ಆನೆ ದಾಳಿಗೆ ಸಿಲುಕಿ ಸಾತ್ವಿಕ್ ಶಾಸ್ತ್ರಿ ಸಾವು, ಶವ ಪತ್ತೆ

Posted By:
Subscribe to Oneindia Kannada
ಬೆಂಗಳೂರು, ಜು.16: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಟೆಕ್ಕಿ ಸಾತ್ವಿಕ್ ಅವರು ಶವವಾಗಿ ಪತ್ತೆಯಾಗಿರುವ ಮಾಹಿತಿ ಹೊರಬಿದ್ದಿದೆ. ಟಿವಿ 9 ವಾಹಿನಿ ಮಧ್ಯಾಹ್ನ ಪ್ರಸಾರ ಮಾಡಿದ ಸುದ್ದಿಯಂತೆ ಅಣ್ಣಯ್ಯನದೊಡ್ಡಿ ಅರಣ್ಯ ಪ್ರದೇಶದಲ್ಲಿ ಸಾತ್ವಿಕ್ ಅವರ ಶವ ಪತ್ತೆಯಾಗಿದೆ.

ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸಾತ್ವಿಕ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಶನಿವಾರ ರಾತ್ರಿಯೇ ಸಾತ್ವಿಕ್ ಮೇಲೆ ಆನೆ ದಾಳಿ ಮಾಡಿದೆ. ಸಾತ್ವಿಕ್ ಅವರನ್ನು ಸೊಂಡಿಲಿನಿಂದ ಎತ್ತಿ ಎಸೆದ ಪರಿಣಾಮ ಸಾತ್ವಿ ಕ್ ಶವ ಪೊದೆಯಲ್ಲಿ ಸಿಲುಕಿತ್ತು. ಹೀಗಾಗಿ ಸುಲಭವಾಗಿ ಶೋಧಿಸಲು ಸಾಧ್ಯವಾಗಿರಲಿಲ್ಲ.

ರಾಗಿಹಳ್ಳಿ ಗ್ರಾಮಸ್ಥರು ಈ ಮಾಹಿತಿಯನ್ನು ಮೊಟ್ಟಮೊದಲ ಬಾರಿಗೆ ಅರಣ್ಯಾಧಿಕಾರಿಗಳ ಒಂದು ತಂಡಕ್ಕೆ ಮುಟ್ಟಿಸಿದ್ದಾರೆ. ಈಗ ಶೋಧ ತಂಡ ಸ್ಥಳದತ್ತ ಧಾವಿಸುತ್ತಿದೆ. ಸುಮಾರು ಅರ್ಧ ಮುಕ್ಕಾಲು ಗಂಟೆಗಳ ನಂತರ ಘಟನಾ ಸ್ಥಳವನ್ನು ತಲುಪುವ ಸಾಧ್ಯತೆಯಿದೆ. ಅಣ್ಣಯ್ಯನದೊಡ್ಡಿ ಗ್ರಾಮದ ವ್ಯಾಪ್ತಿಗೆ ಬರುವ ಈ ಅರಣ್ಯ ಪ್ರದೇಶ ಬನ್ನೇರುಘಟ್ಟ -ಜಿಗಣಿ ಮುಖ್ಯರಸ್ತೆಯಿಂದ 8 ಕಿ.ಮೀ ದೂರದಲ್ಲಿದೆ.

ಕಾಡಾನೆ ದಾಳಿಗೆ ಬಲಿ: ರಾಗಿಹಳ್ಳಿ ಗುಡ್ಡದ ಮೇಲೆ ಕೂತಿದ್ದ ಮೂವರು ಹಿಂತಿರುಗುವ ಹಾದಿಯಲ್ಲಿ ಕಸವಿನ ಕುಂಟೆ ಪ್ರದೇಶದಿಂದ ಮುಂದೆ ಬಯಲು ಪ್ರದೇಶ ಸಿಗುತ್ತದೆ ಇಲ್ಲಿಂದ ಮುಂದೆ ನಾಲ್ಕು ದಾರಿಗಳು ಸಿಗುತ್ತದೆ.

ಈ ಪ್ರದೇಶದಲ್ಲೇ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಸಾತ್ವಿಕ್ ನಂತರ ತಪ್ಪು ಹಾದಿ ಹಿಡಿದು ಅರಣ್ಯದ ಒಳಗೆ ಹೋಗಿದ್ದಾನೆ. ಕಾಡಾನೆಗಳಿದ್ದ ಪ್ರದೇಶಕ್ಕೆ ಹೋಗಿ ಸಿಕ್ಕಿಬಿದ್ದ ಸಾತ್ವಿಕ್ ಮೇಲೆ ಮರಿಗಳೊಂದಿಗೆ ಇದ್ದ ಕಾಡಾನೆಗಳ ಗುಂಪು ದಾಳಿ ಮಾಡಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮಸ್ಥರ ಹೇಳಿಕೆಯ ಮೇರೆಗೆ ಆನೆ ದಾಳಿಗೆ ಸಿಲುಕಿದ ಬಲಗಾಲು ಮುರಿದ ಸ್ಥಿತಿಯಲ್ಲಿ ಶವ ಪೊದೆಯೊಂದರಲ್ಲಿ ಕಾಣಿಸಿದೆ. ನಂತರ ಅರಣ್ಯ ಅಧಿಕಾರಿಗಳ ತಂಡವನ್ನು ಹುಡುಕಿ ಗ್ರಾಮಸ್ಥರು ಮಾಹಿತಿ ಮುಟ್ಟಿಸಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಮೊಬೈಲ್ ಸಂಪರ್ಕ ಸಾಧ್ಯವಿಲ್ಲ.

ಸಾತ್ವಿಕ್ ಅವರ ಕುಟುಂಬ ವರ್ಗಕ್ಕೆ ಮಾಹಿತಿ ಮುಟ್ಟಿಸಲಾಗಿದ್ದರೂ ಆತನ ತಂದೆ ತಾಯಿಗೆ ಸಾತ್ವಿಕ್ ಸಾವಿನ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪೊಲೀರು ಹೇಳಿದ್ದಾರೆ.

ಶನಿವಾರ ಸಂಜೆ ಕಾಡಿನಿಂದ ಹಿಂತಿರುಗುವಾಗ ಸಾತ್ವಿಕ್ ಮೂತ್ರ ವಿಸರ್ಜನೆಗೆ ಹೋದ ನಂತರ ಕಣ್ಮರೆಯಾಗಿಬಿಟ್ಟ ಎಂದು ಅವರ ಬಾಲ್ಯ ಸ್ನೇಹಿತರು ಹೇಳಿದ್ದರು. ಸಾತ್ವಿಕ್ ಮೂತ್ರ ವಿಸರ್ಜನೆ ನಂತರ ದಾರಿ ತಪ್ಪಿ ಮತ್ತೆ ಕಾಡಿನೊಳಗೆ ಹೋಗಿರುವ ಸಾಧ್ಯತೆಯಿದೆ. ಇವರುಗಳು ಹಿಂತಿರುಗುವ ಹಾದಿಯಲ್ಲಿ ಅನೇಕ ಕಾಡು ಮೃಗಗಳು. ಅದರಲ್ಲೂ ಆನೆಗಳ ಗುಂಪು ಹೆಚ್ಚಾಗಿ ಆ ಪ್ರದೇಶದಲ್ಲಿ ಕಂಡು ಬರುತ್ತದೆ.

ಆದರೆ, ಸಾತ್ವಿಕ್ ಕಣ್ಮರೆಯಾದ ಸ್ಥಳದಲ್ಲಿ ಯಾವುದೇ ಪ್ರಾಣಿಯ ಹೆಜ್ಜೆ ಗುರುತು ಸಿಕ್ಕಿರಲಿಲ್ಲ. ಹೀಗಾಗಿ ಸಾತ್ವಿಕ್ ಇನ್ನಷ್ಟು ಕಾಡಿನೊಳಗೆ ಹೋಗಿ ತೊಂದರೆಗೆ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಆನೆಗಳ ದಾಳಿ ಸಂಭವದ ಜೊತೆಗೆ ಚಿರತೆ ದಾಳಿ ಬಗ್ಗೆ ಕೂಡಾ ಅರಣ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು.

ಬನ್ನೇರುಘಟ್ಟ ರಕ್ಷಿತಾರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ಟೆಕ್ಕಿ ಸಾತ್ವಿಕ್ ಶನಿವಾರ ಸಂಜೆ ನಾಪತ್ತೆಯಾಗಿದ್ದು, ಶೋಧ ಕಾರ್ಯ ಇನ್ನೂ ಮುಂದುವರೆದಿದೆ. ಸೋಮವಾರ ಯಾವುದೇ ಸುಳಿವು ಸಿಗದಿದ್ದರೆ ಮಂಗಳವಾರ(ಜು.17)ದಿಂದ ಹೆಲಿಕಾಪ್ಟರ್ ಬಳಸಿ ವೈಮಾನಿಕ ಶೋಧಕಾರ್ಯ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಹೇಳಿದ್ದರು.

ಸೆಲ್ ಟ್ರ್ಯಾಕಿಂಗ್ : ಭಾನುವಾರ ಸಂಜೆ ವರೆಗೂ ಸಾತ್ವಿಕ್ ಮೊಬೈಲ್ ರಿಂಗ್ ಆಗುತ್ತಿತ್ತು. ಆಮೇಲೆ ಸ್ವಿಚ್ ಆಫ್ ಆಗಿದೆ. ಹೀಗಾಗಿ ನನ್ನ ಪತ್ನಿ ಇಸ್ರೋ ಉದ್ಯೋಗಿಯಾಗಿದ್ದು, ಅವರ ಸಂಸ್ಥೆಯಿಂದ ಸೆಲ್ ಟ್ರ್ಯಾಕಿಂಗ್ ಬಳಸಿ ಲೋಕೆಷನ್ ಹುಡುಕಾಟ ನಡೆದಿದೆ. ಎರಡು ದಿನ ಕಳೆದಿರುವುದರಿಂದ ನಮ್ಮ ಆತಂಕ ಹೆಚ್ಚಿದೆ. ಸರ್ಕಾರ ಆದಷ್ಟು ಬೇಗ ಏರಿಯಲ್ ಸರ್ವೆಗೆ ಅನುಮತಿ ನೀಡಬೇಕು ಎಂದು ಕಣ್ಮರೆಯಾಗಿರುವ ಸಾತ್ವಿಕ್ ಅವರ ತಂದೆ ದಿನೇಶ್ ಶಾಸ್ತ್ರಿ ಹೇಳಿದ್ದರು.

ಸಾತ್ವಿಕ್ ನಾಪತ್ತೆಯಾದ ಸ್ಥಳದಿಂದ ಮೊದಲಿಗೆ ಹುಡುಕಾಟ ಆರಂಭಿಸಿದ ಅರಣ್ಯ ಸಿಬ್ಬಂದಿ, ಪೊಲೀಸ್ ತಂಡ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಮಂಜು ಕವಿದ ವಾತಾವರಣದಲ್ಲಿ ಯಾವುದೇ ಹೆಜ್ಜೆ ಗುರುತಾಗಲಿ, ಸುಳಿವಾಗಲಿ ಸ್ಪಷ್ಟವಾಗಿ ಸಿಕ್ಕಿರಲಿಲ್ಲ. ಭಾನುವಾರ ಸಂಜೆ ವೇಳೆಗೆ ಮಳೆಯಿಂದ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು. ಸಾಮಾನ್ಯವಾಗಿ ಅರಣ್ಯ ಪ್ರದೇಶದಿಂದ ಹೊರ ಬೀಳುವ ಚೆಕ್ ಔಟ್ ನಲ್ಲಿರುತ್ತಿದ್ದ ಕಾವಲುಗಾರ ಕೂಡಾ ಶನಿವಾರ ಸಂಜೆ ಎಲ್ಲಿದ್ದ ಎಂಬುದು ಸ್ಪಷ್ಟವಾಗಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The mysterious disappearance of techie Satwik Shastri comes to end with a sad demise of Sathwik. Sathwik Shastri's dead body found today(jul.16) near Ragihalli forest range of Bannerghatta National park, Bangalore
Please Wait while comments are loading...