ನಾಯಕತ್ವ ಸಮಸ್ಯೆಗೆ ಇತಿಶ್ರೀ ಹಾಡಿದ ಸೋನಿಯಾ

ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ 105ನೇ ವರ್ಧಂತಿಯ ಪ್ರಯುಕ್ತ ಗುರುವಂದನೆ ಸಲ್ಲಿಸಲೆಂದು ತುಮಕೂರಿಗೆ ಆಗಮಿಸಿದ್ದ ಸೋನಿಯಾ ಗಾಂಧಿ, ಗುರುವಂದನೆಯ ನಂತರ ಬಿರ್ಲಾ ಆಡಿಟೋರಿಯಂನಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯದ ಬಗ್ಗೆ ಚರ್ಚಿಸಿದರು.
ಸಮಯದ ಅಭಾವವಿದ್ದರಿಂದ ಸಭೆ ಹೆಚ್ಚು ಕಾಲ ನಡೆಯಲಿಲ್ಲ. ವಿರೋಧ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರ ಭಾಷಣಕ್ಕೆ ಕತ್ತರಿ ಹಾಕಲಾಯಿತು. ಕರ್ನಾಟಕದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಮತ್ತು ರಾಜ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು, ಬೆಂಗಳೂರಿಗೆ ತ್ವರಿತವಾಗಿ ಆಗಮಿಸಿ, ಅಲ್ಲಿಂದ ನವದೆಹಲಿಗೆ ತೆರಳಿದರು.
ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿರುವುದರಿಂದ ಕಾಂಗ್ರೆಸ್ ಈಗಾಗಲೆ ಸಿದ್ಧತೆಯಲ್ಲಿ ತೊಡಗಿದೆ. ಆದರೆ, ಬಿಜೆಪಿಯಂತೆ ಕಾಂಗ್ರೆಸ್ಸಿನಲ್ಲಿಯೂ ಯಾವ ನಾಯಕತ್ವದ ಸಮಸ್ಯೆ ತಲೆದೋರಿದೆ. ಸಿದ್ದರಾಮಯ್ಯ, ಎಸ್ಎಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಆರ್ ವಿ ದೇಶಪಾಂಡೆ, ವೀರಪ್ಪ ಮೊಯ್ಲಿ ಮುಂತಾದ ನಾಯಕರು ಚುನಾವಣಾ ರಥದ ಲಗಾಮು ಹಿಡಿಯಲು ತುದಿಗಾಲಲ್ಲಿ ನಿಂತಿದ್ದಾರೆ.
ಈ ಗೊಂದಲಗಳಿಗೆ ಸದ್ಯಕ್ಕೆ ಇತಿಶ್ರೀ ಹಾಡಿರುವ ಸೋನಿಯಾ ಗಾಂಧಿ, ಪಕ್ಷದ ಬಲವರ್ಧನೆಗೆ ಗಮನ ನೀಡಿ, ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಸಿದ್ಧತೆ ಆರಂಭಿಸಿ ಮತ್ತು ಚುನಾವಣೆ ಎದುರಿಸಿ ಎಂದು ನಾಯಕರ ಕಿವಿ ಹಿಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ನಾಯಕರು ಯಾರೇ ಆಗಿರಲಿ, ಬರ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿರುವ ಸೋನಿಯಾ ಬರ ಪರಿಹಾರಕ್ಕಾಗಿ ಏನಾದರೂ ಕ್ರಮ ತೆಗೆದುಕೊಂಡರೆ ಸಾಕು ಎಂದು ಮತದಾರರು ಸೋನಿಯಾರತ್ತ ನೋಡುತ್ತಿದ್ದಾರೆ.












Click it and Unblock the Notifications