ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದನ ವಿರುದ್ಧ ಸಿಡಿದೆದ್ದ ಸ್ವಾಮೀಜಿಗಳು

By Prasad
|
Google Oneindia Kannada News

Karnataka Seers vent ire against Nithyananda
ಬೆಂಗಳೂರು, ಜೂ. 15 : ಕಾವಿ ತೊಟ್ಟು ಮಾಡಬಾರದ ಕೆಲಸವನ್ನೆಲ್ಲ ಮಾಡಿದ ಆರೋಪ ಹೊತ್ತು, ಕರ್ನಾಟಕದ ಸಮಸ್ತ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಡದಿ ಧ್ಯಾನಪೀಠಂ ಆಶ್ರಮದ ಸ್ವಾಮಿ ನಿತ್ಯಾನಂದನ ವಿರುದ್ಧ ಈಗ ರಾಜ್ಯದ ಅನೇಕ ಮಠಾಧಿಪತಿಗಳು ತಿರುಗಿ ನಿಂತಿದ್ದಾರೆ. ಸನ್ಯಾಸ ಧರ್ಮಕ್ಕೆ ದ್ರೋಹ ಬಗೆದಿರುವ ಇಂಥ ಸ್ವಾಮಿ ಕರ್ನಾಟಕದಲ್ಲಿ ಇರಲೇಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿ, ಆದಿಚುಂಚನಗಿರಿ ಮಠಾಧಿಪತಿ ಶ್ರೀ ಬಾಲಗಂಗಾಧರ ಸ್ವಾಮೀಜಿ, ತರಳಬಾಳು ಶ್ರೀಗಳಾದ ಡಾ. ಶಿವಮೂರ್ತಿ ಸ್ವಾಮೀಜಿ ಮುಂತಾದವರು ನಿತ್ಯಾನಂದನ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.

ಇನ್ನು ಕಾಳಿ ಮಠದ ಋಷಿಕುಮಾರ ಸ್ವಾಮೀಜಿಯಂತು ಸ್ವಾಮಿ ನಿತ್ಯಾನಂದನ ವಿರುದ್ಧ ಮಹಾನ್ ಯುದ್ಧಯನ್ನೇ ಸಾರಿದ್ದಾರೆ. ಋಷಿಕುಮಾರ ಸ್ವಾಮಿಗಳು ಕನ್ನಡ ಟಿವಿ ಚಾನಲ್ಲಿನಿಂದ ಚಾನಲ್ಲಿಗೆ ಜಿಗಿದಾಡುತ್ತ, ನಿತ್ಯಾನಂದನ ವಿರುದ್ಧ ಕರ್ನಾಟಕದ ಜನತೆಯನ್ನು ಬಡಿದೆಬ್ಬಿಸುತ್ತಿದ್ದಾರೆ. ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಕೂಡ ನಿತ್ಯಾನಂದ ವಿರುದ್ಧದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೆಲ ಸ್ವಾಮೀಜಿಗಳ ಹೇಳಿಕೆಗಳು ಹೀಗಿವೆ

ಪೇಜಾವರ ಶ್ರೀ : ಸನ್ಯಾಸ ಧರ್ಮ ಸ್ವೀಕರಿಸಿದ ಮೇಲೆ ಹೀಗೆಲ್ಲ ಅಸಹ್ಯವಾಗಿ ಆಡಬಾರದು. ನಿತ್ಯಾನಂದ ನಿಜವಾಗಿ ಸನ್ಯಾಸಿಯೇ ಆಗಿದ್ದರೆ ಜನ ಮೆಚ್ಚುವಂತೆ ಕೆಲಸ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ತಗ್ಗಿಬಗ್ಗಿ ಕೆಲಸ ಮಾಡಬೇಕು. ಸ್ವಾಮಿ ಪಟ್ಟಕ್ಕೆ ಧಕ್ಕೆ ತರುವಂತಹ ಕೆಲಸಕಾರ್ಯ ಮಾಡಬಾರದು.

ಕೋಡಿಮಠ ಶ್ರೀ : ಕಾಲಧರ್ಮ ಪರಮಧರ್ಮ. ಕಾಲಧರ್ಮವೇ ಸುಪ್ರೀಂ. ಕಾಲವೇ ಎಲ್ಲವನ್ನೂ ತಿದ್ದುತ್ತದೆ, ತಪ್ಪಿದರೆ ಬಗ್ಗಿಸುತ್ತದೆ. ಸನ್ಯಾಸಿಗಳಿಗೆ ಅಹಂಕಾರ ಸಲ್ಲದು. ಕಾನೂನು ವಿರುದ್ಧವಾಗಿ ಹೋಗುವುದನ್ನು ಯಾರೂ ಒಪ್ಪುವುದಿಲ್ಲ. ನಿತ್ಯಾನಂದನಂಥವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಆತ ಸನ್ಯಾಸಿಯೂ ಅಲ್ಲ, ಸ್ವಾಮೀಜಿಯೂ ಅಲ್ಲ.

ಆದಿಚುಂಚನಗಿರಿ ಶ್ರೀ : ತಾನೇ ದೇವರು ಎನ್ನುವುದು, ದೇವರು ಮಾಡುವ ಕೆಲಸವನ್ನು ತಾನೇ ಮಾಡುತ್ತೇನೆ ಎಂದು ಅಹಂಕಾರದಿಂದ ನುಡಿಯುವುದು ಯಾವುದೇ ಸ್ವಾಮಿಗೆ ಶೋಭೆ ತರುವುದಿಲ್ಲ. ನಿತ್ಯಾನಂದನಿಗೆ ಯಾವುದೂ ಲೆಕ್ಕಕ್ಕಿಲ್ಲ. ಜನ ಸಿಡಿದು ಎದ್ದುಬಿಟ್ಟರೆ ಯಾವು ಸ್ವಾಮಿಯೂ ನಿಲ್ಲುವುದಿಲ್ಲ. ಅನಗತ್ಯ ಆವಾಂತರಗಳನ್ನು ನಿತ್ಯಾನಂದ ಮಾಡಬಾರದು. ಆಳುವ ಶಕ್ತಿಯಿದ್ದರೆ ಆಳಲಿ, ಇಲ್ಲದಿದ್ದರೆ ತೊಲಗಲಿ. ಜನರಿಗೆ ಆಕ್ರೋಶ ಬರುವ ಹಾಗೆ ವರ್ತಿಸಬಾರದು.

ಇಂಥವ ಸ್ವಾಮೀಜಿ ಎಂದು ಕರೆಸಿಕೊಳ್ಳಲು ನಾಲಾಯಕ್, ಕರ್ನಾಟಕದ ಧಾರ್ಮಿಕ ಪರಂಪರೆಗೆ ನಿತ್ಯಾನಂದ ಕಪ್ಪುಚುಕ್ಕೆ, ಸ್ವಾಮಿ ಪದಕ್ಕೆ ಕಳಂಕ ತರುವ ಇಂಥ ವ್ಯಕ್ತಿ ರಾಜ್ಯದಲ್ಲಿ ಇರಬಾರದು, ಕನ್ನಡ ನಾಡು ನುಡಿ ಜನರ ನಂಬಿಕೆಗೆ, ವಿಶ್ವಾಸಕ್ಕೆ ನಿತ್ಯಾನಂದ ದ್ರೋಹ ಬಗೆದಿದ್ದಾನೆ ಎಂದು ಕೆಲ ಸ್ವಾಮೀಜಿಗಳು ನಿತ್ಯಾನಂದನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ : ನಿತ್ಯಾನಂದನ ವಿರುದ್ಧ ಶನಿವಾರ, ಜೂ.16ರಂದು ಬೆಳಿಗ್ಗೆ 11 ಗಂಟೆಗೆ ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ನಿತ್ಯಾನಂದನನ್ನು ಕರ್ನಾಟಕದಿಂದ ಓಡಿಸಬೇಕೆಂದು ಅಲ್ಲಿ ಕಾಳಿ ಮಠದ ಋಷಿಕುಮಾರ ಸ್ವಾಮಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ಅನೇಕ ಸಾಫ್ಟ್‌ವೇರ್ ಇಂಜಿನಿಯರುಗಳು ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸುವ ಸಾಧ್ಯತೆಯಿದೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಉಪವಾಸ ಕುಳಿತಿದ್ದಾಗ ನೀಡಿದಂಥ ಬೆಂಬಲವನ್ನು ನಿತ್ಯಾನಂದನ ವಿರುದ್ಧದ ಪ್ರತಿಭಟನೆಗೂ ಕನ್ನಡಿಗರು ನೀಡಬೇಕು ಎಂದು ಆಯೋಜಕರು ಕೋರಿದ್ದಾರೆ.

English summary
Karnataka seers and religious leaders are unitedly venting ire against Swamy Nithyananda for his illegal and illicit activities in Karnataka. A protest has been organized at Freedom Park in Bangalore on June 16, 2012. Rushi Kumar swami will be sitting on fast-unto-death against Nithyananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X