ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಹಾಗಿದ್ರೆ ನಿತ್ಯಾ ಎಲ್ಲಿ?

ರಾಮನಗರ ಜಿಲ್ಲಾಧಿಕಾರಿ ಶ್ರೀರಾಮ್ ರೆಡ್ಡಿ ಮತ್ತು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅನುಪಮ್ ಅಗರವಾಲ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಒಂದು ಕಡೆ ಆಶ್ರಮವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ನಿತ್ಯಾನಂದನ ವಿಚಾರಣೆಗೆ ಯತ್ನ ನಡೆದಿದ್ದರೆ, ಆಶ್ರಮದಲ್ಲಿ ಬೀಡುಬಿಟ್ಟಿದ್ದ ನಿತ್ಯಾನಂದನ ಶಿಷ್ಯಂದಿರು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡುತ್ತಿದ್ದಾರೆ.
ನಿತ್ಯಾನಂದನಿಂದಾಗಿ ತಮ್ಮ ಮಕ್ಕಳಿಂದ ದೂರವಾಗಿದ್ದ ಅನೇಕ ಪಾಲಕರು ಕೂಡ ಆಶ್ರಮಕ್ಕೆ ಧಾವಿಸಿ ಮಕ್ಕಳು ಇಲ್ಲಿದ್ದಿರಬಹುದೆ ಎಂದು ಗೇಟಿನ ಹೊರಗೆ ಕಾಯುತ್ತಿದ್ದಾರೆ. ಆದರೆ, ಹಲವಾರು ಆಶ್ರಮವಾಸಿಗಳು ಸೋಮವಾರವೇ ಜಾಗ ಖಾಲಿ ಮಾಡಿರುವುದರಿಂದ ಅನ್ಯ ಮಾರ್ಗವಿಲ್ಲದೆ ವಾಪಸ್ ಆಗುತ್ತಿದ್ದಾರೆ ಪಾಲಕರು. ನಿತ್ಯಾನಂದ ಆಶ್ರಮದಲ್ಲಿದ್ದವರು ಹೆಚ್ಚಾಗಿ ತಮಿಳುನಾಡಿನವರೆ.
ಪೊಲೀಸರು ಮಾತ್ರ ಯಾರನ್ನೂ ಆಶ್ರಮದ ಒಳಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ನಿತ್ಯಾನಂದ ಎಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಕೂಡ ಇನ್ನೂ ಪೊಲೀಸರಿಗೆ ದಕ್ಕಿಲ್ಲ. ಕೆಲವರ ಪ್ರಕಾರ, ನಿತ್ಯಾನಂದ ಇನ್ನೂ ಬಿಡದಿ ಆಶ್ರಮದಲ್ಲಿಯೇ ಇದ್ದಾನೆ ಎಂಬ ಗುಮಾನಿಯಿದೆ. ಇಲ್ಲ, ಅವನು ಮಧುರೈಗೆ ಪರಾರಿಯಾಗಿದ್ದಾನೆ ಎಂದು ಕೂಡ ಹೇಳಲಾಗುತ್ತಿದೆ. ರಾಮನಗರದ ಪೊಲೀಸರ ಒಂದು ತಂಡ ಮಧುರೈಗೆ ಧಾವಿಸಿದೆ.
ಈ ನಡುವೆ, ನಿತ್ಯಾನಂದ ಹೊಸದಾಗಿ ಅಧಿಪತಿಯಾಗಿ ನೇಮಕವಾಗಿರುವ ಮಧುರೈನ ಅಧೀನಂ ಪೀಠಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಧೀನಂ ಪೀಠಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿರುವುದು ಇದೇ ಮೊದಲ ಬಾರಿಗೆ. ನಿಷೇಧ ಹೇರಿದ್ದನ್ನು ಸಾರ್ವಜನಿಕರು ವಿರೋಧಿಸುತ್ತಿದ್ದಾರೆ.
ತಮಿಳುನಾಡಿನಲ್ಲಿ ಕೂಡ ನಿತ್ಯಾನಂದನ ಮೇಲೆ ಪೊಲೀಸರು ಕ್ರಮ ಜರುಗಿಸುವ ಸಾಧ್ಯತೆಗಳು ಇರುವುದರಿಂದ ಅಧೀನಂ ಪೀಠದಲ್ಲಿ ಕೂಡ ನಿತ್ಯಾನಂದದ ನಿಷ್ಯಂದಿರು ಪುಂಡಾಟಿಕೆ ಆರಂಭಿಸಿದ್ದಾರೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಅನೇಕ ದಾಖಲೆಗಳಿಗೆ ಈಗಾಗಲೆ ಬೆಂಕಿ ಹಚ್ಚಲಾಗಿದೆ. ಇದೆಲ್ಲ ಹಿನ್ನೆಲೆಯಲ್ಲಿ ನಿತ್ಯಾನಂದ ಭಾರತವನ್ನೇ ಬಿಟ್ಟು ವಿದೇಶಕ್ಕೆ ತೆರಳುವ ಸಾಧ್ಯತೆಯನ್ನೂ ಪೊಲೀಸರು ತಳ್ಳಿಹಾಕಿಲ್ಲ.
ನಿತ್ಯಾ ಮತ್ತು ರಂಜಿತಾಗೆ ನೋಟೀಸ್ : ತಮಿಳುನಾಡಿನ ಆಶ್ರಮದಲ್ಲಿ ನಿತ್ಯಾನಂದ ಅನೇಕ ಮಹಿಳೆಯರೊಡನೆ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟಿನಲ್ಲಿ ಪಟ್ಟಾಳಿ ಮಕ್ಕಳ ಕಚ್ಚಿ ಪಕ್ಷದ ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಿರುವ ಹೈಕೋರ್ಟ್ ನಿತ್ಯಾನಂದ ಮತ್ತು ನಟಿ ರಂಜಿತಾಗೆ ನೋಟೀಸ್ ಜಾರಿ ಮಾಡಿದೆ.












Click it and Unblock the Notifications