ಜಗನ್ ರೆಡ್ಡಿಗೆ ಸಿಬಿಐ ನಂತರ 'ಈಗ' ಇಡಿ ಉರುಳು

ಈ ಪ್ರಕರಣದಲ್ಲಿ ಜಗನ್ ಅವರನ್ನು ಆರೋಪಿಯಾಗಿ ಕಾಣುತ್ತಿಲ್ಲ, ಶಂಕಿತರನ್ನಾಗಿ ವಿಚಾರಣೆ ಒಳಪಡಿಸಬಹುದಾಗಿದೆ ಎಂದು ಇಡಿ ತಂಡ ಹೇಳಿಕೆ ನೀಡಿತ್ತು. ಜಗತಿ ಪಬ್ಲಿಕೇಷನ್ ಪ್ರೈ ಲಿ ಗೆ ಸಂಬಂಧಿಸಿದಂತೆ ಜಗನ್ ಹೇಳಿಕೆ ಪಡೆಯುವ ಅವಶ್ಯಕತೆಯಿದೆ ಎಂದು ಕೋರ್ಟಿಗೆ ಇಡಿ ಮನವಿ ಸಲ್ಲಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ತನ್ನ ನಾಲ್ಕನೇ ಚಾರ್ಚ್ ಶೀಟ್ ಅನ್ನು ನ್ಯಾಯಲಯಕ್ಕೆ ಸಲ್ಲಿಸಿದೆ. ಜಗತಿ ಪಬ್ಲಿಕೇಷನ್ ಗೂ ನನಗೂ ಸಂಬಂಧವಿಲ್ಲ ಎಂದು ಜಗನ್ ಹೇಳಿದ್ದರೂ ಅವರನ್ನು ಆರೋಪಿ ನಂ.12 ಎಂದು ಹೆಸರಿಸಿ ಚಾರ್ಚ್ ಶೀಟ್ ಹಾಕಲಾಗಿದೆ. ಈ ಚಾರ್ಚ್ ಶೀಟ್ ಆಧಾರದ ಮೇಲೆ ಇಡಿ ತನ್ನ ತನಿಖೆ ಮುಂದುವರೆಸುವ ಸಾಧ್ಯತೆ ಇದ್ದು, ಜಗನ್ ಹೇಳಿಕೆ ದಾಖಲಿಸಲು ಬಯಸಿದೆ.
ಆದರೆ, ಜಗನ್ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸಿ ಫೆ.1, 2011ರಲ್ಲೇ ಜಗತಿ ಪಬ್ಲಿಕೇಷನ್ ಗೆ ಜಗನ್ ರಾಜೀನಾಮೆ ನೀಡಿದ್ದಾರೆ. ಸಿಬಿಐ ಆರೋಪ ಪಟ್ಟಿಯಲ್ಲಿ ಆರೋಪಿ 12 ಆಗಿರುವುದಕ್ಕೆ ಸೂಕ್ತ ಸಾಕ್ಷಿ ಇಲ್ಲ. ಈ ದೋಷಾರೋಪಣ ಪಟ್ಟಿ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇಡಿ ವಿಚಾರಣೆ ನಡೆಸಿದರೆ ಜಗನ್ ಸೂಕ್ತ ಉತ್ತರ ನೀಡಲು ಸಾಧ್ಯವಿಲ್ಲ, ಸದ್ಯ ನಮ್ಮ ಕಕ್ಷಿದಾರ ಚಂಚಲಗುಡ ಜೈಲಿನಲ್ಲಿದ್ದು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.
ಸೆಕ್ಷನ್ 50(2) ಪ್ರಕಾರ, ಸಿಬಿಐ ನಿರ್ದೇಶನದಂತೆ ಜಗನ್ ಮೋಹನ್ ರೆಡ್ಡಿಗೆ ಸಮನ್ಸ್ ನೀಡಲಾಗಿದೆ. ನಾವು ಇನ್ನೂ ಜಗನ್ ಅವರನ್ನು ಆರೋಪಿಯಾಗಿ ಪರಿಗಣಿಸಿಲ್ಲ. ಈ ಪ್ರಕರಣ(ಮನಿ ಲಾಂಡ್ರಿಂಗ್, ಅಕ್ರಮ ಹಣ ಸಂಪಾದನೆ) ಹಿಂದಿನ ಸಂಪೂರ್ಣ ವಿವರ ಕಲೆ ಹಾಕಿ, ಸಂಚಿನ ರಹಸ್ಯ ಹೊರಕೆಡವಿದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಇದುವರೆವಿಗೂ ನಾಲ್ಕು ಆರೋಪಪಟ್ಟಿಗಳನ್ನು ದಾಖಲಿಸಿದೆ. ಮೊದಲ ಆರೋಪಪಟ್ಟಿಯಲ್ಲಿ ಜಗನ್ ಮತ್ತಿತರ 11 ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದೆರಡು ಆರೋಪಪಟ್ಟಿಗಳಲ್ಲಿ ಅವರಿಗೆ ಜಾಮೀನು ದೊರೆತಿಲ್ಲ.
ಸಿಬಿಐ ವಿಶೇಷ ನ್ಯಾಯಾಲಯ ಜಗನ್ ಮೋಹನ್ ರೆಡ್ಡಿ ಅವರನು ನ್ಯಾಯಾಂಗ ಬಂಧನವನ್ನು ಜು.18ರ ತನಕ ವಿಸ್ತರಿಸಿದೆ. ಜಗನ್ ಅವರ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.












Click it and Unblock the Notifications