ಹೆತ್ತ ಹೆಣ್ಣು ಶಿಶುವನ್ನು ಬೆಂಕಿಗೆ ಹಾಕಿದ ದಂಪತಿ

ಅಖಿಲೇಶ್ ಯಾದವ್ ಸಿಎಂ ಆದಮೇಲೆ ಕ್ರೈಂ ರೇಟ್ ಕಮ್ಮಿಯಾಗುತ್ತೆ ಎಂದು ನಂಬಿದ ಜನರಿಗೆ ದಿನಕ್ಕೊಂದು ಹೊಸ ಹೊಸ ಬಗೆ ಕ್ರೈಂ ಸುದ್ದಿಗಳು ಬರುತ್ತಿರುವುದು ಆತಂಕ ಹುಟ್ಟಿಸಿದೆ.
ಯಾವುದೋ ತಾಂತ್ರಿಕ ಬಾಬಾನೊಬ್ಬನ ಮಾತು ಕೇಳಿಕೊಂಡು 6 ತಿಂಗಳ ಹೆಣ್ಣ ಮಗುವನ್ನು ತಮ್ಮ ಜಮೀನಿನಲ್ಲಿ ಸುಡಲು ಯತ್ನಿಸಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಏನು ಆಗಿಲ್ಲ. ಜೀವಂತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
35 ವರ್ಷದ ಭಾರತಿ ರಾಣಿ ಹಾಗೂ ಆಕೆ ಪತಿ ದಿನೇಶ್ ಕುಮಾರ್ ಅವರು ತಮ್ಮ ಜಮೀನಿನಲ್ಲಿ ಒಣಗಿದ ಹುಲ್ಲಿನ ರಾಶಿ ನಡುವೆ ತಮ್ಮ ಹೆಣ್ಣು ಮಗುವನ್ನು ಹಾಕಿ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದರು.
ಆದರೆ, ಇವರ ಚಲನವಲನವನ್ನು ಗಮನಿಸುತ್ತಿದ್ದ ಸ್ಥಳೀಯರೊಬ್ಬರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಗುವಿನ ದಹನವನ್ನು ತಪ್ಪಿಸಿ, ಪ್ರಾಣ ಉಳಿಸಿದ್ದಾರೆ. ದಂಪತಿಗಳು ಈಗ ಪೊಲೀಸರ ವಶದಲ್ಲಿದ್ದಾರೆ. ತಾಂತ್ರಿಕ ಬಾಬಾನನ್ನು ಇನ್ನೂ ಬಂಧಿಸಿಲ್ಲ.
ದಂಪತಿಗಳ ಮೊದಲ ಮಗುವೊಂದು ವಿಚಿತ್ರ ಕಾಯಿಲೆಗೆ ತುತ್ತಾಗಿ ಅಸುನೀಗಿತ್ತು. ಈಗಿರುವ ಹೆಣ್ಣು ಮಗುವನ್ನು ಬಲಿ ಕೊಟ್ಟರೆ ಮುಂದೆ ನಿಮಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಬಾಬಾ ಹೇಳಿದ ಮಾತನ್ನು ನಂಬಿಕೊಂಡು ಮಗುವನ್ನು ದಹಿಸಲು ದಂಪತಿಗಳು ಮುಂದಾಗಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications