ಶಾಸಕರ ಭವನದಲ್ಲಿ ಬಿಎಸ್ ವೈಗೆ ರೂಮ್ ಸಿಕ್ತಿಲ್ಲ

ಲಕ್ಕಿ ಹೌಸ್ ರೇಸ್ ಕೋರ್ಸ್ ನಿವಾಸ ಬಿಟ್ಟು ಡಾಲರ್ಸ್ ಕಾಲೋನಿ ನಿವಾಸಕ್ಕೆ ಬಿಎಸ್ ಯಡಿಯೂರಪ್ಪ ಅವರು ತೆರಳಿದ್ದರು. ಆದರೆ ಈಗ ಯಾಕೋ ಶಾಸಕರ ಭವನದತ್ತ ಹೆಜ್ಜೆ ಇಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ರೂಮ್ ಏಕೆ ಸಿಗುತ್ತಿಲ್ಲ? ಎಂಬ ಪ್ರಶ್ನೆಗೆ ಇರುವ ರೂಮ್ ಗಳು ಸಾಲುತ್ತಿಲ್ಲ. ಶಾಸಕರ ಸಂಖ್ಯೆ ಹಾಗೂ ರೂಮ್ ಗಳ ಅನುಪಾತ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ರೂಮ್ ಹಂಚಿಕೆ ಪಟ್ಟಿಯಲ್ಲಿ ಯಡಿಯೂರಪ್ಪ ಅವರದ್ದು ಹನ್ನೊಂದೋ ಹನ್ನೆರಡೋ ಸ್ಥಾನದಲ್ಲಿ ಹೆಸರು ಕಾಣಿಸಿಕೊಂಡಿದೆ.
ಆದರೆ, ಯಡಿಯೂರಪ್ಪ ಅವರ ಲಕ್ ಚೆನ್ನಾಗಿರುವಂತೆ ಕಾಣುತ್ತದೆ. ಶಾಸಕರ ಭವನ ಕಾರ್ಯದರ್ಶಿ ಅವರು ಮುತುವರ್ಜಿ ವಹಿಸಿ ಯಡಿಯೂರಪ್ಪ ಅವರಿಗೆ ರೂಮ್ ಹಂಚಲು ಮುಂದಾಗಿದ್ದಾರೆ. ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ಉಪ ನಾಯಕ ಟಿಬಿ ಜಯಚಂದ್ರ ಅವರಿಂದ ತೆರವಾಗಿರುವ ರೂಮ್ ಅನ್ನು ಯಡಿಯೂರಪ್ಪ ಅವರಿಗೆ ನೀಡುವ ಸಾಧ್ಯತೆ ಹೆಚ್ಚಿದೆ.
15 ದಿನಗಳ ಹಿಂದೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ನನಗೊಂದು ರೂಮ್ ನೀಡಿ ಎಂದು ಯಡಿಯೂರಪ್ಪ ಕೋರಿದ್ದರು. ವಿಧಾನ ಪರಿಷತ್ ಸದಸ್ಯರು ಹೆಚ್ಚಾಗಿ ಇರುವ ಬ್ಲಾಕ್ ನಲ್ಲಿ ರೂಮ್ ನೀಡುವಂತೆ ಕೂಡಾ ಪತ್ರದಲ್ಲಿ ಸೇರಿಸಲಾಗಿತ್ತು. ಆದರೆ, ಆ ಬ್ಲಾಕ್ ನಲ್ಲಿ ಯಾವುದೇ ರೂಮ್ ಖಾಲಿ ಇರಲಿಲ್ಲವಾದ್ದರಿಂದ ಯಡಿಯೂರಪ್ಪ ಅವರ ಇಚ್ಛೆ ಫಲಿಸಿರಲಿಲ್ಲ.
ಕೊಠಡಿಗಳ ಕೊರತೆ ಅನುಭವಿಸುತ್ತಿರುವುದರಿಂದ ಎಲ್ಲಾ ಶಾಸಕರಿಗೆ ರೂಮ್ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೂಮ್ ಕೋರಿ ಪತ್ರ ಬರೆದಿದ್ದಾರೆ. ಅವರ ಇಚ್ಛೆಯಂತೆ ರೂಮ್ ಕಲ್ಪಿಸಲು ಸಾಧ್ಯವಿಲ್ಲದಿದ್ದರೂ ಆದ್ಯತೆ ಮೇರೆಗೆ ರೂಮ್ ಗಳನ್ನು ನೀಡಲಾಗುವುದು. ಹೊಸದಾಗಿ ಆರಿಸಿ ಬಂದಿರುವ ಸದಸ್ಯರಿಗೆ ಇನ್ನೂ ರೂಮ್ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದರು.
ಕಾಂಗ್ರೆಸ್ಸಿನ ಟಿಬಿ ಜಯಚಂದ್ರ ಅವರು ರೂಮ್ ಖಾಲಿ ಮಾಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಆ ರೂಮ್ ನೀಡಬಹುದಾಗಿದೆ. ಆದರೆ, ಸ್ಪೀಕರ್ ಅವರು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿ ಹೇಳಿದರು.
2000 ಹಾಗೂ 2004 ರಲ್ಲಿ ಶಾಸಕರ ಭವನದಲ್ಲಿ ರೂಮ್ ಪಡೆದಿದ್ದ ಯಡಿಯೂರಪ್ಪ ಅಸೆಂಬ್ಲಿ ಸೇರಿ ವಿರೋಧ ಪಕ್ಷದ ನಾಯಕರಾಗಿದ್ದರು. 2006ರಲ್ಲಿ ಟ್ವೆಂಟಿ 20 ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾದಾಗಲೂ ರೂಮ್ ಹಾಗೆ ಇತ್ತು.
ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೇಸ್ ಕೋರ್ಸ್ ನಿವಾಸಕ್ಕೆ ಶಿಫ್ಟ್ ಆಗಿದ್ದರು. ಇತ್ತೀಚೆಗೆ ಮನೆ ಖಾಲಿ ಮಾಡಿದ್ದರು.
ಒಂದು ಸಣ್ಣ ಫ್ಲಾಶ್ ಬ್ಯಾಕ್: ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ 8 ಜನ ಕ್ಯಾಬಿನೆಟ್ ಸಚಿವರು ಶಾಸಕರ ಭವನದ ರೂಮ್ ಖಾಲಿ ಮಾಡಲು ಹಿಂದೇಟು ಹಾಕಿದ್ದರು. ಸಿಂಗಲ್ ರೂಮ್ ಗೆ 100 ರು ಇದ್ದ ಬಾಡಿಗೆಯನ್ನು 3,000 ರು ನಿಂದ 30,000 ರು ಗೆ ಏರಿಸಿದ ಮೇಲೆ ತಕ್ಷಣವೇ ರೂಮ್ ಖಾಲಿಯಾಯಿತು. ಸಚಿವರುಗಳಿಗೆ ಪ್ರತಿ ತಿಂಗಳು ಮನೆಭತ್ಯೆ ರೂಪದಲ್ಲಿ 25,000 ರು ನಿಂದ 40,000 ರು ಸಿಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಹೀಗೆ ಖಾಲಿ ಮಾಡಿದವರಲ್ಲಿ ಉಮೇಶ್ ಕತ್ತಿ ಹಾಗೂ ಬಸವರಾಜ ಬೊಮ್ಮಾಯಿ ಮುಂತಾದ ಪ್ರಮುಖ ಸಚಿವರು ಇದ್ದರು ಎಂಬುದು ಗಮನಾರ್ಹ.
ಯಡಿಯೂರಪ್ಪ ಅವರ ಆಪ್ತೆ ಶೋಭಾ ಕರಂದ್ಲಾಜೆ ಅವರು ಮಾತ್ರ ಎಲ್ಲರಿಗೂ ಮಾದರಿಯಾಗುವ ಕೆಲಸ ಮಾಡಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ತಕ್ಷಣವೇ ಕುಮಾರಪಾರ್ಕ್ ಬಳಿ ಇದ್ದ ಅಧಿಕೃತ ಬಂಗಲೇ ಖಾಲಿ ಮಾಡಿ ಶಾಸಕರ ಭವನದ ರೂಮ್ ಸೇರಿದ್ದರು. ಆದರೆ, ಕೆಲವು ಸಚಿವರು ಇನ್ನೂ ಕೂಡಾ ಶಾಸಕರ ಭವನದಲ್ಲಿ ಖಾಯಂ ವಾಸ್ತವ್ಯ ನೆಲೆ ಕಂಡುಕೊಂಡಿದ್ದಾರೆ.












Click it and Unblock the Notifications