ಫ್ರೀಸ್ಟೈಲ್ ಪೈಲ್ವಾನ್ ಕೈಯಲ್ಲಿ ಭಾರತ ಧ್ವಜ

Posted By:
Subscribe to Oneindia Kannada
Sushil Kumar
ನವದೆಹಲಿ, ಜು.16: ಲಂಡನ್‌ನಲ್ಲಿ ಜು.27ರಿಂದ ಆರಂಭವಾಗಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ತ್ರಿವರ್ಣಧ್ವಜಧಾರಿಯಾಗಿ ಕುಸ್ತಿ ಪಟು ಸುಶೀಲ್ ಕುಮಾರ್ ಆಯ್ಕೆಯಾಗಿದ್ದಾರೆ.

ಲಂಡನ್ ಒಲಿಂಪಿಕ್ಸ್ ಗೇಮ್ಸ್‌ 2012ನ ಉದ್ಘಾಟನಾ ಸಮಾರಂಭದಲ್ಲಿ ಕುಸ್ತಿ ಪಟು ಸುಶೀಲ್ ಕುಮಾರ್ ಭಾರತದ ಧ್ವಜಧಾರಿಯಾಗಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಭಾನುವಾರ(ಜು.16) ಘೋಷಿಸಿದರು.

ಒಲಿಂಪಿಕ್ಸ್ ಪದಕ ವಿಜೇತರಾದ ಲಿಯಾಂಡರ್ ಪೇಸ್, ವಿಜೇಂದರ್ ಸಿಂಗ್ ಹಾಗೂ ಅಭಿನವ್ ಬಿಂದ್ರಾರಿದ್ದ ಪಟ್ಟಿಯಲ್ಲಿ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿರುವ ಸುಶೀಲ್‌ಕುಮಾರ್‌ರನ್ನು ಪರೇಡ್ ನಾಯಕನಾಗಿ ಆಯ್ಕೆಮಾಡಲಾಗಿದೆ ಎಂದು ಮಲ್ಹೋತ್ರಾ ತಿಳಿಸಿದರು.

ಉದ್ಘಾಟನಾ ಸಮಾರಂಭದ ಮರುದಿನವೇ ವಿಜೇಂದರ್ ಹಾಗೂ ಅಭಿನವ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 10ಮೀ ಏರ್ ರೈಫಲ್ ಸ್ಪರ್ಧೆಗಳು ಜುಲೈ.30 ರಿಂದ ಆರಂಭವಾಗಲಿದೆ.

ಆದ್ದರಿಂದ ಸುಶೀಲ್ ಕುಮಾರ್‌ರನ್ನು ಪರೇಡ್ ನಾಯಕನಾಗಿ ನೇಮಿಸಿದ್ದೇವೆ ಎಂದು ಮಲ್ಹೋತ್ರಾ ಸ್ಪಷ್ಟಪಡಿಸಿದರು.ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಪರೇಡ್ ನಾಯಕನ ಗೌರವವನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಪದಕಗಳು ದೊರೆಯಿತು. ಶೂಟರ್ ಅಭಿನವ್ ಬಿಂದ್ರಾ ಚಿನ್ನದ ಪದಕ ದೊರಕಿಸಿಕೊಟ್ಟರು.

ಕಳೆದ ಒಲಿಂಪಿಕ್ಸ್‌ನಲ್ಲಿ ವಿಜೇಂದರ್ ಸಿಂಗ್ ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ಸುಶೀಲ್ ಕುಮಾರ್ ಕಂಚು ಪಡೆದರು. ಭಾರತ ಕಳೆದ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ ಮತ್ತು ಎರಡು ಕಂಚು ಪಡೆಯಿತು.

ಶೂಟಿಂಗ್ ತಂಡ ಮತ್ತೆ ಪದಕ ತಂದುಕೊಡುವ ಭಾರೀ ನಿರೀಕ್ಷೆಯನ್ನು ಹೊಂದಿದೆ. ಅಭಿನವ್ ಬಿಂದ್ರಾ ತಂಡದಲ್ಲಿ ಗಗನ್ ನಾರಂಗ್ ಮತ್ತು ರಂಜನ್ ಸೋದಿ ಇದ್ದಾರೆ.

ಭಾರತ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಪಡೆದಿರುವ ಪದಕಗಳಿಗಿಂತ ಹೆಚ್ಚು ಪದಕಗಳನ್ನು ಲಂಡನ್ ಒಲಿಂಪಿಕ್ಸ್‌ನಲ್ಲಿ ಪಡೆಯುವ ಸಾಧ್ಯತೆ ಇದೆ.

ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 29 ವರ್ಷದ ಭಾರತದ ಹೆಮ್ಮೆಯ ಕುಸ್ತಿಪಟು ಸುಶೀಲ್, ಏಷ್ಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲೂ ಪದಕ ಗಳಿಸಿದ್ದಾರೆ. ಈ ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸವನ್ನು ಸುಶೀಲ್ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Champion wrestler Sushil Kumar will be the country's flag bearer at the opening ceremony of the London Games on Jul 27, the Indian Olympic Association said Sunday(Jul.15).
Please Wait while comments are loading...