ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿಹೀನನ ಮನೆಯ ಜ್ಯೋತಿ ಕಂಡ ಸೋನಿಯಾ

By Prasad
|
Google Oneindia Kannada News

Sonia hails Siddaganga Seer's social service
ತುಮಕೂರು, ಏ. 28 : ಜಾತಿರಹಿತ ಸಮಾಜಕ್ಕಾಗಿ ಹೋರಾಡಿ ಸಾಮಾಜಿಕ ನ್ಯಾಯಕ್ಕಾಗಿ 900 ವರ್ಷಗಳ ಹಿಂದೆ ಕ್ರಾಂತಿಯನ್ನು ಮಾಡಿದ ಜಗಜ್ಯೋತಿ ಬಸವೇಶ್ವರ ಅವರು ನಡೆದ ಹಾದಿಯಲ್ಲಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನಡೆಯುತ್ತಿದ್ದಾರೆ. ಶೈಕ್ಷಣಿಕ ಮಹತ್ವವನ್ನು ಇಡೀ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಶ್ರೀಗಳು ಸಾರಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಡಿ ಹೊಗಳಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಅವರು ಶ್ರೀ ಶಿವಕುಮಾರ ಸ್ವಾಮೀಜಿಗಳು 105ನೇ ಜನ್ಮದಿನದ ಪ್ರಯುಕ್ತ ಗುರುವಂದನೆ ಸಲ್ಲಿಸಲಿಕ್ಕಾಗಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಗುರುಗಳ ಆಶೀರ್ವಚನ ಪಡೆದರು. ಮಕ್ಕಳಿಗೆ ಶಿಕ್ಷಣ ನೀಡಲು ಕಳೆದ 80 ವರ್ಷಗಳಿಂದ ಶ್ರಮಿಸುತ್ತಿರುವ ಶಿವಕುಮಾರ ಸ್ವಾಮೀಜಿಗಳ ಕೈಂಕರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

'ಎಲ್ಲರಿಗೂ ನಮಸ್ಕಾರ' ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಸೋನಿಯಾ, ಶ್ರೀಗಳ ಪಾದಾರವಿಂದಗಳಿಗೆ ಶರಣು ಶರಣಾರ್ಥಿ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಸಿದ್ಧಗಂಗಾ ಮಠದ ಸಾಧನೆ ಅಪಾರ. ನಾನಾ ಜಾತಿ, ಭಾಷೆಯ ಜನರು ನೆಲೆಸಿರುವ ಈ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ದೊರೆಯಬೇಕೆಂದರೆ, ಬಡತನ ನಿರ್ಮೂಲವಾಗಬೇಕಿದ್ದರೆ, ಜಾತ್ಯತೀತ ಸಮಾಜ ನಿರ್ಮಾಣವಾಗಬೇಕಿದ್ದರೆ ಶಿಕ್ಷಣ ತೀರ ಅಗತ್ಯವಿದೆ ಎಂದು ಅವರು ವಿದ್ಯಾರ್ಜನೆಯ ಮಹತ್ವ ಸಾರಿದರು.

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಈಗ ಕಡ್ಡಾಯ ಮಾಡಲಾಗಿದೆ. 6 ವರ್ಷಗಳಿಂದ 13 ವರ್ಷಗಳ ಒಳಗಿನ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗಬೇಕಾಗಿದೆ. ವಿಶ್ವದಾದ್ಯಂತ ಶಿಕ್ಷಣ ಮತ್ತು ಆಧ್ಯಾತ್ಮಿಕತೆಯ ಮಹತ್ವ ಸಾರುತ್ತಿರುವ ಅವರಿಗೆ ಗುರುವಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ನನ್ನ ಸೌಭಾಗ್ಯ ಎಂದು ಸೋನಿಯಾ ಗಾಂಧಿ ನುಡಿದರು.

ಸಿದ್ಧಗಂಗಾ ಶ್ರೀಗಳ ಆಶೀರ್ವಚನ : 'ಈ ಸಂದರ್ಭದಲ್ಲಿ ಹೆಚ್ಚಿಗೆ ಮಾತಾಡುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ' ಎಂದು ಅತ್ಯಂತ ಸ್ಪಷ್ಟವಾಗಿ, ಅಸ್ಖಲಿತ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಭಾಷಣ ಮಾಡಿದ ಶ್ರೀ ಶಿವಕುಮಾರ ಸ್ವಾಮೀಜಿಗಳು, "ಇಂದಿನ ಸಂದರ್ಭದಲ್ಲಿ ಎಲ್ಲರೂ ಭರತಖಂಡ ನನ್ನದು, ಭಾರತಮಾತೆ ನನ್ನ ತಾಯಿ ಎಂದು ಹೆಮ್ಮೆ ಪಡುವಂತಹ ಕೆಲಸ ಮಾಡಬೇಕಾಗಿದೆ, ಭರತಖಂಡ ಇನ್ನೂ ಉಜ್ವಲವಾಗಿ ಬೆಳಗಬೇಕಾಗಿದೆ" ಎಂದು ಇಡೀ ಜಗತ್ತಿಗೆ ಸಂದೇಶ ಸಾರಿದರು.

ಮೊದಲು ಭರತಖಂಡ ಬಲಿಷ್ಠವಾಗಿತ್ತು, ಅನ್ಯಾಯ, ಭ್ರಷ್ಟಾಚಾರ ಮುಕ್ತವಾಗಿತ್ತು. ಆಧ್ಯಾತ್ಮಿಕತೆ ಮತ್ತು ಕ್ರಿಯಾಶೀಲತೆಯ ದ್ಯೋತಕವಾಗಿತ್ತು. ಆದರೆ, ಈಗ ವಿಜ್ಞಾನ ಯುಗದಲ್ಲಿ ಶಾಂತಿಯಿಲ್ಲ, ಜನರಿಗೆ ನೆಮ್ಮದಿಯಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲವಾಗುತ್ತಿದೆ. ಇದನ್ನು ಅರಿತು ಅತ್ಯಂತ ಜವಾಬ್ದಾರಿಯಿಂದ, ಕರ್ತವ್ಯಶೀಲರಾಗಿ ಎಲ್ಲರೂ ಭರತಖಂಡಕ್ಕಾಗಿ ದುಡಿಯಬೇಕಾಗಿದೆ. ಕ್ಷಮೆ ಎಂಬುದು ಭಾರತದ ಕೊಡುಗೆ. ಇದನ್ನು ಜನರು ಚೆನ್ನಾಗಿ ಅರ್ಥಮಾಡಿಕೊಂಡು ಬಲಾಢ್ಯ ರಾಷ್ಟ್ರಕ್ಕಾಗಿ ಜನರು ಸಂಕಲ್ಪ ಮಾಡಬೇಕಾಗಿದೆ. ಭಾರತದ ಪರಾವಲಂಬತನ ಹೋಗಲಾಡಿಸಬೇಕಾಗಿದೆ ಎಂದು ಶ್ರೀಗಳು ಕರೆ ನೀಡಿದರು.

ಶ್ರೀಗಳಿಗೆ ಗುರುವಂದನೆ ಸಲ್ಲಿಸುವ ಮುನ್ನ ಆದಿಚುಂಚನಗಿರಿ ಮಠಾಧಿಪತಿ ಶ್ರೀ ಬಾಲಗಂಗಾಧರ ಸ್ವಾಮೀಜಿ, ಸುತ್ತೂರು ಮಠದ ಶ್ರೀಗಳಾದ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಇನ್ನೂ ನೂರುಕಾಲ ಬಾಳಿ, ಲಕ್ಷಲಕ್ಷ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಲಿ ಎಂದು ಹಾರೈಸಿದರು. ವೇದಿಕೆಯ ಮೇಲೆ ರಾಜಕಾರಣಿಗಳಿಗೆ ಅವಕಾಶ ಕಲ್ಪಿಸಿರಲಿಲ್ಲ. ವೇದಿಕೆಯ ಬಲಭಾಗಕ್ಕೆ ಅವರಿಗೆ ಆಸನ ನೀಡಲಾಗಿತ್ತು. ಅನೇಕ ಮಠದ ಸ್ವಾಮೀಜಿಗಳು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಪ್ಪು ಬಾವುಟ ಪ್ರದರ್ಶನ : ಸೋನಿಯಾ ಗಾಂಧಿ ಭಾಷಣ ಆರಂಭಿಸುತ್ತಿದ್ದಂತೆ ಸಾರ್ವಜನಿಕರಲ್ಲಿ ಕುಳಿತಿದ್ದ ಮಹಿಳೆಯೊಬ್ಬಳು ಸೋನಿಯಾ ವಿರುದ್ಧ ಕೂಗುತ್ತ ಕಪ್ಪು ಬಾವುಟ ಪ್ರದರ್ಶಿಸಿದರು. ಪೊಲೀಸರು ಬಂದು ಆಕೆಯನ್ನು ನಿಗ್ರಹಿಸಲು ಯತ್ನಿಸಿದರೂ ಪ್ರತಿಭಟನೆ, ಧಿಕ್ಕಾರ ಇನ್ನೂ ಹೆಚ್ಚುತ್ತಿತ್ತು. ಬಲವಂತವಾಗಿ ಆಕೆಯನ್ನು ಸಮಾರಂಭದಿಂದ ಪೊಲೀಸರು ಹೊರಹಾಕಬೇಕಾಯಿತು.

English summary
AICC president Sonia Gandhi offered Guruvandana to Siddaganga Seer Dr Shivakumar Swamiji, Tumkur. On the occasion of 105th birthday of Shivakumar Swamiji, she outlined importance of free education and the role played by seer in achieving the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X