ಗೊತ್ತಿಲ್ಲ, ಗೊತ್ತಿಲ್ಲಾ, ಗೊತ್ತಿಲ್ಲಾನ: ಸದಾನಂದ ಭಜನೆ

ಬಿಎಸ್‌ವೈ ಹಾರಿಸಿರುವ ಯುದ್ಧ ಬಾವುಟ ಇಡೀ ನಾಡಿಗೆ ಕಾಣಿಸುತ್ತಿರುವಾಗ ಅಂಥದ್ದೇನೂ ಘಟಿಸಿಲ್ಲ ಎಂದು ಸದಾನಂದರು ಪ್ರಸನ್ನವದನರಾಗಿ ಹೇಳಿದ್ದಾರೆ. ನಿಮ್ಮ ವಿರುದ್ಧ ಸಿಡಿದೆದ್ದು ಬಿಎಸ್‌ವೈ ಬೆಂಬಲಿತ ಸಪ್ತ ಸಚಿವರು ಅವರ ನಾಯಕನ ಕೈಗೆ ತಮ್ಮ ರಾಜೀನಾಮೆ ಪತ್ರಗಳನ್ನು ನೀಡಿದ್ದಾರಲ್ಲಾ? ಎಂದು ಪ್ರಶ್ನಿಸಿದರೆ ಸದಾನಂದರು ....
ಗೊತ್ತಿಲ್ಲ. ನಿಮಗೆ (ಮಾಧ್ಯಮಗಳಿಗೆ) ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ. ಅಥವಾ ಇದು ನಿಮ್ಮದೇ ಸೃಷ್ಟಿಯಾಗಿರಬಹುದು. ನೋಡಿ ನಾನು ಹೊತ್ತಿರುವ 20 ಪ್ಲಸ್ ಚಿಲ್ರೆ ಖಾತೆಗಳ ಪೈಕಿ ಗುಪ್ತಚರ ಇಲಾಖೆಯೂ ನನ್ನ ಹಿಡಿತದಲ್ಲೇ ಇದೆ. ನೀವು ಹೇಳಿದ್ದೇ ನಿಜವಾದರೆ ನಿಮಗಿಂತ ಮೊದಲು ಅದನ್ನು ಗುಪ್ತಚರರು ನನ್ನ ಕಿವಿಗೆ ಹಾಕುತ್ತಾರೆ. ನಿಮ್ಮ ಊಹಾ ವಿಷಯಗಳಿಗೆ/ ಪ್ರಶ್ನೆಗಳಿಗೆಲ್ಲ ನಾನು ಉತ್ತರಿಸುತ್ತಾ ಕುಳಿತುಕೊಳ್ಳುವುದಿಲ್ಲ ಎಂದು ಸದಾನಂದರು ಗರಂ ಆಗಿದ್ದಾರೆ.
ಇದರ ಹೊರತಾಗಿಯೂ ನನ್ನ ಸರ್ಕಾರ ಸುಭದ್ರವಾಗಿದೆ. ರಾಜೀನಾಮೆ ಪ್ರಸ್ತಾಪವೂ ಯಾರಿಂದಲು ಬಂದಿಲ್ಲ. ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಇಲ್ಲವೇ ಇಲ್ಲ. ರಾಜ್ಯಾಧ್ಯಕ್ಷ ಈಶ್ವರಪ್ಪ ವಿದೇಶದಿಂದ ವಾಪಸಾದ ಬಗ್ಗೆಯೂ ಗೊತ್ತಿಲ್ಲ... ಹೀಗೆ ಸಾಗಿದೆ ಸದಾನಂದರ ಪ್ರತಿಕ್ರಿಯೆ. ಗಮನಾರ್ಹವೆಂದರೆ ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಪಾಳಯದ ಬಹುತೇಕ ಎಲ್ಲ ನಾಯಕರೂ ಹೀಗೇ ತಿಪ್ಪೆ ಸಾರಿಸುತ್ತಿದ್ದಾರೆ. ಅತ್ತ ಯಡಿಯೂರಪ್ಪ ಮತ್ತೊಂದು ಸುತ್ತಿನ (ಅಂತಿಮ?) ಹೋರಾಟ ಶುರು ಮಾಡಿದ್ದಾರೆ.












Click it and Unblock the Notifications