ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ ಚಿರುಗೆ ಮಣ್ಣುಮುಕ್ಕಿಸಿದ ಜೈಲುಹಕ್ಕಿ ಜಗನ್

By Srinath
|
Google Oneindia Kannada News

ಹೈದರಾಬಾದ್, ಜೂನ್ 15: ನಿರೀಕ್ಷೆಯಂತೆ ಜೂನ್ 12ರಂದು ಆಂಧ್ರದಲ್ಲಿ ನಡೆದ ಉಪಚುನಾವಣೆಗಳಲ್ಲಿ ಜಗನ್ ಸಾರಥ್ಯದಲ್ಲಿ YSR Congress 'ವಿಜಯ' ಸಾಧಿಸಿದೆ. ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಳ್ಳುವುದರ ಜತೆಗೆ ಒಟ್ಟು 15 ವಿಧಾನಸಭಾ ಕ್ಷೇತ್ರಗಳಲ್ಲಿ ಜಗನ್ ಜಯ ಸಾಧಿಸಿದ್ದಾರೆ. ಇನ್ನು, ಕಾಂಗ್ರೆಸ್ 2ರಲ್ಲಿ ಮತ್ತು ಟಿಆರ್ ಎಸ್ ಒಂದು ಸ್ಥಾನ ಗೆದ್ದುಕೊಂಡಿದೆ.

ತಿರುಪತಿ ಕ್ಷೇತ್ರದಿಂದ ಕುತೂಹಲಕರ ಫಲಿತಾಂಶ ಹೊರಬಿದ್ದಿದೆ. ನಿನ್ನೆಯಷ್ಟೇ ಮಗನ ಮದುವೆ ಮಾಡಿ, ದಣಿವಾರಿಸಿಕೊಳ್ಳುತ್ತಿರುವ ಹಿರಿಯ ನಟ ಕಮ್ ಬಾಲ ರಾಜಕಾರಣಿ ಚಿರಂಜೀವಿಗೆ ಜಗನ್ ಸರಿಯಾಗಿ ಮಣ್ಣು ಮುಕ್ಕಿಸಿದ್ದಾನೆ. ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿಯ ಸ್ವಕ್ಷೇತ್ರವೂ ಆದ ಮತ್ತು ಪ್ರಜಾರಾಜ್ಯಂ ಪಕ್ಷದ ತಾರಾ ನಾಯಕ ಚಿರಂಜೀವಿ ಈ ಹಿಂದೆ ಜಯಭೇರಿ ಬಾರಿಸಿದ್ದ ತಿರುಪತಿ ಕ್ಷೇತ್ರವನ್ನು ಜಗನ್ ನೇತೃತ್ವದ YSR Congress ಅಭ್ಯರ್ಥಿ ಅನಾಯಾಸವಾಗಿ ಗೆದ್ದುಕೊಂಡಿದ್ದಾರೆ.

ವೈಎಸ್ ರಾಶೇಖರ ರೆಡ್ಡಿಯ ಕಟ್ಟಾ ಬೆಂಬಲಿಗರಾದ ಭೂಮನ ಕರುಣಾಕರ ರೆಡ್ಡಿ ಟಿಟಿಡಿ ಮಂಡಳಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಿರುಪತಿ ನಗರಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಜನಮನ್ನಣೆ ಗಳಿಸಿದ್ದರು. ಕುತೂಹಲದ ಸಂಗತಿಯೆಂದರೆ ಕಳೆದ ಬಾರಿ ಚಿರಂಜೀವಿಗೆ ಭೂಮನ ಕರುಣಾಕರ ರೆಡ್ಡಿ ಸೋತಿದ್ದರು.

ಟಿಎಸ್ಸಾರ್ ಗೆ ಭಾರಿ ಮುಖಭಂಗ: ಹಾಗೆಯೇ, ನೆಲ್ಲೂರು ಲೋಕಸಭಾ ಕ್ಷೇತ್ರವನ್ನು 2009ರಲ್ಲಿ (ಕಾಂಗ್ರೆಸ್ ವತಿಯಿಂದ) ಗೆದ್ದುಕೊಂಡಿದ್ದ YSR Congress ಅಭ್ಯರ್ಥಿ ಮಾಕೆಪಾಟಿ ರಾಜಮೋಹನ ರೆಡ್ಡಿ ಈ ಬಾರಿಯೂ ಸುಲಭ ಜಯಗಳಿಸಿದ್ದಾರೆ. ಈ ಕ್ಷೇತ್ರವು ಹೇಳಿಕೇಳಿ ಆಂಧ್ರದ ಪಟ್ಟಭದ್ರ ಕ್ಷೇತ್ರ. ಅದರಲ್ಲೂ ಈ ಬಾರಿ ಕಾಂಗ್ರೆಸ್ ಪರ ನಿಂತಿದ್ದ ಟಿ ಸುಬ್ಬಿರಾಮರೆಡ್ಡಿ ಎಂಬ ಅರಿಭಯಂಕರ ಸಿನಿಮಾ ಪ್ರಜೆ ಭಾರಿ ಪ್ರಚಾರ ಗಿಟ್ಟಿಸಿದ್ದರು. ಅದರಿಂದ ಜತ ತನ್ನದೇ ಎಂದೂ ಎಣಿಸಿದ್ದರು. ಆದರೆ ಪಾಪ! ಟಿಎಸ್ಸಾರ್ ಸೋತು ಸುಣ್ಣವಾಗಿದ್ದಾರೆ.

ಗೋದಾವರಿ ತೀರದಲ್ಲಿ ಜಗನ್ ಗೆ ಮಿಶ್ರ ಫಲ:
ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ (ನರಸಾಪುರಂ): ಕಾಂಗ್ರೆಸ್ ಜಯಭೇರಿ- YSR Congress ಅಭ್ಯರ್ಥಿ ಹೀನಾಯ ಸೋಲು ಕಂಡಿದ್ದಾರೆ. YSR Congress ಅಭ್ಯರ್ಥಿ ಮುದುನೂರಿ ಪ್ರಸಾದ್ ರಾಜು (39) 2009ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದುಬಂದಿದ್ದರು. ಕ್ಷತ್ರಿಯ ಸಮುದಾಯಕ್ಕೆ ಸೇರಿದ ಮುದುನೂರಿ ಪ್ರಸಾದ್ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರ ಕಟ್ಟಾಳು. ಆದರೆ 2004ಲ್ಲಿ ಇವರು ಕಾಂಗ್ರೆಸ್ ಪಕ್ಷದಿಂದ ನಿಂತು ಟಿಡಿಪಿ ಅಭ್ಯರ್ಥಿ ಕೊತ್ತಪಲ್ಲಿ ಸುಬ್ಬರಾಯುಡು ವಿರುದ್ಧ ಸೋತ ದಾಖಲೆ ಹೊಂದಿದ್ದಾರೆ. ಇಂತಿಪ್ಪ ಮುದುನೂರಿ ಪ್ರಸಾದ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಸೋತಿರುವುದು ಜಗನ್ ಗೆ ಅರಿಗಿಸಿಕೊಳ್ಳುವುದು ಕಷ್ಟವಾಗಿದೆ.

ಪೂರ್ವ ಗೋದಾವರಿ ಜಿಲ್ಲೆಯಲ್ಲಿ (ರಾಮಚಂದ್ರಾಪುರಂ) : ಕಾಂಗ್ರೆಸ್ ಜಯಭೇರಿ- 62 ವರ್ಷದ ಪಿ. ಸುಭಾಷ್ ಚಂದ್ರ ಬೋಸ್ ಈ ಕ್ಷೇತ್ರದಲ್ಲಿ ಆರು ಬಾರಿ ನಿಂತಿದ್ದು, ನಾಲ್ಕು ಬಾರಿ ಗೆದ್ದಿದ್ದರು. ಆದರೆ ಈಗ ಅವರ ಸೋಲಿನ ಲೆಕ್ಕ ಮೂರಕ್ಕೇರಿದೆ. ವೈಎಸ್ ರಾಜಶೇಖರ ರೆಡ್ಡಿ ಮತ್ತು ಕೆ ರೋಸಯ್ಯ ಸಂಪುಟದಲ್ಲಿ ಸುಭಾಷ್ ಚಂದ್ರ ಬೋಸ್ ಸಚಿವರೂ ಆಗಿದ್ದರು.

ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ (ಪೋಲಾವರಂ): YSR Congressಗೆ ವಿಜಯ- ತಲ್ಲಂ ಬಾಲರಾಜು (37) 2004 ಮತ್ತು 2009ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟಿನಿಂದ ಗೆದ್ದಿದ್ದರು. ರಾಜಕೀಯಕ್ಕೆ ಧುಮುಕುವ ಮುನ್ನ ಆತ ಜಿಲ್ಲಾ ಸೆಂಟ್ರಲ್ ಕೋ ಆಪರಟೀವ್ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದರು. ಈ ಬಾರಿಯೂ ತಲ್ಲಂ ಬಾಲರಾಜುದೇ ವಿಜಯದ ನಗೆ.

ಪೂರ್ವ ಗೋದಾವರಿ ಜಿಲ್ಲೆಯಲ್ಲಿ (ಪ್ರತಿಪಾಡು): YSR Congressಗೆ ವಿಜಯ. ಮೇಕತೋಟಿ ಸುಚರಿತ (35) ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಕಾಂಗ್ರೆಸ್ ವತಿಯಿಂದ 2009ರಲ್ಲಿ ಜಯಶೀಲರಾಗಿದ್ದರು. ಈ ಬಾರಿ YSR Congressನಿಂದ ಕಣಕ್ಕೆ ಇಳಿದ ಸುಚರಿತ ಅಮೋಘ ಜಯ ಸಾಧಿಸಿದ್ದಾರೆ.

English summary
Andhra Pradesh by-polls results YSR Congress sweeps. A brief analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X