ಜೈಲಿನಿಂದ ಹೊರಬಿದ್ದ ವಿಠಲ ವಿವಿಯಿಂದ ಹೊರಕ್ಕೆ

ನಕ್ಸಲ್ ಬೆಂಲಿತ ಎಂಬ ಆಪಾದನೆಯಡಿ ಬಂಧಿತನಾಗಿ, ನಂತರ ಬೆಳ್ತಂಗಡಿ ಜೆಎಂಎಫ್ ಸಿ ನ್ಯಾಯಾಲಯದಿಂದ ಮುಕ್ತಿ ಪಡೆದಿದ್ದ ವಿಠಲ ಮಲೆಕುಡಿಯ ಮಂಗಳೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿ. ನಾಲ್ಕು ತಿಂಗಳ ಕಾಲ ಜೈಲುಪಾಲಾಗುವ ಮುನ್ನ ಪತ್ರಿಕೋದ್ಯಮದಲ್ಲಿ ಎರಡನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ. ಆದರೆ ಜೈಲಿನಿಂದ ಹೊರಬಂದು ಸ್ವತಂತ್ರ ಹಕ್ಕಿಯಾದ ವಿಠಲ, ಮೂರನೆಯ ಸೆಮಿಸ್ಟರ್ ವ್ಯಾಸಂಗ ಮುಂದುವರಿಸಲು ವಿವಿ ಬಾಗಿಲು ಬಡಿದಾಗ ನಿರಾಶೆ ಕಾದಿತ್ತು.
ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ವಹೀದಾ ಸುಲ್ತಾನಾ ಅವರ ಪ್ರಕಾರ ಹಾಜರಾತಿ ಪ್ರಮಾಣದ ಕೊರತೆಯಿಂದಾಗಿ ವಿಠಲನಿಗೆ ಪ್ರವೇಶ ನಿರಾಕರಿಸಲಾಗಿದೆಯಂತೆ. ಎಲ್ಲ ವಿಷಯಗಳಲ್ಲೂ ವಿಠಲನ ಹಾಜರಾತಿ ಶೇ. 52ರಷ್ಟಿದೆ. ಆದರೆ ಅಗತ್ಯವಿದ್ದುದು ಶೇ. 75ರಷ್ಟು ಎಂದು ಪತ್ರ ಮುಖೇನ ತಿಳಿಸಿದ್ದಾರೆ.
ಇದರಿಂದ ವಿಠಲ ಈಗ ಮತ್ತೆ ದ್ವಿತೀಯ ಸೆಮಿಸ್ಟರ್ ವ್ಯಾಸಂಗ ಮಾಡಿದ ನಂತರವಷ್ಟೇ ತೃತೀಯ ಸೆಮಿಸ್ಟರ್ ಗೆ ಹಾಜರಾಗಬೇಕು. ಕುತೂಹಲದ ಸಂಗತಿಯೆಂದರೆ ದ್ವಿತೀಯ ಸೆಮಿಸ್ಟರ್ ನಲ್ಲೂ ಅಟೆಂಡನ್ಸ್ ಕೊರತೆಯಿದ್ದರೂ ಪ್ರವೇಶ ನೀಡಲಾಗಿತ್ತು. ಪರೀಕ್ಷೆ ಬರೆಯುವಾಗ ಆತನಿಗೆ ಕೈಕೋಳ ತೊಡಿಸಲಾಗಿತ್ತು.
ಈ ಮಧ್ಯೆ, ವಿಠಲನಿಗೆ ಪ್ರವೇಶ ನಿರಾಕರಿಸಿದ ವಿವಿ ಕ್ರಮವನ್ನು ಖಂಡಿಸಿ, ವ್ಯಾಪಕ ಪ್ರತಿರೋಧ ಕಂಡುಬಂದಿದೆ. DYFI ಮತ್ತು Vittala Defence Committeeಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ಇದೇ ಜುಲೈ 20ರಂದು ಸಭೆ ನಡೆಸುವುದಾಗಿ DYFI ಮುಖ್ಯಸ್ಥ ಮುನೀರ್ ಕಟಿಪಾಲ ಹೇಳಿದ್ದಾರೆ.












Click it and Unblock the Notifications