• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಲ್ಲದ ನಿತ್ಯಾನಂದ ರಗಳೆ : ಗುರುವಾರದ ರಿಪೋರ್ಟ್

By Prasad
|

ರಾಮನಗರ, ಜೂ. 14 : ಬಂಧನದ ಬೇಡಿ ಕಳಚಿ ಇನ್ನೇನು ಸ್ವತಂತ್ರ ಹಕ್ಕಿಯಾದೆ, 'ಆಲ್ ಈಸ್ ವೆಲ್' ಎಂದು ನಿತ್ಯಾನಂದ ಗಹಗಹಿಸಿ ನಗುವ ಸಂದರ್ಭದಲ್ಲಿಯೇ ಮತ್ತೊಂದು ಕಂಟಕ ಸ್ವಯಂಘೋಷಿತ ದೇವಮಾನವನಿಗೆ ಎದುರಾಗಿದೆ. ಬಲ್ಲ ಮೂಲಗಳ ಪ್ರಕಾರ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 107 ಮತ್ತು 151ರ ಅಡಿಯಲ್ಲಿ ಮತ್ತೊಂದು ಪ್ರಕರಣ ರಾಮನಗರ ಪೊಲೀಸರು ದಾಖಲಿಸಿದ್ದಾರೆ.

ಜನರನ್ನು ಕೆಣಕಿ ದೊಂಬಿ ಎಬ್ಬಿಸಿ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣನಾಗುವ ಸಂಭವನೀಯತೆ ಇರುವುದರಿಂದ ನಿತ್ಯಾನಂದನ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 107ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ, ಸೆಕ್ಷನ್ 151ರ ಅಡಿಯಲ್ಲಿ ಬಂಧಿಸುವ ಸಾಧ್ಯತೆಯಿದೆ. ಇಂತಹ ಸಾಧ್ಯತೆ ಇದ್ದಾಗ ಆರೋಪಿಯನ್ನು ವಾರಂಟ್ ಇಲ್ಲದೆಯೂ ಬಂಧಿಸಬಹುದಾಗಿದೆ. ಆತನನ್ನು ಗುರುವಾರ ಸಂಜೆ ರಾಮನಗರ ಕಂದಾಯ ಭವನದಲ್ಲಿರುವ ಡಿಸಿ-ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಎದುರಿಗೆ ಹಾಜರುಪಡಿಸಲಾಗುತ್ತಿದೆ.

ಈ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 107ರ ಪ್ರಕಾರ, ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಎದಿರು ಹಾಜರಾಗಿ ಮುಂದೆ 1 ವರ್ಷಗಳ ಕಾಲ ಶಾಂತಿ ಭಂಗ ಮಾಡಲು ಯತ್ನಿಸುವುದಿಲ್ಲ, ಜನರನ್ನು ಪ್ರಚೋದಿಸುವುದಿಲ್ಲ ಎಂದು ಬಾಂಡ್ ಬರೆದು ಕೊಡಬೇಕಾಗುತ್ತದೆ.

ಇದೀಗ ಬಂದ ಸುದ್ದಿ : ಸ್ವಾಮಿ ನಿತ್ಯಾನಂದನನ್ನು ರಾಮನಗರ ಜಿಲ್ಲಾಧಿಕಾರಿ ಶ್ರೀರಾಮ ರೆಡ್ಡಿ ಅವರು 1 ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಾಂತಿ ಭಂಗಕ್ಕೆ ನಿತ್ಯಾನಂದ ಯತ್ನಿಸಬಹುದು ಎಂದು ಆರೋಪಿಸಿ ಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮತ್ತು ನಿತ್ಯಾನಂದ ಪರ ವಕೀಲರ ವಿಚಾರಣೆಯನ್ನು ಆಲಿಸಿದ ನಂತರ ನಿತ್ಯಾನಂದನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನಿತ್ಯಾನಂದನನ್ನು ಈಗ ಮೈಸೂರಿನ ಜೈಲಿಗೆ ಕರೆದುಕೊಂಡು ಹೋಗಲಾಗುತ್ತಿದೆ.

ಪ್ರತೀಕಾರಕ್ಕೆ ನಿತ್ಯಾನಂದ ಸಜ್ಜು : ಸಲ್ಲದ ಕಾರಣಗಳಿಂದಾಗಿ ನಿತ್ಯಾನಂದನ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಇದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ. ಮಾಧ್ಯಮದವರೇ ಆಗಲಿ, ಕನ್ನಡಪರ ಸಂಘಟನೆಗಳೇ ಆಗಲಿ, ಸಾರ್ವಜನಿಕರೇ ಆಗಲಿ ಅವರ ವಿರುದ್ಧ ಕಾನೂನು ಪ್ರಕಾರ ಯುದ್ಧ ಹೂಡುವುದಾಗಿ ನಿತ್ಯಾನಂದನ ವಕೀಲರು ಹೇಳಿದ್ದಾರೆ. ಈಗಾಗಲೆ, ಬಿಡದಿ ಆಶ್ರಮಕ್ಕೆ ಬೀಗ ಜಡಿದು ಭಾರೀ ಪ್ರಮಾಣದಲ್ಲಿ ನಷ್ಟಕ್ಕೆ ಕಾರಣರಾಗಿದ್ದಾರೆಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ವಿರುದ್ಧ ನಿತ್ಯಾನಂದ ರಿಟ್ ಅರ್ಜಿ ಸಲ್ಲಿಸಿ, 10 ಕೋಟಿ ರು. ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾನೆ.

ಪೊಲೀಸರಿಂದ ಕಪಾಳಮೋಕ್ಷ : ವಿವಾದಿತ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನಿಗೆ ಷರತ್ತಿನ ಮೇಲೆ ಜಾಮೀನು ನೀಡಿದ್ದೇ ತಡ ರಾಮನಗರ ಜೆಎಮ್ಎಫ್‌ಸಿ ನ್ಯಾಯಾಲಯದ ಹೊರಗಿನ ಆವರಣ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ. ಆದರೆ, ನಿತ್ಯಾನಂದ ಮಾತ್ರ ಪೊಲೀಸರ ಏಳು ಸುತ್ತಿನ ಕೋಟೆಯಂಥ ರಕ್ಷಣೆಯಲ್ಲಿ ರಾಮನಗರದಿಂದ ಪಾರಾಗಿದ್ದಾನೆ.

ಸಾಲುಸಾಲು ಪೊಲೀಸ್ ವಾಹನಗಳ ರಕ್ಷಣೆಯಲ್ಲಿ ನಿತ್ಯಾನಂದನನ್ನು ರಾಮನಗರ ಕೋರ್ಟಿನಿಂದ ಆಚೆ ಕರೆದುಕೊಂಡು ಹೋಗುತ್ತಿದ್ದಾಗ ಕೆಲ ಸಾರ್ವಜನಿಕರು ಕಲ್ಲು ತೂರಲು ಪ್ರಾರಂಭಿಸಿದ್ದಾರೆ. ಸಾರ್ವಜನಿಕರನ್ನು ಚೆದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಮಾಧ್ಯಮದವರನ್ನು ಕೂಡ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗೆ ರಾಮನಗರ ಕೋರ್ಟ್ ಆವರಣ ಸಾಕ್ಷಿಯಾಗಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಕೆಲ ಜನರನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ, ಕೆಲವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಮತ್ತು ಕೆಲವರು ಪೊಲೀಸರ ಬೂಟುಗಾಲಿನ ರುಚಿ ನೋಡಿದ್ದಾರೆ. ಪೊಲೀಸರು ಸಾರ್ವಜನಿಕರ ಪರವಾಗಿ ಇದ್ದಾರೋ ಅಥವಾ ಅತ್ಯಾಚಾರ, ಮೋಸ, ವಂಚನೆ ಆರೋಪಕ್ಕೊಳಗಾಗಿರುವ ವಿವಾದಾತ್ಮಕ ಸ್ವಾಮಿ ನಿತ್ಯಾನಂದನ ಪರವಾಗಿ ಇದ್ದಾರೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಈ ನಡುವೆ, ನಿತ್ಯಾನಂದನನ್ನು ಕರೆದುಕೊಂಡು ಹೋಗುತ್ತಿದ್ದ ವಾಹನವನ್ನು ಮಾಧ್ಯಮದವರು ಹಿಂಬಾಲಿಸಲು ಯತ್ನಿಸಿದಾಗ ಕೂಡ ಮಾಧ್ಯಮದವರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಪತ್ರಕರ್ತರನ್ನು ಕೂಡ ಪೊಲೀಸರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇದನ್ನು ವಿರೋಧಿಸಿದ ಓರ್ವನ ಮೇಲೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ನಂತರ ಸ್ಥಳದಲ್ಲಿ ತ್ವೇಷಮಯ ವಾತಾವರಣ ಸೃಷ್ಟಿಯಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸ್ವಾಮಿ ನಿತ್ಯಾನಂದ ಸುದ್ದಿಗಳುView All

English summary
Another case filed against Nithyananda by Ramnagar police with apprehension that he may disturb public tranquility or peace. He will be produced before Executive Magistrate in Ramnagar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more