ಬಿಎಸ್‌ವೈ, ಮೋದಿ ಗೈರು; ಜೋಷಿ ರಾಜೀನಾಮೆ

ಪ್ರಮುಖ ನಾಯಕರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಪಾಲ್ಗೊಳ್ಳಲು ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಪಟಾಲಂನೊಂದಿಗೆ ಇದೀಗತಾನೆ ಮುಂಬೈ ವಿಮಾನ ಹತ್ತಿದ್ದಾರೆ. ಈ ಮಧ್ಯೆ, ನಿತಿನ್ ಗಡ್ಕರಿ ಅವರಿಗೆ ಎರಡನೆಯ ಅವಧಿಗೆ ರಾಷ್ಟ್ರಾಧ್ಯಕ್ಷ ಪಟ್ಟಾಭಿಷೇಕ ಕಾರ್ಯವೂ ನೆರವೇರಲಿದೆ.
ಜೋಷಿ ರಾಜೀನಾಮೆ ಫ್ಯಾಕ್ಸ್: ನನಗೆ ರಾಜ್ಯದ ಪಕ್ಷಾಧ್ಯಕ್ಷ ಸ್ಥಾನ ನೀಡಿಲ್ಲ ಎಂಬ ಕೊರಗಿನಿಂದ ಸನ್ಮಾನ್ಯ ಯಡಿಯೂರಪ್ಪ ಅವರು ಇದೇ ಮೊದಲ ಬಾರಿಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುತ್ತಿಲ್ಲ. ಇನ್ನು, ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನ ನೀಡಿಲ್ಲ ಎಂದು ನಮೋ ವಿಮುಖಗೊಂಡಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಮೋದಿ ಪಾಲ್ಗೊಂಡಿರಲಿಲ್ಲ. ಉತ್ತರಪ್ರದೇಶದ ಚುನಾವಣಾ ಪ್ರಚಾರ ಕಾರ್ಯಕ್ಕೆ ತಮ್ಮ ಬದ್ಧವೈರಿ ಸಂಜಯ್ ಜೋಶಿ ಅವರನ್ನು ನೇಮಿಸಿದ್ದರಿಂದ ಕಿರಿಕಿರಿಗೊಂಡ ಮೋದಿ ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ತಮಗೆ ಮಗ್ಗುಲಮುಳ್ಳಾಗಿದ್ದ ಸಂಜಯ್ ಜೋಷಿ ವಿರುದ್ಧ ಮೋದಿ ಬುಸುಗುಡುತ್ತಲೇ ಇದ್ದರು. ತಾಜಾ ವರದಿಯ ಪ್ರಕಾರ ಜೋಷಿ ಅವರು ಪಕ್ಷದ ಎಲ್ಲ ಸ್ಥಾನಗಳಿಗೂ ಗುಡ್ ಬೈ ಹೇಳಿದ್ದು, ರಾಜೀನಾಮೆ ಪತ್ರವನ್ನು ಪಕ್ಷಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ದಿಢೀರನೆ ಫ್ಯಾಕ್ಸ್ ಮಾಡಿದ್ದಾರೆ. So, ಮೋದಿ ಇನ್ನಾದರೂ ಸಭೆಯಲ್ಲಿ ಭಾಗವಹಿಸುತ್ತಾರಾ ಎಂಬುದು ಕುತೂಹಲದ ಸಂಗತಿಯಾಗಿದೆ.
ಇದೇ ವೇಳೆ, ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಇಂದಿನಿಂದ (ಗುರುವಾರ) ಮುಂಬೈನಲ್ಲಿ ಆರಂಭವಾಗಲಿದ್ದು, ಪಕ್ಷದೊಳಗಿನ ಆಂತರಿಕ ಕಚ್ಚಾಟವನ್ನು ತಹಬದಿಗೆ ತರುವುದು ಈ ಕಾರ್ಯಕಾರಿಣಿಯ ಪ್ರಮುಖ ಕಾರ್ಯಸೂಚಿಯಾಗಲಿದೆ.











Click it and Unblock the Notifications