ಮುಂದಿನ ಬಾರಿಗೂ ಸದಾನಂದ ಗೌಡರೇ ಸಿಎಂ

Posted By:
Subscribe to Oneindia Kannada
sadananda-gowda-blessed-to-be-cm-next-term-also
ಸುಳ್ಯ, ಏ.11: 'ಸದ್ಯ ಇನ್ನು ಎಂಟ್ಹತ್ತು ತಿಂಗಳು ನಾನೇ ಸಿಎಂ ಆಗಿ ಉಳಿದರೆ ಸಾಕಪ್ಪಾ' ಎಂದು ಸ್ವತಃ ಸದಾನಂದ ಗೌಡರೇ ಬೇಡಿಕೊಳ್ಳುತ್ತಿದ್ದರೂ ಆ ಕಾಣದ ದೇವರು ಮುಂದಿನ ಬಾರಿಗೂ ನೀನೇ ಮುಖ್ಯಮಂತ್ರಿಯಾಗುತ್ತೀಯಾ ಎಂದು ವರ ನೀಡಿದೆ. ಇದರಿಂದ ಗೌಡರು ಸಹಜವಾಗಿಯೇ ಫುಲ್ ಖುಷ್ ಆಗಿದ್ದಾರೆ, ಆದರೆ ಇದನ್ನು ನಿಷ್ಫಲಗೊಳಿಸಲು ಅತ್ತ ಯಡಿಯೂರಪ್ಪ ಯಾವ ದೇವರ ಮೊರೆ ಹೋಗುತ್ತಾರೋ ಕಾಲವೇ ಹೇಳಬೇಕು!

ಹೀಗೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ- ಡಾಟಿ ದಂಪತಿಗೆ ಆಭಯ ನೀಡಿರುವುದು ಸದಾನಂದರ ಹುಟ್ಟೂರಾದ ದೇವರಗುಂಡ ಬೆಳ್ಳಿಪ್ಪಾಡಿ ತರವಾಡಿನ ಧರ್ಮ ದೈವ ರುದ್ರ ಚಾಮುಂಡಿ!

ಭಾನುವಾರ ತಾಲೂಕಿನಲ್ಲಿ ಭರಪೂರ ಮಳೆಯಾಗಿತ್ತು. ವಾತಾವರಣ ಆಹ್ಲಾದಕರವಾಗಿತ್ತು. ದೇವರ ಅಭಯ ಸದಾನಂದರ ಆನಂದವನ್ನು ಮತ್ತಷ್ಟು ಹೆಚ್ಚಿಸಿತು. ಸೋಮವಾರ ರಾತ್ರಿ ಪಂಜುರ್ಲಿ, ಪಿಲಿಭೂತ ಮತ್ತಿತರ ದೈವಗಳ ನಡಾವಳಿ ನಡೆಯಿತು. ಮಂಗಳವಾರ ಧರ್ಮ ದೈವಗಳ ನಡಾವಳಿ ನಡೆಯಿತು. ಎರಡೂ ದಿನವೂ ಮುಖ್ಯಮಂತ್ರಿ ಇದ್ದರು.

'ದೇವರಗುಂಡ ಹೆಸರಿನಲ್ಲೇ ದೇವತ್ವವಿದೆ. ಬೆನ್ನಿಗೆ ರಾಜ ಮುದ್ರಿಕೆಯೂ ಇದೆ. ನನ್ನ ಅಭಯದಿಂದ ನಿನ್ನ ಸಂಸಾರ ಸುಖ-ಸಂತೋಷದಿಂದಿದೆ. ಉನ್ನತ ಅಧಿಕಾರವೂ ಪ್ರಾಪ್ತವಾಗಿದೆ. ಮುಂದೆಯೂ ನಿನ್ನ ನೆರಳಾಗಿ ಬೆನ್ನಿಗಿರುತ್ತೇನೆ. ಆಡಳಿತ ನಡೆಸುವಾಗ ಯಾವುದೇ ಭಯ, ಅತಂಕ ಬೇಡ. ದೈವದ ಅನುಗ್ರಹ ಸದಾ ಇದೆ' ಎಂದು ಸದಾನಂದರ ಉಪಸ್ಥಿತಿಯಲ್ಲಿ ದೈವ ಇಡೀ ಕುಟುಂಬಕ್ಕೆ ನುಡಿ ಕೊಟ್ಟಿದೆ.

ಮಂಗಳವಾರ ನಡೆದ ತರವಾಡಾದ ಬೆಳ್ಳಿಪ್ಪಾಡಿ-ದೇವರಗುಂಡ ಕುಟುಂಬದ ಧರ್ಮದೈವ ಹಾಗೂ ಉಪದೈವಗಳ ಮೂರನೇ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ಧರ್ಮ ನಡಾವಳಿಯಲ್ಲಿ ಸದಾನಂದ ಗೌಡರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು.

ಬಳಿಕ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡಿದ ಸದಾನಂದರು ''ಪ್ರತಿ ಬಾರಿಯೂ ದೈವದ ನಡಾವಳಿಗೆ ತಪ್ಪದೇ ಭಾಗವಹಿಸುತ್ತಿದ್ದೇನೆ. ಈ ಬಾರಿ ಮುಖ್ಯಮಂತ್ರಿಯಾಗಿ ಹೆಚ್ಚಿನ ಜವಾಬ್ದಾರಿ ಇದೆ. ರಾಜ್ಯದ ಜನತೆಗಾಗಿ ಪ್ರಾರ್ಥಿಸಿದೆ. ಮಂಡೆಕೋಲಿನಂತಹ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗನೂ ಮುಖ್ಯಮಂತ್ರಿಯಾಗಿ ಬೆಳೆಯಬಲ್ಲ ಎಂದು ತೋರಿಸಿಕೊಟ್ಟ ಕೀರ್ತಿ ಭಾರತೀಯ ಜನತಾ ಪಕ್ಷಕ್ಕೆ ಸಲ್ಲಬೇಕು. ನಾನು ಹೋರಾಟಗಳ ಮೂಲಕ ಬೆಳೆದವನು. ರಾಜಕೀಯವಾಗಿ ಸಿಕ್ಕ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಂಡಿದ್ದೇನೆ' ಎಂದು ಹೇಳಿದರು.

ರಾಜ್ಯದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಪಾರದರ್ಶಕ ಆಡಳಿತ ನಡೆಸುವುದು, ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕಿ, ಆಡಳಿತ ಸುಧಾರಣೆ ತರುವುದು ನನ್ನ ಗುರಿ ಎಂದರು. ಭ್ರಷ್ಟಾಚಾರ ಎಲ್ಲಿ ಆರಂಭವಾಗಿದೆಯೋ ಅಲ್ಲೇ ಅದಕ್ಕೆ ಕಡಿವಾಣ ಹಾಕಬೇಕಾಗಿದೆ. ಮುಖ್ಯಮಂತ್ರಿ ಕಚೇರಿಯೂ ಇದಕ್ಕೆ ಹೊರತಾಗಿಲ್ಲ. ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಭ್ರಷ್ಟಾಚಾರ ನಿಂತರೆ ಉಳಿದ ಕಡೆ ತನ್ನಿಂದ ತಾನೆ ಅದಕ್ಕೆ ಕಡಿವಾಣ ಬೀಳುತ್ತದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka CM Sadananda Gowda was blessed to be CM for next term also in his native Sulya by Devaragunda Bellippadi Taravadi Gid Rudra Chamundi on April 10. D. V. Sadananda Gowda hails from the Devaragunda family of Mandekolu Village of Sullia Taluk.
Please Wait while comments are loading...