ಬಿಎಸ್ ವೈಗೆ ಅಕ್ರಮವಾಗಿ ಹಣ ನೀಡಿಲ್ಲ : ಜಿಂದಾಲ್

ಆದರೆ, ಯಡಿಯೂರಪ್ಪ ಅವರ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಕ್ಕೆ ತಲೆಬಾಗಿ ತನಿಖೆ ಸಹಕರಿಸುವುದಾಗಿ ಸಂಸ್ಥೆ ಹೇಳಿದೆ.
ಸಜ್ಜನ್ ಜಿಂದಾಲ್ ಒಡೆತನದ ಸಂಸ್ಥೆ ನೀಡಿರುವ ಹೇಳಿಕೆ ಪ್ರಕಾರ, ಕಾನೂನನ್ನು ನಾವು ಗೌರವಿಸಲೇಬೇಕು. ನಮ್ಮ ಸಂಸ್ಥೆ ಯಾವುದೇ ಅಕ್ರಮ ಎಸೆಗಿಲ್ಲ. ಯಾವುದೇ ತನಿಖೆಗೂ ನಾವು ಸಿದ್ಧ. ನಮ್ಮನ್ನು ಬಲಿಪಶು ಮಾಡಲಾಗಿದೆ ಎಂದು ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಭಾರತದ ಮೂರನೇ ಅತಿದೊಡ್ಡ ಉಕ್ಕು ಉದ್ಯಮ ಸಂಸ್ಥೆಯಾಗಿರುವ ಜಿಂದಾಲ್ ಸಮೂಹದ JSW ಸ್ಟೀಲ್, ವಿಜಯನಗರ ಉಕ್ಕು ಕಾರ್ಖನೆ ಮೂಲಕ ವಾರ್ಷಿಕವಾಗಿ 10 ಮಿಲಿಯನ್ ಟನ್ ಉತ್ಪಾದನೆ ಹೊಂದಿದೆ.
ಸಿಇಸಿ ವರದಿ ಆಧಾರದ ಮೇಲೆ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಜಿಂದಾಲ್ ಅಲ್ಲದೆ ಅದಾನಿ ಸಮೂಹ ಸಂಸ್ಥೆ ಮೇಲೂ ಗಣಿ ಗುತ್ತಿಗೆ ಲಾಭ ಪಡೆದು ಅಕ್ರಮ ಎಸೆಗಿದ ಆರೋಪ ಹೊರೆಸಲಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದ ಮಾತು. ನಮ್ಮ ಸಂಸ್ಥೆ ಯಾವುದೇ ಅಕ್ರಮ ಎಸೆಗಿಲ್ಲ ಎಂದು ಜಿಂದಾಲ್ ಸಂಸ್ಥೆ ಸಿಎಫ್ ಒ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶೇಷಗಿರಿ ರಾವ್ ಹೇಳಿದ್ದಾರೆ.
ಸಿಇಸಿ ವರದಿ ಪ್ರಕಾರ, ಯಡಿಯೂರಪ್ಪ ಅವರ ಕುಟುಂಬ ವರ್ಗಕ್ಕೆ ಮಾರ್ಚ್ 2010 ರಲ್ಲಿ ಸೌತ್ ವೆಸ್ಟ್ ಮೈನಿಂಗ್ ಕಂಪನಿ 10 ಕೋಟಿ ರು ಹಾಗೂ ಜಿಂದಾಲ್ ಸಮೂಹ ಸಂಸ್ಥೆ 5.73 ಕೋಟಿ ರು ಹಣವನ್ನು ಅಕ್ರಮವಾಗಿ ಡೊನೇಷನ್ ನೀಡಲಾಗಿದೆ ಎಂಬ ಆರೋಪವಿದೆ.












Click it and Unblock the Notifications