ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹೋದ್ಯೋಗಿಗಳ ಮಧ್ಯೆ ಸೈಕಲ್ ಹೊಡೆದ ಮೈಸೂರು DC

By Srinath
|
Google Oneindia Kannada News

ಮೈಸೂರು, ಜುಲೈ 3: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ ಸೈಕಲ್ಲುಗಳ ಟ್ರಿಣ್ ಟ್ರೀಣ್... ಕಲರವ. ರಾಜಮಹಾರಾಜ ಕಾಲದಲ್ಲಿ ಟಾಂಗಾ, ಸಾರೋಟು ಕಾಣುಬರುತ್ತಿತ್ತು. ಆದರೆ ಈಗ ಸಾಕ್ಷಾತ್ ಐಎಎಸ್, ಕೆಎಎಸ್ ದರ್ಜೆಯ ಅಧಿಕಾರಿಗಳು ಕೆಂಪು ಗೂಟದ ಸರ್ಕಾರಿ ಕಾರುಗಳನ್ನು ಸೈಡಿಗೆ ಹಾಕಿ ಸೈಕಲ್ ತುಳಿಯುತ್ತಿದ್ದಾರೆ.


ಅಯ್ಯೋ ಚಾಮುಂಡಿ ತಾಯಿಯೇ ಇಂಥಹ ಭೀಕರ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆ ಎಂದು ಕೇಳುವಷ್ಟರೊಳಗೆ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೊಮ್ಮೆ ಏರಿಸಲಾಗುವುದು ಎಂಬ ಸುದ್ದಿ ಸ್ಫೋಟಗೊಂಡಿತು. ಅಂದರೆ ಇಂಧನ ಬೆಲೆಯನ್ನು ಒಂದೇ ಸಮನೆ ಏರಿಸುತ್ತಿರುವುದರಿಂದ ಭೀಕರ ಭವಿಷ್ಯ ಕಣ್ಮುಂದೆ ಬಂದು, ಪರಿಸರ ಸ್ನೇಹಿ ಬೈಸಿಕಲ್ ಬಳಸಿ ಇಂಧನ ಉಳಿಸಿ ಎಂಬ ಮಂತ್ರೋಚ್ಛಾರಣೆ ಜೋರಾಗಿ ಕೇಳಿಬಂದಿದೆ. ಅದಕ್ಕೆ ಲಯಬದ್ದವಾಗಿ ಈ ಟ್ರಿಣ್ ಟ್ರೀಣ್... ಕಲರವ.

ಸೋಮವಾರ ಬಂತೆಂದರೆ ಸಾಕು ಮೈಸೂರಿನಲ್ಲಿ ಸರ್ಕಾರಿ ನೌಕರರು ಕಚೇರಿಗೆ ಕಡ್ಡಾಯವಾಗಿ ಸೈಕಲ್‌ನಲ್ಲೇ ಬರಬೇಕು ಎಂಬ ಆದೇಶ ಇತ್ತೀಚೆಗೆ ಜಿಲ್ಲಾಡಳಿತದಿಂದ ಹೊರಬಿದ್ದಿದೆ. ಗಮನಾರ್ಹವೆಂದರೆ, ಜಿಲ್ಲಾಧಿಕಾರಿ ಪಿಎಸ್ ವಸ್ತ್ರದ್ ಅವರು ಈ ಆದೇಶ ಹೊರಡಿಸಿ, ಎಂದಿನಂತೆ ಕಾರು ಹತ್ತಿಲ್ಲ.

ತಾವೂ ಸಹ ಸರ್ಕಾರಿ ಕಾರು ಬಿಟ್ಟು ಮನೆಯಿಂದ ಕಚೇರಿಗೆ ಸೈಕಲ್ ಹೊಡೆಯುತ್ತಿದ್ದಾರೆ. ನಿನ್ನೆ ಸೋಮವಾರ ಈ ಸೈಕಲ್ ಸವಾರಿಯು ಎರಡನೇ ವಾರಕ್ಕೆ ಕಾಲಿಟ್ಟಿದೆ. ಜಿಲ್ಲೆಯಾದ್ಯಂತ ಇನ್ಮುಂದೆ ಎಲ್ಲ ಸರಕಾರಿ ನೌಕರರೂ ಸೈಕಲ್ ಹೊಡೆಯಲಿದ್ದಾರೆ.

ಅಧಿಕಾರಿಗಳು ಸೈಕಲ್ ತುಳಿಯಲು ಆರಂಭಿಸಿರುವುದರಿಂದ ನಗರದಲ್ಲಿ ಸೈಕಲ್‌ಗಳ ಓಡಾಟಕ್ಕೆ ರಸ್ತೆಯಲ್ಲಿ ಪ್ರತ್ಯೇಕ ಪಥವನ್ನೇ ನಗರ ಸಂಚಾರ ಪೊಲೀಸ್ ಗುರುತಿಸುತ್ತಿದೆ. ಅಧಿಕಾರಿಗಳು ಸೈಕಲ್ ತುಳಿಯುತ್ತಿರುವುದನ್ನು ನೋಡಿ ಕೆಲವರು ಅವಾಕ್ಕಾದರು. ಹಿರಿಯ ಅಧಿಕಾರಿಗಳೇ ಸೈಕಲ್ ತುಳಿಯುವುದಾದರೆ, ನಾವೇಕೆ ಸೈಕಲ್ ಬಳಸಬಾರದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಆದೇಶ ಹೊರಡಿಸಿದ ಮೊದಲ ಸೋಮವಾರ ಐಎಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಕೆಲವರು ಮಾತ್ರ ಮನೆಯಿಂದ ಕಚೇರಿಗೆ ಬೈಸಿಕಲ್‌ಗಳಲ್ಲಿಯೇ ಬಂದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ಡಾ. ಸಿ.ಜಿ. ಬೆಟಸೂರ್‌ ಮಠ ಅವರು ಸೈಕಲ್‌ನಲ್ಲಿ ಬಾರದ ಸಿಬ್ಬಂದಿಯನ್ನು ಕಚೇರಿಯ ಆವರಣದ ಒಳಕ್ಕೆ ಬಿಡದಂತೆ ಭದ್ರತಾ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.

ಹಾಗಾಗಿ ಬೈಸಿಕಲ್‌ನಲ್ಲಿ ಬರುವ ಸಿಬ್ಬಂದಿಗೆ ಮಾತ್ರ ಗೇಟ್ ತೆಗೆಯಲಾಗುತ್ತಿದೆ. ಉಳಿದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಕಳೆದ ವಾರ ದ್ವಿಚಕ್ರ ವಾಹನಗಳಲ್ಲಿ ಬಂದು ವಾಪಸ್ ತೆರಳಿದವರು, ಈ ವಾರ ಬೈಸಿಕಲ್‌ನಲ್ಲಿ ಬಂದರು.

ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಅವರು ಹುಣಸೂರು ರಸ್ತೆಯ ತಮ್ಮ ನಿವಾಸದಿಂದ ಗನ್‌ಮೆನ್ ಜೊತೆ ಎರಡು ಸೀಟು ಉಳ್ಳ ಸೈಕಲ್ ಏರಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಒಂದೇ ಸೈಕಲ್‌ನಲ್ಲಿ ಇಬ್ಬರು ಕುಳಿತಿದ್ದರಿಂದ ರಸ್ತೆಯಲ್ಲಿ ಹೋಗುವವರ ಇವರನ್ನೇ ನೋಡತೊಡಗಿದರು. ಸೈಕಲ್‌ನಲ್ಲಿರುವವರು ಜಿಲ್ಲಾಧಿಕಾರಿ ಎಂದು ಖಾತರಿಯಾದಾಗ ಕೆಲವರು ಕೈ ಎತ್ತಿ ಶುಭ ಕೋರಿದರು. ಜಿಲ್ಲಾಧಿಕಾರಿ ಸಹ ಕೈ ಬೀಸಿ ನಸುನಕ್ಕರು.

ಮಹಾನಗರಪಾಲಿಕೆ ಹಿರಿಯ ಅಧಿಕಾರಿಯಿಂದ ಹಿಡಿದು ಎಲ್ಲರೂ ಸೈಕಲ್‌ನಲ್ಲಿ ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಸಾಮೂಹಿಕವಾಗಿ ಸೈಕಲ್‌ನಲ್ಲಿ ಬರುವ ಮೂಲಕ ಎಲ್ಲರ ಗಮನ ಸೆಳೆದರು. ಪಾಲಿಕೆ ಆಯುಕ್ತ ಡಾ. ಎಂ.ಆರ್. ರವಿ ಸೈಕಲ್ ಏರಿ ಸಿಬ್ಬಂದಿಯೊಂದಿಗೆ ಕಚೇರಿ ತಲುಪಿದರು. ಉಪ ಆಯುಕ್ತ ಧರ್ಮಪ್ಪ, ಪಾಲಿಕೆ ವಲಯ ಸಹಾಯಕ ಆಯುಕ್ತರು, ಸಹ ಆಯುಕ್ತರ ಸೈಕಲ್ ಸವಾರಿಗೆ ಸಾಥ್ ನೀಡಿದರು.

ಜಿಲ್ಲಾ ಪಂಚಾಯತ್ ಸಿಇಓ ಡಾ. ಅಜಯ್ ನಾಗಭೂಷಣ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಕುಮುದ ಗಿರೀಶ್, ವಾರ್ತಾ ಇಲಾಖೆ ಉಪ ನಿರ್ದೇಶಕ ಎ.ಆರ್. ಪ್ರಕಾಶ್ ಅವರು ಸಹ ಸೈಕಲ್‌ನಲ್ಲೇ ಕಚೇರಿ ಸೇರಿದ್ದಾರೆ.

English summary
Mysore mantra: Government officials in Mysore district will have to pedal their way to offices on bicycles every Monday as per the orders issued by Mysore deputy commissioner P.S. Vastrad to all offices in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X