ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ಆಟ ಆರಂಭ

By * ಬಾಲರಾಜ್ ತಂತ್ರಿ
|
Google Oneindia Kannada News

Jagan Mohan Reddy
ಆಂಧ್ರ ರಾಜಕಾರಣಕ್ಕೂ ರಾಜ್ಯದ ರಾಜಕಾರಣಕ್ಕೂ ಹಿಂದಿನಿಂದಲೂ ಅವಿನಾಭಾವ ನಂಟು. ಇನ್ನು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬಳ್ಳಾರಿ ಗಣಿಧಣಿಗಳ ಮೂಲಕ ಈ ಸಂಬಂಧ ಇನ್ನಷ್ಟು ಬೆಸೆದರೂ ಮತ್ತೊಂದು ಕಡೆ ಒಂದಲ್ಲಾ ಕಾರಣಕ್ಕೆ ಬಿರುಕು ಬಿಡುತ್ತಾ ಬಂದಿತ್ತು.

ಆಂಧ್ರದ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವಘಡಕ್ಕೆ ಈಡಾಗಿ ಸಾವನ್ನಪ್ಪಿದಾಗ ಅವರ ಅಂತ್ಯ ಸಂಸ್ಕಾರಕ್ಕೆ ಮುನ್ನವೇ ಅವರ ಮಗ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರಿ ಆಗಬೇಕೆಂದು ಲಾಬಿ ನಡೆಸುತ್ತಿದ್ದವರಲ್ಲಿ ಬಳ್ಳಾರಿ ರೆಡ್ಡಿಗಳು ಮುಂಚೂಣಿಯಲ್ಲಿದ್ದರು. ಬಳ್ಳಾರಿ ರೆಡ್ಡಿಗಳು ಮತ್ತು ಜಗನ್ಮೋಹನ್ ರೆಡ್ಡಿಗೆ ನಡುವೆ ಇದ್ದ ರಾಜಕೀಯೇತರ ಸಂಬಂಧಕ್ಕೆ ರಾಜಶೇಖರ್ ರೆಡ್ಡಿ ನೀರು, ಅದಿರು ಹಾಕಿ ಪೋಷಿಸಿ ಬೆಳೆಸಿದ್ದರು ಹಾಗೂ ಅವರಿಬ್ಬರ ಸಂಬಂಧ ಹೆಮ್ಮರವಾಗಿ ಬೆಳೆದಿತ್ತು.

ತಂದೆಯ ಸಾವಿನ ನಂತರ ಉತ್ತರಾಧಿಕಾರಿ ಹುದ್ದೆಗಾಗಿ ಜನಾರ್ದನ ರೆಡ್ಡಿ ಕೂಡಾ ತಮ್ಮ ಚಪ್ಪಲಿ ಸವೆಸಿದ್ದರು. ಜನಾರ್ದನ ರೆಡ್ಡಿ ಸಿಬಿಐ ಬಂಧನಕ್ಕೆ ಒಳಾದ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿವೆ ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ದುಡ್ಡಿನ ಮುಂದೆ ಯಾವುದೂ ಲೆಕ್ಕಕ್ಕಿಲ್ಲ, ಹೀಗೆ ಹೋಗಿ ಹಾಗೆ ರೆಡ್ಡಿ ಜೈಲಿನಿಂದ ಬಿಡುಗಡೆಯಾಗಿ ಬರುತ್ತಾರೆ ಎನ್ನುವ ಲೆಕ್ಕಾಚಾರ ವರ್ಕ್ ಔಟ್ ಆಗದಿದ್ದಾಗ ಬಳ್ಳಾರಿ ರೆಡ್ಡಿಗಳು ರಾಜ್ಯ ರಾಜಕೀಯದಲ್ಲಿ ತೀವ್ರ ಹಿನ್ನಡೆ ಅನುಭವಿಸಿದರು. ಅಲ್ಲದೆ ಕ್ಯಾಬಿನೆಟ್ ಸ್ಥಾನ ಕೂಡಾ ಕೊಂಡಿಯಿಂದ ಕಳಚಿಕೊಂಡಿತು.

ಜನಾರ್ದನ ರೆಡ್ಡಿ ಮೇಲೆ ಸಿಬಿಐ ಕುಣಿಕೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಲೇ ಇತ್ತ ಬಿಜೆಪಿಯಿಂದ ಶ್ರೀರಾಮುಲು ಹೊರ ನಡೆದರು. ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಭರ್ಜರಿಯಾಗಿ ಗೆದ್ದರು. ಈ ಗೆಲುವಿನ ಹಿಂದೆ ಹಣ ಕೆಲಸ ಮಾಡಿತ್ತೋ ಅಥವಾ ಬಳ್ಳಾರಿ ಗಣಿಧಣಿಗಳಿಗೆ ಇನ್ನೂ ರಾಜಕೀಯದಲ್ಲಿ ಹಿಡಿತ ಇದೆಯೋ, ಚರ್ಚಾಸ್ಪದ ವಿಷಯ.

ರೆಡ್ಡಿಗಳಿಗೆ ಹೊಸ ಆಶಾಕಿರಣ : ತಮ್ಮ ಸ್ವಯಂಕೃತ ದಡ್ಡತನದ ಕೆಲಸದಿಂದ ಜನಾರ್ದನ ರೆಡ್ಡಿ ಸದ್ಯ ಜೈಲಿನಿಂದ ಹೊರ ಬರುವ ಸಾಧ್ಯತೆ ಕಮ್ಮಿ ಎನ್ನುವ ಲೆಕ್ಕಾಚಾರದ ನಡುವೆ, ಆಂಧ್ರ ಉಪಚುನಾವಣೆಯ ಫಲಿತಾಂಶ ಜನಾರ್ದನ ರೆಡ್ಡಿಗೆ ಹೊಸ ಆಶಾಕಿರಣ ಮೂಡಿಸಿದೆ ಎಂದರೂ ತಪ್ಪಾಗಲಾರದು.

ತಂದೆಯ ದುರ್ಮರಣ, ಜಗನ್ಮೋಹನ್ ಬಂಧನದ ಹಿನ್ನೆಲೆಯಲ್ಲಿ ಅನುಕಂಪದ ಅಲೆಯಲ್ಲಿ ಮಿಂದು ವೈಎಸ್ ಆರ್ ಕಾಂಗ್ರೆಸ್ ಮರು ಚುನಾವಣೆಯಲ್ಲಿ ಭರ್ಜರಿಯಾಗಿ ಒಪನಿಂಗ್ ಪಡೆದುಕೊಂಡಿದೆ. ಅಕ್ರಮ ಆಸ್ತಿ ಪ್ರಕರಣ ಸಂಬಂಧ ಜೈಲು ಸೇರಿದ್ದ ಜಗನ್ ಗೆ ಈ ಫಲಿತಾಂಶ ಆನೆ ಬಲ ತಂದಂತಾಗಿದೆ. ಚುನಾನವೆಗೆ ಕೆಲ ದಿನಗಳ ಮುನ್ನ ಜಗನ್ ಅನ್ನು ಬಂಧಿಸಿ ಅವರ ಪಕ್ಷವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ರೂಪಿಸಿದ ತಂತ್ರಗಾರಿಕೆ ಅವರಿಗೇ ಮುಳುವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಆದ ಮುಖಭಂಗದ ಜೊತೆ ತೆಲುಗುದೇಶಂ ಪಕ್ಷ ಹೇಳ ಹೆಸರಿಲ್ಲದೆ ಈ ಉಪಚುನಾವಣೆಯಲ್ಲಿ ಮಣ್ಣು ಮುಕ್ಕಿದ್ದು, ಮೆಗಾಸ್ಟಾರ್ ಚಿರಂಜೀವಿ ಅವರ ಚಾರಿಷ್ಮಾ ಯಾವುದೇ ರೀತಿಯಲ್ಲಿ ನಡೆಯದೆ ಇದ್ದದ್ದು, ಆಂಧ್ರ ರಾಜ್ಯ ರಾಜಕಾರಣದಲ್ಲಿ ಜಗನ್ ಹೊಸ ಶಕೆ ಬರೆಯಲು ಹುಮ್ಮಸ್ಸು ನೀಡಿದಂತಾಗಿದೆ.

ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಜಯಭೇರಿ, ಆಡಳಿತ ಕಾಂಗ್ರೆಸ್ ಪಕ್ಷದ ಒಳಗಿನ ಆಂತರಿಕ ಕಿತ್ತಾಟ, ಕೆಲ ಶಾಸಕರು ವೈ ಎಸ್ ಆರ್, ಕಾಂಗ್ರೆಸ್ ಎರಡೂ ಪಕ್ಷದ ದೋಣಿಯಲ್ಲಿ ಕಾಲಿಡುತ್ತಿರುವುದು ಈ ಎಲ್ಲಾ ಕಾರಣಗಳಿಂದ ಆಂಧ್ರದಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದ ಸ್ಥಿತಿ ಅಯೋಮಯವಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಇರುವುದು ಮೂರು ದಾರಿ. ಒಂದು ಕುದುರೆ ವ್ಯಾಪಾರ ಮಾಡಿ ಅಧಿಕಾರ ಉಳಿಸಿಕೊಳ್ಳುವುದು, ಸರಕಾರ ಹೋದರೆ ಹೋಗಲಿ ಎಂದು ವಿಧಾನಸಭೆ ವಿಸರ್ಜಿಸುವುದು ಮತ್ತು ಮೂರನೇ ಆಯ್ಕೆ ಜಗನ್ಮೋಹನ್ ರೆಡ್ಡಿಗೆ ಮತ್ತೆ ಮಣೆ ಹಾಕುವುದು.

ಇದರಲ್ಲಿ ಮೊದಲ ಆಯ್ಕೆಯಂತೆ ಕಾಂಗ್ರೆಸ್ ಮುನ್ನಡೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಯಾಕೆಂದರೆ ಜಗನ್ ಕುದುರೆಗಳನ್ನು ವ್ಯಾಪಾರ ಮಾಡಿ ಕೊಳ್ಳುವುದು ಕಾಂಗ್ರೆಸ್ಸಿಗೆ ಅಸಾಧ್ಯ. ಇನ್ನು ಎರಡನೇ ಆಯ್ಕೆ ಕೂಡಾ ಈಗಿನ ಮಟ್ಟಿಗೆ ಕಾಂಗ್ರೆಸ್ ಗೆ ಆಯ್ಕೆ ಮಾಡುವುದು ಡೌಟೇ. ಯಾಕೆಂದರೆ ಬಂದ ಅಧಿಕಾರವನ್ನು ಅಷ್ಟು ಸುಲಭವಾಗಿ ಯಾರು ತಾನೇ ಕೈಬಿಟ್ಟಾರು? ಹಾಗಿದ್ದರೆ ಅವರ ಆಯ್ಕೆ ಜಗನ್ ಆದರೂ ಆಗಬಹುದು.

ಒಂದು ವೇಳೆ ಹಾಗಿದ್ದಾಗ ಕಾಂಗ್ರೆಸ್ ಪಕ್ಷದ ಮುಂದಿನ ನಡೆ ಹೇಗಿರಬಹುದು ಎಂದು ಅವಲೋಕಿಸಿದಾಗ, ಸಿಬಿಐ ಮೇಲೆ ಕೇಂದ್ರ ಸರಕಾರದ ಕಂಟ್ರೋಲ್ ಇರುವುದರಿಂದ ಜಗನ್ ನಿರಪರಾಧಿಯನ್ನಾಗಿ ಮಾಡಿಸಿ ಅಥವಾ ಬೇಲ್ ಮೇಲೆ ಜೈಲಿನಿಂದ ಹೊರತರುವುದು. ಈಗ ತಾನೆ ಕಟ್ಟಿದ ವೈ ಎಸ್ ಆರ್ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನ ಮಾಡಿ, ಜಗನ್ ಅವರ ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿ ಪಟ್ಟ ಅವರಿಗೇ ನೀಡುವುದು.

ಒಂದು ವೇಳೆ ಈ ಎಲ್ಲಾ ರಾಜಕೀಯ ಲೆಕ್ಕಾಚಾರ ಜಗನ್ ಪರವಾಗಿ ನಡೆದರೆ, ಜಗನ್ ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸಿದರೆ, ತಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಜನಾರ್ದನ ರೆಡ್ಡಿಯವರನ್ನು ಅವರು ಕೈಬಿಡುತ್ತಾರೆಯೇ? ಸಿಬಿಐ ಜನಾರ್ದನ ರೆಡ್ಡಿ ಮೇಲಿನ ಹಿಡಿತವನ್ನು ಸಡಿಲಗೊಳಿಸಲು ಸಹಾಯ ಮಾಡುವುದಿಲ್ಲವೇ? ಮತ್ತೆ ಬಳ್ಳಾರಿಯಲ್ಲಿ ಕೋಟೆ ಕಟ್ಟಿ ಮೆರೆಯಲು ಜಗನ್ ರೆಡ್ಡಿಗಳ ಪರವಾಗಿ ನಿಲ್ಲುವುದಿಲ್ಲವೇ? ಇದಕ್ಕೆಲ್ಲಾ ಮುಂದಿನ ದಿನದಲ್ಲಿ ಉತ್ತರ ಸಿಕ್ಕಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಯಾಕೆಂದರೆ ರಾಜಕೀಯದಲ್ಲಿ ಯಾರಿಗೆ ಯಾರು ಶತ್ರುಗಳಲ್ಲಾ, ಮಿತ್ರರೂ ಅಲ್ಲ.

English summary
Who will bell Jagan Mohan Reddy in Andhra Pradesh? Jagan has proved that he is reckoning force in Andhra Pradesh, whether he is in jail or on bail. What are the options before Congress to retain the govt? Analysis by Balaraj Tantri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X