ಭೂಕಂಪ : ಕರ್ನಾಟಕ ಸೇಫ್ ಎಂದ ವಿಜ್ಞಾನಿಗಳು

ಬೆಂಗಳೂರು ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಕಂಪನ ಆಗಿರುವುದು ಭೂಕಂಪ ಅಲ್ಲ, ಆದರೆ ಅದು ಇಂಡೋನೇಷ್ಯಾದಲ್ಲಿ ಭೂಕಂಪ ಆಗಿದ್ದರ ಆಫ್ಟರ್ ಎಫೆಕ್ಟ್ ಎಂದು ಪುಟ್ಟಣ್ಣಯ್ಯ ಹೇಳಿದ್ದಾರೆ. ಅಲ್ಲಲ್ಲಿ ಕಂಪಿಸಿದ ಅನುಭವ ಆಗಿದ್ದರೂ ಕಟ್ಟಡಗಳು ಉರುಳಿಬೀಳುವ ಸಂಭವನೀಯತೆ ಕಡಿಮೆ. ಪೂರ್ವ ಕರಾವಳಿಯ ಇತರ ರಾಜ್ಯಗಳಿಗಿಂತ ಕರ್ನಾಟಕ ಹೆಚ್ಚು ಸೇಫ್ ಆಗಿದೆ ಎಂದು ಅವರು ನುಡಿದಿದ್ದಾರೆ.
ಸುಮಾತ್ರಾದ ತೀರದಲ್ಲಿ ಸುಮಾರು 3.40 ಗಂಟೆಯ ಹೊತ್ತಿಗೆ ಸುನಾಮಿ ಅಪ್ಪಳಿಸಬಹುದು ಎಂದು ಹೇಳಲಾಗಿದೆ. ಸುನಾಮಿ ಅಲೆಗಳು ಇಂಡೇನೇಷ್ಯಾದಿಂದ ಸಾಗಿ ಅಂಡಮಾನ್ ನಿಕೋಬಾರ್ ದ್ವೀಪದ ಮೇಲೆಯೂ ಅಪ್ಪಳಿಸುವ ಸಂಭವನೀಯತೆಯಿದೆ. ಚೆನ್ನೈಗೆ ಸಂಜೆ 4.45ರ ಹೊತ್ತಿಗೆ ಸುನಾಮಿ ಬರುವ ಸಂಭವನೀಯತೆಯಿದ್ದು, ಪ್ರಭಾವ ಅಷ್ಟೊಂದಿರುವುದಿಲ್ಲ ಎಂದು ಪುಟ್ಟಣ್ಣಯ್ಯ ತಿಳಿಸಿದ್ದಾರೆ.
ಇಂಡೋನೇಷ್ಯಾ ದೂರವಿರುವುದರಿಂದ ಮತ್ತು ಒಂದು ಬಾರಿ ಮಾತ್ರ ಭೂಕಂಪ ಆಗಿದ್ದರಿಂದ ಕಳೆದ ಬಾರಿಯಂತೆ ಸರ್ವನಾಶ ಆಗುವ ಸಾಧ್ಯತೆ ಕಡಿಮೆ. ಮಂಗಳೂರರಿಗೆ ಇದೇ ಸುನಾಮಿ ಅಲೆಗಳು 8.35 ನಿಮಿಷಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಆದರೆ, ಕಡಲ ತೀರದಲ್ಲಿರುವ ಜನತೆ ಸ್ಥಳ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳುವುದು ಹಿತ ಎಂದು ಸಲಹೆ ನೀಡಲಾಗಿದೆ.
ಇದೀಗ ಬಂದಿರುವ ಸುದ್ದಿಯ ಪ್ರಕಾರ, ಭಾರತದಲ್ಲಿ ಸುನಾಮಿಯ ಎಚ್ಚರಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು, ಜನರು ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಇಲಾಖೆ ಹೇಳಿದೆ. ಸುಮಾತ್ರಾದಲ್ಲಿಯೂ ಸುನಾಮಿ ಎಚ್ಚರಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.












Click it and Unblock the Notifications