ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಕೊಟ್ಟ ಯಡಿಯೂರಪ್ಪ; ಕಾಂಗೈ ನಾಯಕರು ದಿಲ್ಲಿಗೆ ದೌಡು

By Srinath
|
Google Oneindia Kannada News

kpcc-parameshwara-siddaramaiah-reach-delhi
ಬೆಂಗಳೂರು, ಜುಲೈ 9: ಯಾವಾಗ ಬಿಜೆಪಿ ಹೈಕಮಾಂಡ್ ಸನ್ಮಾನ್ಯ ಯಡಿಯೂರಪ್ಪ ಅವರೆದುರು ಮಂಡಿಯೂರಿ ಜಗದೀಶ್ ಶೆಟ್ಟರ್ ಅವರಿಗೆ ಮಣೆ ಹಾಕಿತೋ, ಅದೇ ಘಳಿಗೆಯಲ್ಲಿ ಯಡಿಯೂರಪ್ಪ 'ಕೈ' ತಪ್ಪುತ್ತಿದ್ದಾರೆ ಎಂಬ ಸೂಕ್ಷ್ಮವನ್ನು ಅರಿತ ಕಾಂಗ್ರೆಸ್ ಹೈಕಮಾಂಡ್, ಸುಮ್ಮನೇ ಹಾಗೇ ಯಡಿಯೂರಪ್ಪನನ್ನು ಸಿಬಿಐ ಕಚೇರಿಗೆ ಕರೆಸಿಕೊಂಡಿತು.

ನಾಯಕತ್ವ ವಿಷಯವಾಗಿ ರಾಜ್ಯ ಬಿಜೆಪಿ ಇನ್ನೇನು ಹಳ್ಳ ಹಿಡಿಯಿತು ಎಂದು ಒಳಗೊಳಗೇ ನಕ್ಕಿದ್ದ ಕಾಂಗ್ರೆಸ್, ಪಾತಾಳದಲ್ಲಿದ್ದ ತನ್ನ ಧೀಮಂತ ನಾಯಕರನ್ನು ಗಾಢ ನಿದ್ರೆಯಿಂದ ಎಬ್ಬಿಸುವ ಕಾರ್ಯ ಮಾಡಿದೆ. ಹಾಗಾಗಿಯೇ ಮೇಡಂ ಸೋನಿಯಾ ಅವರು ಇತ್ತೀಚೆಗೆ ತುಮಕೂರಿಗೆ ಬಂದು ಪಕ್ಷಕ್ಕೆ ಅಗತ್ಯವಿದ್ದ ವೀರಶೈವ ಟಾನಿಕ್ ನೀಡಿದ್ದರು. ಅದರ ಇಂಚುಮುಂಚಿನಲ್ಲೇ ಲಿಂಗಾಯತರ ಅಧಿನಾಯಕ ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ 'ಹಸ್ತಾಂತರ' ಮಾಡಿಕೊಳ್ಳಲು ಉತ್ಸುಕರಾದರು.

ಸಿಬಿಐ ಭೀತಿವಾದದಲ್ಲಿ, ಭೀಷ್ಮ ಪಿತಾಮಹ ಅಡ್ವಾಣಿಯ ಕೈಯಲ್ಲಿ ಛೀ ಥೂ ಅನ್ನಿಸಿಕೊಳ್ಳುವುದಕ್ಕಿಂತ ಕಾಂಗ್ರೆಸ್ ಸಹವಾಸವೇ ಲೇಸು ಎಂದು ಬಗೆದ ಯಡಿಯೂರಪ್ಪ ಸಹ 'ಕೈ'ಚಾಚಿದ್ದರು. ಆದರೆ 'ಸಕಾಲ'ದಲ್ಲಿ ಎಚ್ಚೆತ್ತ ಬಿಜೆಪಿ ಹೈಕಮಾಂಡ್, ಕೊನೆಗೂ ತಮ್ಮ ನಾಯಕನನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಆದರೆ ತನ್ನ ಲೆಕ್ಕಾಚಾರವೆಲ್ಲ ಕೈಜಾರಿತು ಎಂದೆಣೆಸಿದ ಕಾಂಗ್ರೆಸ್ ಇನ್ನೂ ಸುಮ್ಮನಿದ್ದರೆ ಉಳಿಗಾಲವಿಲ್ಲ ಎಂಬ ಸೂಕ್ಷ್ಮವನ್ನು ಅರಿತು, ರಾಜ್ಯ ಕಾಂಗ್ರೆಸ್ಸಿನಲ್ಲಿ ತಾಂಡವವಾಡುತ್ತಿರುವ ಭಿನ್ನಮತಕ್ಕೆ ಮಂಗಳಹಾಡಿ, ನಾಯಕತ್ವ ಬದಲಾವಣೆಗೆ ಶ್ರೀಕಾರ ಹಾಕಿದೆ. ತನ್ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಜನಜನಿತವಾಗಿರುವ ಆಂತರಿಕ ಕಚ್ಚಾಟವನ್ನು ತಹಬಂದಿಗೆ ತರಲು ಮುಂದಾಗಿದೆ. ಆ ಪ್ರಯತ್ನವಾಗಿ, ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿದ್ದರೂ, ಮುಖಾಮುಖಿ ಕಾದಾಟದಲ್ಲಿ ತೊಡಗಿರುವ ಸಿದ್ರಾಮಯ್ಯ ಮತ್ತು ಪರಮೇಶ್ವರ್ ಅವರನ್ನು ಇಂದು ದಿಲ್ಲಿಗೆ ಕರೆಸಿಕೊಂಡಿದೆ.

ಈ ಮುಂಚೂಣಿ ನಾಯಕರು ತಮ್ಮದೇ ಪ್ರಾಬಲ್ಯ ಮೆರೆಯಲು ಪಕ್ಷದಲ್ಲಿ ಗುಂಪುಗಾರಿಕೆಯನ್ನು ಪೋಷಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ಸಿನ ಒಟ್ಟಾರೆ ಹಿತಾಸಕ್ತಿ ಯಾರೊಬ್ಬರಿಗೂ ಬೇಕಾಗಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಪಕ್ಷವನ್ನು ಅಧಿಕಾರಕ್ಕೆ ತರುವ ಆಶಯ 'ಕೈ'ಗೂಡುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡ ಕಾಂಗ್ರೆಸ್ ಹೈಕಮಾಂಡ್ ಈ ಇಬ್ಬರೂ ನಾಯಕರನ್ನು ದಿಲ್ಲಿಗೆ ಬರಮಾಡಿಕೊಂಡಿದೆ.

ಬದಲಾವಣೆಯ ಪರ್ವ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೋಳು ತಾರಕಕ್ಕೇರಿದ್ದು, ಮೊದಲು ರಾಜ್ಯ ಕಾಂಗ್ರೆಸ್ಸಿನ ಉಸ್ತುವಾರಿ ಹೊತ್ತಿರುವ ಮಧುಸೂಧನ್ ಮಿಸ್ತ್ರಿ ಅವರನ್ನು ಬದಲಾಯಿಸಲು ಪಕ್ಷ ನಿರ್ಧರಿಸಿದಂತಿದೆ. ಕಾಶ್ಮೀರದ ಕಲಿ ಗುಲಾಂ ನಬಿ ಅಜಾದ್ ಅವರ ಹೆಗಲಿಗೆ ಕರ್ನಾಟಕದ ಉಸ್ತುವಾರಿಯನ್ನು ವಹಿಸಲು ಕಾಂಗ್ರೆಸ್ ತೀರ್ಮಾನಿಸಿದಂತಿದೆ. ಜತೆಗೆ, ಇಡೀ KPCC ಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಎಂಬುದರ ಬಗ್ಗೆಯೂ ಚಿಂತಿಸುವ ಆಲೋಚನೆಯಲ್ಲಿದೆ.

ಇಬ್ಬರ ಮಧ್ಯೆ ಅಂಥಾ chemistry ಇಲ್ಲದಿದ್ದರೂ ಒಂದೇ ವಿಮಾನದಲ್ಲಿ ದೆಹಲಿಗೆ ಬಂದಿಳಿದ ನಾಯಕದ್ವಯರನ್ನು ವಿಚಾರಿಸಿಕೊಳ್ಳಲು ಮೇಡಂ ಸೋನಿಯಾ ಸಿದ್ಧವಾಗಿ ಕುಳಿತಿದ್ದಾರೆ. ಹಾಗೆಯೇ, ಸರಿಯಾಗಿ ಕೈಕೊಟ್ಟ ಯಡಿಯೂರಪ್ಪ ಅವರಿಗೆ ಸಿಬಿಐ ಸೇವೆ ಸಲ್ಲಿಸುವ ಬಗ್ಗೆಯೂ ಮಂತ್ರಾಲೋಚನೆ ನಡೆಯುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಪಿಸುಗುಟ್ಟಿವೆ.

English summary
Karnataka Power crisis: KPCC president G Parameshwara opposition party leader Siddaramaiah reach Delhi Congress high-command to sort out leadership issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X