳಸಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಗುಲಗಳ ಟ್ರಸ್ಟ್ ವತಿಯಿಂದ ಸಂಗ್ರಹಿಸಿದ ವಂತಿಗೆ ಹಣದಿಂದ ಈ ಪೂಜಾ ಕೈಂಕರ್ಯಗಳು ನಡೆಯಲಿದೆ. ಈ ವಿಶೇಷ ಮಳೆ ಪ್ರಾರ್ಥನೆಗೆ ಕರಾವಳಿ ಭಾಗದ ಚರ್ಚ್ ಹಾಗೂ ಮಸೀದಿಗಳು ಕೂಡಾ ಕೈಜೋಡಿಸಿದೆ. ಇತರೆ ಭಾಗದಲ್ಲೂ ಪ್ರಾರ್ಥನೆ ಸಲ್ಲಿಸುವಂತೆ ಕೋರಲಾಗಿದೆ.
ಈ ವಿಶೇಷ ಪ್ರಾರ್ಥನೆಗೆ ಮುಹೂರ್ತ ಕೂಡಾ ಫಿಕ್ಸ್ ಆಗಿದೆ. ಜು. 27 ಹಾಗೂ ಆಗಸ್ಟ್ 7 ರಂದು ಈ ವಿಶೇಷ ಪೂಜೆ ರಾಜ್ಯದಾದ್ಯಂತ ಏಕಕಾಲಕ್ಕೆ ನಡೆಯಲಿದೆ. ಸುಮಾರು 17 ಕೋಟಿ ರು ವೆಚ್ಚದ ಈ ಕಾರ್ಯಕ್ರಮದಿಂದ ಮಳೆ ಬರುತ್ತದೆ ಎಂಬ ನಂಬಿಕೆ ಜಗದೀಶ್ ಶೆಟ್ಟರ್ ಅವರ ಸರ್ಕಾರಕ್ಕಿದೆ.
ಮಳೆ ಕೊರತೆ ಬಗ್ಗೆ ಇನ್ನೂ ಸಂಪೂರ್ಣ ಅಧ್ಯಯನ ವರದಿ ತಯಾರಿಸಿಲ್ಲ ಎಂದು ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲ ಜನಪ್ರತಿನಿಧಿಗಳು ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ಶೇ 27 ರಷ್ಟು ಮಳೆ ಕೊರತೆ ಅನುಭವಿಸಲಾಗುತ್ತಿದೆ. [ಪ್ರಾರ್ಥಿಸಲೊಂದು ದಿನ]
ಪೂಜೆ ಪುನಸ್ಕಾರದಿಂದ ಮಳೆ ಸಾಧ್ಯವೇ? ಓವರ್ ಟು ಕೃಷ್ಣಯ್ಯ ಶೆಟ್ಟಿ...ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಅವರ ಹೆಸರಿನಲ್ಲಿ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ನಿತ್ಯ ಪೂಜೆ ಕಡ್ಡಾಯಗೊಳಿಸಿದ್ದೆ. ಆದರೆ, ನಂತರ ಯಡಿಯೂರಪ್ಪ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದನ್ನು ನಿಲ್ಲಿಸಲಾಗಿತ್ತು. ಇದರ ಪರಿಣಾಮ ಈಗ ಬಿಜೆಪಿಯಲ್ಲಿ ಒಡಕು ಮೂಡಿತು. ರಾಜಕೀಯ ಸಮಸ್ಯೆಗಳು ತಲೆದೋರಿತು.
ಈ ರೀತಿ ಪೂಜೆಯನ್ನ ಅರ್ಧಕ್ಕೆ ನಿಲ್ಲಿಸಿದ್ದರಿಂದಲೇ ರಾಜ್ಯದ ಈ ದುಸ್ಥಿತಿಗೆ ಕಾರಣವಾಗಿದೆ. ಯಡಿಯೂರಪ್ಪ ಅವರ ಸರ್ಕಾರ ಪತನ, ವೃಥಾ ಆರೋಪಗಳು, ಸ್ವಜನರಿಂದಲೇ ಹಾನಿ ಎಲ್ಲವೂ ಇದರ ಫಲ. ಪೂಜೆ ಮಾಡುವುದರಿಂದ ಕೆಟ್ಟದ್ದಂತೂ ಆಗಲ್ಲ. ಒಳ್ಳೆ ಮನಸ್ಸಿನಿಂದ ಮಾಡಿದರೆ ಎಲ್ಲಾ ಪೂಜೆ ಫಲ ನೀಡುತ್ತೆ.












Click it and Unblock the Notifications