ಪ್ರಿಯಕೃಷ್ಣ ರಫೀಕ್ ಚಕಮಕಿ, ಪರಿಸ್ಥಿತಿ ಉದ್ವಿಗ್ನ

ಪ್ರಿಯಕೃಷ್ಣ ಅವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಚಂದ್ರಾಲೇಔಟ್ ಪೊಲೀಸ್ ಠಾಣೆ ಎದುರು ರಫೀಕ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಪ್ರಿಯಕೃಷ್ಣ ಬೆಂಬಲಿಗರು ಕೂಡಾ ಪೊಲೀಸ್ ಠಾಣೆ ಎದುರು ಪ್ರತಿಭಟನೆಗೆ ಮುಂದಾದರು. ಎರಡು ಪಂಗಡಗಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮೀಲಾಯಿಸುವ ಹಂತ ತಲುಪಿತು.
ಪರಿಸ್ಥಿತಿ ಕೈ ಮೀರುವ ಲಕ್ಷಣಗಳು ಕಂಡು ಬಂದಿದ್ದರಿಂದ ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು, ಗುಂಪನ್ನು ಚದುರಿಸಿದ್ದಾರೆ.
ಗೊವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಉರ್ದು ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ರಫೀಕ್ ಪಡೆದಿದ್ದರು.
ಆದರೆ, ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ಪ್ರಿಯಕೃಷ್ಣಾ ಅವರು, ಕಳಪೆ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ರಫೀಕ್ ರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ವಿಷಯ ಪೊಲೀಸರ ತನಕ ಮುಟ್ಟಿ, ಸ್ಥಳಕ್ಕೆ ಪೊಲೀಸರು ಬಂದು ಉದ್ರಿಕ್ತ ಗುಂಪನ್ನು ಸಮಾಧಾನಪಡಿಸಿದ್ದರು.
ಶಾಸಕ ಪ್ರಿಯಕೃಷ್ಣ ಬೆಂಬಲಿಗರು ಕೊಲೆ ಬೆದರಿಕೆ ಒಡ್ಡಿದ್ದಾರೆ. ಬಂದೂಕು ತೋರಿಸಿ ಹೆದರಿಸಿದರು ಎಂದು ರಫೀಕ್ ದೂರು ನೀಡಿದರು. ಅಲ್ಲದೆ ಚಂದ್ರಾಲೇಔಟ್ ಪೊಲೀಸ್ ಠಾಣೆ ಎದುರು ರಫೀಕ್ ಬೆಂಬಲಿಗರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ರಫೀಕ್ ಅವರು ಕೈಗೆತ್ತಿಕೊಂಡಿದ್ದ ಕಾಮಗಾರಿ ಕಳಪೆಯಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ನಿಜ ಆದರೆ, ಬಂದೂಕು ತೋರಿಸಿ ಯಾರನ್ನು ಬೆದರಿಸಿಲ್ಲ ಎಂದು ಶಾಸಕ ಪ್ರಿಯಕೃಷ್ಣ ಹೇಳಿದ್ದಾರೆ.
ಗಲಾಟೆ ಹೊಸದೇನಲ್ಲ: ಈ ಹಿಂದೆ ವಾರ್ಡ್ ನಂಬರ್ 128 ನಲ್ಲಿ ನಾಗರಭಾವಿ ಸರ್ಕಲ್ ಬಳಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮವೊಂದನ್ನು ಬಿಬಿಎಂಪಿ ಹಮ್ಮಿಕೊಂಡಿತ್ತು.
ಆದರೆ ಶಾಸಕ ಪ್ರಿಯಕೃಷ್ಣ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ. ಇದೇ ಕಾರಣವಾಗಿ ಕ್ಷೇತ್ರದ ಶಾಸಕರನ್ನು ನಿರ್ಲಕ್ಷಿಸಲಾಗಿದೆ ಎಂದು ಅವರ ಬೆಂಬಲಿಗರು ಘೋಷಣೆ ಕೂಗುತ್ತಾ, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗೃಹಸಚಿವ ಆರ್ ಅಶೋಕ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಫಲರಾಗಲಿಲ್ಲ.
ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಶಾಸಕ ಶಾಸಕ ಎಂ.ಕೃಷ್ಣಪ್ಪ ಮತ್ತವರ ಪತ್ನಿ ಪ್ರಿಯದರ್ಶಿನಿ, ಪುತ್ರರಾದ ಪ್ರಿಯಕೃಷ್ಣ ಹಾಗೂ ಪ್ರದೀಪ್ ವಿರುದ್ಧ ಅಪರಾಧ ದಂಡ ಪ್ರಕಿಯಾ ಸಂಹಿತೆ ಕಾಯ್ದೆ (ಸಿಆರ್‌ಪಿಸಿ) ಸೆಕ್ಷನ್ 156(3)ರಡಿ ಎಫ್‌ಐಆರ್ ದಾಖಲಿಸಿ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಮಾರು 700ಕ್ಕೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವುದಾಗಿ ಪ್ರಿಯಕೃಷ್ಣ ಚುನಾವಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದರು.












Click it and Unblock the Notifications